Advertisement
ಮಂಗಳೂರಿನಲ್ಲಿ ಜನಿಸಿದ್ದ ಧೀಮಂತ ನಾಯಕ ಜಾರ್ಜ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. 2004ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಚುನಾವಣೆಯಲ್ಲಿ ಸೋತ ಬಳಿಕ ಫೆರ್ನಾಂಡಿಸ್ ಅವರು ರಾಜಕೀಯ ಮುಖ್ಯ ಭೂಮಿಕೆಯಿಂದ ಕ್ರಮೇಣ ಮರೆಯಾಗಿದ್ದರು. ಇಳಿ ವಯಸ್ಸು, ಅನಾರೋಗ್ಯವೂ ಅವರನ್ನು ಬಾಧಿಸಿ, 2010ರ ಬಳಿಕ ಅವರಿಗೆ ಮರೆಗುಳಿ ಕಾಯಿಲೆ ಶುರುವಾಗಿತ್ತು. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಅಭೂತಪೂರ್ವ ವ್ಯಕ್ತಿತ್ವ ಹೊಂದಿದ್ದ ಜಾರ್ಜ್, ದಿ.ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ 1998-2004ರ ನಡುವೆ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇವರ ಅವಧಿಯಲ್ಲೇ ಕಾರ್ಗಿಲ್‌ನಲ್ಲಿ ಪಾಕಿಸ್ತಾನ ದುಸ್ಸಾಹಸ ನಡೆಸಿ ಮುಖಭಂಗಕ್ಕೆ ಈಡಾಗಿತ್ತು. ಜತೆಗೆ ವಾಜಪೇಯಿ ಸರ್ಕಾರ ಪೋಖ್ರಾನ್‌ನಲ್ಲಿ ಕೈಗೊಂಡ ಪರಮಾಣು ಪರೀಕ್ಷೆಯಲ್ಲಿಯೂ ಜಾರ್ಜ್ ಪ್ರಮುಖ ಪಾತ್ರ ವಹಿಸಿದ್ದರು. ದಿ.ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷದ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿಯೂ ಫೆರ್ನಾಂಡಿಸ್ ಕಾರ್ಯನಿರ್ವಹಿಸಿದ್ದರು. ರಾಜಕೀಯವಾಗಿ ಹಿಂದೂ ಸಂಘಟನೆಗಳ ಹಿನ್ನೆಲೆ ಇರುವ ಬಿಜೆಪಿ ಮತ್ತು ಸಮಾಜವಾದದ ಚಳವಳಿ ಆಧಾರಿತ ವಾಗಿದ್ದ ಜನತಾ ಪಕ್ಷದ ಸರ್ಕಾರಗಳಲ್ಲಿ ಸಚಿವರಾಗುವ ಮೂಲಕ 2 ಭಿನ್ನ ರಾಜಕೀಯ ಚಿಂತನೆಗಳ ಧ್ರುವಗಳಲ್ಲಿ ಕೆಲಸ ಮಾಡಿದ ಹೆಗ್ಗಳಿಕೆ ಜಾರ್ಜ್‌ರದ್ದು
ಜಾರ್ಜ್ ಪುತ್ರ ಸಿಯಾನ್ ಫೆರ್ನಾಂಡಿಸ್ ನ್ಯೂಯಾರ್ಕ್‌ನಲ್ಲಿದ್ದಾರೆ. ಅವರು ನವದೆಹಲಿಗೆ ಆಗಮಿಸಿದ ಬಳಿಕ ರಾಷ್ಟ್ರ ರಾಜಧಾನಿಯ ಲೋಧಿ ಅಂತ್ಯಸಂಸ್ಕಾರ ಕೇಂದ್ರದಲ್ಲಿ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಹೀಗಾಗಿ ಬುಧವಾರ ಅಂತಿಮ ವಿಧಿ ವಿಧಾನಗಳು ನಡೆಯುವ ಸಾಧ್ಯತೆಗಳಿವೆ. ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾದ ಜಾರ್ಜ್ ಈ ಹಿಂದೆ ತಮ್ಮನ್ನು ಹೂಳಬೇಕು ಎಂದಿದ್ದರು. ನಂತರ ತಮ್ಮನ್ನು ಸುಡಬೇಕು ಎಂದು ಅಂತಿಮ ಇಚ್ಛೆ ವ್ಯಕ್ತಪಡಿಸಿದ್ದರು. ಅದರ ಪ್ರಕಾರ, ಮೊದಲಿಗೆ ದೇಹಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ನಡೆಸಿ, ನಂತರ ಚಿತಾ ಭಸ್ಮವನ್ನು ಹೂಳಲು ನಿರ್ಧರಿಸಿದ್ದೇವೆ ಎಂದು ಜಾರ್ಜ್‌ರ ನಿಕಟವರ್ತಿ ಜಯಾ ಜೇಟ್ಲಿ ತಿಳಿಸಿದ್ದಾರೆ.
Related Articles
Advertisement
ಬಕೆಟ್ ಹಿಡಿದು ಪಾದಯಾತ್ರೆಚಿಕ್ಕಮಗಳೂರು: ಇಂದಿರಾ ಗಾಂಧಿ ವಿರುದ್ಧ ಚಿಕ್ಕಮಗಳೂರಿನಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ವೀರೇಂದ್ರ ಪಾಟೀಲ್ ಅವರ ಪರ ಪ್ರಚಾರ ಮಾಡಲು ಹಣದ ಕೊರತೆ ಎದುರಾಗಿತ್ತು. ಹೀಗಾಗಿ, ಸಾರ್ವಜನಿಕರಿಂದ ಸಹಾಯ ಕೋರಲಾಗಿತ್ತು. ಹಣ ಸಂಗ್ರಹಿಸಲು ಜಾರ್ಜ್ ಅವರೇ ಬಕೆಟ್ ಹಿಡಿದು ಪಾದಯಾತ್ರೆಯಲ್ಲಿ ಸಾಗುತ್ತಿದ್ದರು. ಹಣ ನೀಡಲು ಸಾರ್ವಜನಿಕರು ಮುಗಿ ಬೀಳುತ್ತಿದ್ದರು. ಇದೇ ರೀತಿ ಪಾದಯಾತ್ರೆ ಸಾಗುತ್ತಿರುವಾಗ ಮಳೆ ಆರಂಭವಾಯಿತು. ಜಾರ್ಜ್ ಅವರು ನೆನೆಯಬಾರದು ಎಂದು ಪಕ್ಷದ ಕಾರ್ಯಕರ್ತರು ಛತ್ರಿ ಹಿಡಿಯಲು ಬಂದಾಗ ಅದನ್ನು ನಿರಾಕರಿಸಿದ ಜಾರ್ಜ್ ಮಳೆಯಲ್ಲೇ ಪಾದಯಾತ್ರೆ ಮುಂದುವರೆಸಿದರು ಎಂದು ನೆನಸಿಕೊಳ್ಳುತ್ತಾರೆ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ. ಕ್ಯಾಸೆಟ್ಹಾಕಿ ಭಾಷಣ ಕೇಳಿದ್ದರು!
ರಾಯಚೂರು: ಜಾರ್ಜ್ ಫೆರ್ನಾಂಡಿಸ್ ತುರ್ತು ಪರಿಸ್ಥಿತಿ ಖಂಡಿಸಿ ಲೋಕಸಭೆ ಚುನಾವಣೆ ವೇಳೆ ಜಿಲ್ಲೆಯಲ್ಲೂ ಸಾಕಷ್ಟು ಪ್ರಚಾರ ನಡೆಸಿದ್ದರು. ರಾಯಚೂರು, ಕುಷ್ಟಗಿ ಸೇರಿ ವಿವಿಧೆಡೆ ಓಡಾಟ ಮಾಡಿದ್ದ ಜಾರ್ಜ್, ಇಂದಿರಾ ಗಾಂಧಿ ನಿಲುವನ್ನು ಕಟುವಾಗಿ ವಿರೋಧಿಸಿದ್ದರು. ತಮ್ಮದೇ ಯುವಪಡೆಯನ್ನು ಕಟ್ಟಿಕೊಂಡು ಪ್ರಚಾರ ಮಾಡಿದ್ದರು. ಆಗ ತಾನೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ಟೇಪ್ ರೆಕಾರ್ಡ್‌ರ್ ಕ್ಯಾಸೆಟ್‌ಗಳಲ್ಲಿ ಫೆನಾಂಡಿಸ್ ಅವರ ಭಾಷಣ ದಾಖಲಿಸಿ ಹಳ್ಳಿ ಹಳ್ಳಿಗೆ ತೆರಳಿ ಅದನ್ನು ಜನರಿಗೆ ಕೇಳಿಸಲಾಗುತ್ತಿತ್ತು.