Advertisement

ಖುದ್ದು ಗುಂಡಿ ಮುಚ್ಚಿಸಿದ ಜಾರ್ಜ್‌

11:43 AM Oct 21, 2017 | |

ಬೆಂಗಳೂರು: ಕಳೆದ ಮೂರು ದಿನಗಳಿಂದ ಮಳೆ ಬಿಡುವು ನೀಡಿರುವುದರಿಂದ ಬಿಬಿಎಂಪಿ ಅಧಿಕಾರಿಗಳು ಸಮರೋಪಾದಿಯಲ್ಲಿ ರಸ್ತೆಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಿದ್ದು, ಶುಕ್ರವಾರ ಮಧ್ಯರಾತ್ರಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ನಗರದ ಹಲವು ಪ್ರದೇಶಗಳಿಗೆ ಭೇಟಿ ನೀಡಿ ದುರಸ್ತಿ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿದರು.

Advertisement

ಸಚಿವ ಜಾರ್ಜ್‌, ಮೇಯರ್‌ ಆರ್‌.ಸಂಪತ್‌ರಾಜ್‌, ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಶುಕ್ರವಾರ ಮಧ್ಯರಾತ್ರಿ 2 ಗಂಟೆಗೆ ಚಾಲುಕ್ಯ ವೃತ್ತದಿಂದ ಪರಿಶೀಲನೆ ಆರಂಭಿಸಿದರು. ಸುಮಾರು 200ಕ್ಕೂ ಹೆಚ್ಚು ಗುಂಡಿಗಳನ್ನು ಖುದ್ದು ಸ್ಥಳದಲ್ಲಿದ್ದು ಮುಚ್ಚಿಸಿದ ಅವರು, ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೊದಲಿಗೆ ಬಳ್ಳಾರಿ ರಸ್ತೆಯ ವಿಂಡ್ಸರ್‌ ಮ್ಯಾನರ್‌ ಬಳಿ ಪರಿಶೀಲನೆ ನಡೆಸಿದ ಅವರು ಗುಂಡಿಗಳನ್ನು ಕಂಡು ಸ್ಥಳದಲ್ಲಿಯೇ ಗುಂಡಿ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ನಂತರ ಗಂಗೇನಹಳ್ಳಿಯಲ್ಲಿ ರಸ್ತೆಗುಂಡಿ ದುರಸ್ತಿ ಕಾಮಗಾರಿ ವೀಕ್ಷಿಸಿದ ಅವರು, ಗುಂಡಿಗಳ ಸಂಖ್ಯೆ, ದುರಸ್ತಿ ವಿವರವನ್ನು ಅಧಿಕಾರಿಗಳಿಂದ ಪಡೆದರು. ಜತೆಗೆ ಕೂಡಲೇ ಈ ಭಾಗದ ರಸ್ತೆಗುಂಡಿಗಳನ್ನು ದುರಸ್ತಿಗೊಳಿಸಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ನಂತರ ಬಿಇಎಲ್‌ ರಸ್ತೆಯಲ್ಲಿ ಪೈಥಾನ್‌ ಯಂತ್ರದಿಂದ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲಿಸಿದರು. ನಂತರ ಹೆಬ್ಟಾಳ ಮೇಲ್ಸೇತುವೆಯಲ್ಲಿ ಸೃಷ್ಟಿಯಾಗಿರುವ ರಸ್ತೆಗುಂಡಿಗಳನ್ನು ಆದ್ಯತೆಯ ಮೇರೆಗೆ ಸ್ಥಳದಲ್ಲಿಯೇ ನಿಂತು ಮುಚ್ಚಿಸಿದ ಸಚಿವರು, ರಸ್ತೆಗುಂಡಿಗೆ ಕೇವಲ ಡಾಂಬರು ಹಾಕಿ ಮುಚ್ಚದೆ ವೈಜ್ಞಾನಿಕವಾಗಿ ಗುಂಡಿ ತೆಗೆದು ಮುಚ್ಚುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಬಿಇಎಲ್‌ನಿಂದ ಎಂ.ಎಸ್‌.ಪಾಳ್ಯದವರೆಗೆ ನಗರೋತ್ಥಾನ ಅನುದಾನದಡಿ ಅಭಿವೃದ್ಧಿಪಡಿಸಿರುವ ಆರು ಕಿ.ಮೀ. ಉದ್ದದ ರಸ್ತೆಯಲ್ಲಿ ಒಂದು ಗುಂಡಿಯೂ ಸೃಷ್ಟಿಯಾಗದಿರುವ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಉದಾಸೀನ ತೋರಿದ್ರೆ ಕ್ರಮ: ಎಚ್ಚರಿಕೆ: ಸಂಜಯನಗರದ ಬಳಿ ರಸ್ತೆಗುಂಡಿ ಮುಚ್ಚುವ ಕಾಮಗಾರಿ ಪರಿಶೀಲಿಸಿ ಸಚಿವ ಜಾರ್ಜ್‌, ರಸ್ತೆಗುಂಡಿ ವೈಜ್ಞಾನಿಕ ದುರಸ್ತಿ ಬಗ್ಗೆ ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜತೆಗೆ ಅದೇ ರೀತಿ ಮುಚ್ಚಲಾಗುತ್ತಿದೆ ಎಂಬುದನ್ನು ಗಮನಿಸಿದರು. ನಗರದ ಯಾವುದೇ ಭಾಗದಲ್ಲಿ ಗುಂಡಿಗಳನ್ನು ಮುಚ್ಚುವಲ್ಲಿ ಗುತ್ತಿಗೆದಾರರಾಗಲಿ, ಅಧಿಕಾರಿಗಳಾಗಿ ಉದಾಸೀನ ತೋರಿದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 

5 ತಿಂಗಳಲ್ಲಿ ರಸ್ತೆಗಳಿಗೆ ಹೊಸ ರೂಪ: ಈಗಾಗಲೇ ನಗರದಲ್ಲಿನ ಶೇ.90ರಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಮಳೆ ಬಾರದಿದ್ದರೆ ವಾರದೊಳಗೆ ಎಲ್ಲ ರಸ್ತೆಗುಂಡಿಗಳನ್ನು ಮುಚ್ಚಲಾಗುವುದು. ದಾಖಲೆ ಮಳೆಯಿಂದಾಗಿ ನಗರದ ರಸ್ತೆಗಳು ಹಾಳಾಗಿವೆ. ಈಗಾಗಲೇ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ. ಪ್ರಮುಖ ರಸ್ತೆಗಳ ಡಾಂಬರೀಕರಣ ಹಾಗೂ ವೈಟ್‌ಟಾಪಿಂಗ್‌ ರಸ್ತೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಐದು ತಿಂಗಳಲ್ಲಿ ನಗರದ ರಸ್ತೆಗಳು ಹೊಸ ರೂಪ ಪಡೆದುಕೊಳ್ಳಲಿವೆ ಎಂದು ಜಾರ್ಜ್‌ ತಿಳಿಸಿದರು.

ಗುರುವಾರ ಮಧ್ಯರಾತ್ರಿ 2 ಗಂಟೆಗೆ ಆರಂಭವಾದ ಪರಿಶೀಲನೆ ಶುಕ್ರವಾರ ಮುಂಜಾನೆ 6 ಗಂಟೆ ಹೊತ್ತಿಗೆ ಮುಕ್ತಾಯವಾಯಿತು. ಶುಕ್ರವಾರ ನಸುಕಿನ 3.45ರ ಹೊತ್ತಿನಲ್ಲಿ ರಾಧಾಕೃಷ್ಣ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ನಲ್ಲಿ ಸಚಿವರು, ಮೇಯರ್‌, ಆಯುಕ್ತರು, ಅಧಿಕಾರಿಗಳು ಬಿಸಿಬೇಳೆಬಾತ್‌, ಚಹಾ ಸವಿದರು.

Advertisement

Udayavani is now on Telegram. Click here to join our channel and stay updated with the latest news.

Next