Advertisement

ಕೆಜಿಎಫ್ ಬೆಮೆಲ್‌ ಉಳಿಸಿದ್ದೇ ಜಾರ್ಜ್‌ ಫ‌ರ್ನಾಂಡಿಸ್‌!

07:29 AM Jan 30, 2019 | |

ಕೋಲಾರ: ಚಿನ್ನದ ಗಣಿ ಮುಚ್ಚಲ್ಪಟ್ಟು ಸಂಕಷ್ಟದಲ್ಲಿದ್ದ ಕೆಜಿಎಫ್ ಕಾರ್ಮಿಕ ವರ್ಗಕ್ಕೆ ಗಾಯದ ಮೇಲೆ ಬರೆ ಎನ್ನುವಂತೆ ಬೆಮೆಲ್‌(ಭಾರತ್‌ ಅರ್ಥ್ ಮೂವರ್ಸ್‌ ಲಿಮಿಟೆಡ್‌) ನಷ್ಟದ ಕೈಗಾರಿಕೆಯಾಗಿ ಮುಚ್ಚುವ ಆತಂಕ ಎದುರಾಗಿತ್ತು. ಇಂತಹ ಸನ್ನಿವೇಶದಲ್ಲಿ ಕೆಜಿಎಫ್ನ ಬೆಮೆಲ್‌ ಕಾರ್ಖಾನೆಗೆ ಯುದ್ಧ ವಾಹನಗಳ ತಯಾರಿಕೆ ಒಪ್ಪಂದ ನೀಡಿ ಸಾರ್ವಜನಿಕ ಉದ್ದಿಮೆಯನ್ನು ಉಳಿಸಿದ ಕೀರ್ತಿ ಅಗಲಿದ ರಕ್ಷಣಾ ಸಚಿವ ಜಾರ್ಜ್‌ ಫ‌ರ್ನಾಂಡಿಸ್‌ರಿಗೆ ಸಲ್ಲಬೇಕಿದೆ.

Advertisement

ಬೆಮೆಲ್‌ಗೆ ಮುಚ್ಚುವ ಆತಂಕ: 2000ರಲ್ಲಿ ಆಗ ತಾನೇ ಕೆಜಿಎಫ್ ಚಿನ್ನದ ಗಣಿಯನ್ನು ನಷ್ಟದ ನೆಪವೊಡ್ಡಿ ಮುಚ್ಚಲಾಗಿತ್ತು. ಇದರಿಂದ ಸಾವಿರಾರು ಕಾರ್ಮಿಕ ಕುಟುಂಬಗಳು ಕೆಲಸ ಕಳೆದುಕೊಳ್ಳಬೇಕಾಗಿತ್ತು. ಇದಾದ 3-4 ವರ್ಷಕ್ಕೆ ಕೆಜಿಎಫ್ನ ಮತ್ತೂಂದು ಸಾರ್ವಜನಿಕ ಉದ್ದಿಮೆಯಾದ ಬೆಮೆಲ್‌ಗ‌ೂ ನಷ್ಟದ ಕೈಗಾರಿಕೆಯಾಗುವ ಆತಂಕ ಎದುರಾಗಿತ್ತು.

ಬೆಂಗಳೂರಿನ ಬೆಮೆಲ್‌ಗೆ ರೈಲ್ವೆ ಬೋಗಿ ತಯಾರಿಸುವ ಒಪ್ಪಂದ ಸಿಕ್ಕಿದ್ದರಿಂದ ಚೇತರಿಸಿಕೊಂಡಿತ್ತು. ಆದರೆ, ಈ ಅವಧಿಯಲ್ಲಿ ಯುದ್ಧ ವಾಹನ ಹಾಗೂ ಜೆಸಿಬಿಯಂತ ಭೂಮಿ ಹದಗೊಳಿಸುವ ವಾಹನಗಳನ್ನು ತಯಾರಿಸುತ್ತಿದ್ದ ಕೆಜಿಎಫ್ ಬೆಮೆಲ್‌ಗೆ ಯಾವುದೇ ಕೆಲಸ ಸಿಕ್ಕಿರಲಿಲ್ಲ. ಬೆಮೆಲ್‌ನ ಕಾರ್ಮಿಕರು ಕಡ್ಡಾಯವಾಗಿ ವಿಆರ್‌ಎಸ್‌ ಪಡೆದುಕೊಳ್ಳಬೇಕಾದ ಆತಂಕ ಎದುರಿಸುತ್ತಿದ್ದರು. ಈ ಹಂತದಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ಅಂದಿನ ವ್ಯವಸ್ಥಾಪಕ ನಿರ್ದೇಶಕ ನಟರಾಜನ್‌ರ ಮೂಲಕ ಕೆಜಿಎಫ್ ಬೆಮೆಲ್‌ನ ಪರಿಸ್ಥಿತಿ ವಿವರಿಸಿದ್ದರು.

ಅಂದಿನ ರಕ್ಷಣಾ ಸಚಿವ ಜಾರ್ಜ್‌ ಫ‌ರ್ನಾಂಡಿಸ್‌ ಕೆಜಿಎಫ್ ಬೆಮೆಲ್‌ ಉಳಿಸುವ ಕೆಲಸಕ್ಕೆ ಕೈಹಾಕಿದ್ದರು. ಕೋಟ್ಯಂತರ ರೂ.ಗಳ ಒಪ್ಪಂದವನ್ನು ಕೆಜಿಎಫ್ ಬೆಮೆಲ್‌ನೊಂದಿಗೆ ಏರ್ಪಡಿಸಿ ಬೆಮೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರ ಕೈಗೆ ಕೆಲಸ ಕೊಟ್ಟಿದ್ದರು. ಅಲ್ಲದೇ, ನಷ್ಟದ ಭೀತಿ ಎದುರಿಸುತ್ತಿದ್ದ ಸಾರ್ವಜನಿಕ ಉದ್ದಿಮೆಯನ್ನು ಉಳಿಸುವ ಕೆಲಸ ಮಾಡಿದ್ದರು. ಇನ್ನು ರಕ್ಷಣಾ ಸಚಿವರಾಗಿ ಖುದ್ದು ತಾವೇ ಬಂದು ಕೆಜಿಎಫ್ ಬೆಮೆಲ್‌ ಕಾರ್ಖಾನೆಯಲ್ಲಿ ಯುದ್ಧ ವಾಹನಗಳ ತಯಾರಿಕೆಗೆ ಚಾಲನೆ ನೀಡುವ ಒಪ್ಪಂದಕ್ಕೆ ಸಹಿ ಹಾಕಿ ಹೋಗಿದ್ದರು.

ಕೆಜಿಎಫ್ನ ಬೆಮೆಲ್‌ ಇಂದಿಗೂ ಸಾರ್ವಜನಿಕ ಉದ್ದಿಮೆಯಾಗಿಯೇ ಉಳಿದುಕೊಂಡಿದೆ ಎಂದರೆ ಅದಕ್ಕೆ ಜಾರ್ಜ್‌ ಫ‌ರ್ನಾಂಡಿಸ್‌ರಿಗೆ ಇದ್ದ ಕಾರ್ಮಿಕರ ಬಗೆಗಿನ ಪ್ರೀತಿ ಮತ್ತು ಸಾರ್ವಜನಿಕ ಉದ್ದಿಮೆಗಳನ್ನು ಉಳಿಸಲೇಬೇಕೆಂಬ ಛಲ ಕಾರಣ ಎಂದು ಇಂದಿಗೂ ಬೆಮೆಲ್‌ ಆಡಳಿತ ಮಂಡಳಿ ಹಾಗೂ ಕಾರ್ಮಿಕ ವರ್ಗ ಸ್ಮರಿಸಿಕೊಳ್ಳುತ್ತದೆ.

Advertisement

ಸ್ವದೇಶಿ ಎಚ್ಎಎಲ್‌ ಸಂಸ್ಥೆಗೆ ಯುದ್ಧ ವಿಮಾನ ತಯಾರಿಸಲು ಕೇಂದ್ರ ಸರ್ಕಾರ ಒಪ್ಪಂದ ನೀಡದಿರುವ ಬಗ್ಗೆ ದೇಶ ವಿದೇಶಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವಾಗ ಸ್ವದೇಶಿ ಬೆಮೆಲ್‌ ಸಂಸ್ಥೆಯನ್ನು ಉಳಿಸಿಕೊಳ್ಳಲು ಅಂದಿನ ರಕ್ಷಣಾ ಸಚಿವ ಜಾರ್ಜ್‌ ಫ‌ರ್ನಾಂಡಿಸ್‌ ಕೈಗೊಂಡಿದ್ದ ದಿಟ್ಟ ನಿಲುವು ಇಂದಿನ ರಾಜಕಾರಣಿಗಳಲ್ಲಿ ಅಪರೂಪವಾಗುತ್ತಿದೆ.

ತುರ್ತು ಪರಿಸ್ಥಿತಿ ಹೋರಾಟದಲ್ಲಿ: 70ರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ಇದನ್ನು ವಿರೋಧಿಸಿ ದೇಶಾದ್ಯಂತ ಹೋರಾಟ ಆರಂಭವಾಗಿತ್ತು. ಕರ್ನಾಟಕದಲ್ಲಿ ಈ ಹೋರಾಟದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಜಾರ್ಜ್‌ ಫ‌ರ್ನಾಂಡಿಸ್‌ ಕೋಲಾರಕ್ಕೂ ಆಗಮಿಸಿ ಅಂದಿನ ಯುವ ಮುಖಂಡರಾದ ಜಿ.ರಾಮರಾಜು, ಎಂ.ಜಿ.ಪ್ರಭಾಕರ ಇತರರನ್ನು ಹುರಿದುಂಬಿಸಿದ್ದರು.

ಜಾರ್ಜ್‌ ಫ‌ರ್ನಾಂಡಿಸ್‌ರ ಭೇಟಿ ನಂತರ ಕೋಲಾರ ಜಿಲ್ಲೆಯಲ್ಲೂ ತುರ್ತು ಪರಿಸ್ಥಿತಿ ವಿರೋಧಿ ಹೋರಾಟ ಆರಂಭವಾಗಿತ್ತು. ದೇಶಾದ್ಯಂತ ಇಂದಿರಾಗಾಂಧಿಯವರ ಜನಪ್ರಿಯತೆ ಇದ್ದರೆ ಕೋಲಾರದಲ್ಲಿ ಮೊಟ್ಟ ಮೊದಲ ಬಾರಿಗೆ ಇಂದಿರಾಗಾಂಧಿಯವರ ಚುನಾವಣಾ ಭಾಷಣದಲ್ಲಿ ಚಪ್ಪಲಿ ತೂರಿದ ಘಟನೆ ನಡೆಯಲು ಜಾರ್ಜ್‌ ಫ‌ರ್ನಾಂಡಿಸ್‌ರ ಮಾತುಗಳಿಂದ ಯುವಕರು ಪ್ರೇರಿತರಾಗಿದ್ದೇ ಕಾರಣವಾಗಿತ್ತು.

ಯುವ ಹೋರಾಟಗಾರರಿಗೆ ಬುದ್ಧಿಮಾತು: ಒಮ್ಮೆ ಕೋಲಾರ ನಗರಕ್ಕೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಯುವ ಮುಖಂಡರೊಂದಿಗೆ ಜಾರ್ಜ್‌ ಹರಟುತ್ತಿದ್ದರು. ಎಲ್ಲರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಆಗ ಜಿ.ರಾಮರಾಜು ತಾವು ಯುವ ಮುಖಂಡರೆಂದು ಪರಿಚಯಿಸಿಕೊಂಡಿದ್ದರು. ತಕ್ಷಣಕ್ಕೆ ಜಾರ್ಜ್‌ ಫ‌ರ್ನಾಂಡಿಸ್‌ ಅದು ಸರಿ ಹೊಟ್ಟೆ ಪಾಡಿಗೆ ಏನು ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದರು.

ಆಗ ಅವರೊಂದಿಗೆ ಇದ್ದ ಎಲ್ಲಾ ಯುವ ಮುಖಂಡರಿಗೂ ಜಾರ್ಜ್‌ ಕಿವಿಮಾತೊಂದನ್ನು ಹೇಳಿ, ಹೊಟ್ಟೆ ಪಾಡಿಗಾಗಿ ಯಾವುದಾದರೂ ಕೆಲಸವೊಂದನ್ನು ಮಾಡಿ ಮನೆ ನಿರ್ವಹಣೆಗೆ ಕೊರತೆ ಇಲ್ಲದಂತೆ ಮಾಡಿದ ನಂತರ ಹೋರಾಟಕ್ಕಿಳಿಯಬೇಕು. ಇಲ್ಲವಾದರೆ ಹೋರಾಟಕ್ಕೆ ಮತ್ತು ಜನರಿಗೂ ದ್ರೋಹ ಬಗೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದನ್ನು ಅಂದು ಕೇಳಿಸಿಕೊಂಡ ಎಲ್ಲಾ ಮುಖಂಡರು ನೆನಪಿಸಿಕೊಳ್ಳುತ್ತಾರೆ.

ರೈಲ್ವೆ ಹೋರಾಟಕ್ಕೂ ಸಾಥ್‌: ಕೋಲಾರ ಜಿಲ್ಲೆಗೆ ಆಗಾಗ್ಗೆ ಆಗಮಿಸುತ್ತಿದ್ದ ಜಾರ್ಜ್‌ ಫ‌ರ್ನಾಂಡಿಸ್‌ರಿಗೆ ಕೋಲಾರ ಜಿಲ್ಲೆಯ ರೈಲ್ವೆ ಹೋರಾಟದ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು ಎಂದು ರೈಲ್ವೆ ಹೋರಾಟಗಾರ ಎಂ.ಜಿ.ಪ್ರಭಾಕರ ಸ್ಮರಿಸಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಮೈಸೂರು ಮಹಾರಾಜರ ಅವಧಿಯಲ್ಲಿ ಜನರಿಂದಲೇ ಹಣ ಸಂಗ್ರಹಿಸಿ ಹಾಕಿದ್ದ ನ್ಯಾರೋಗೇಜ್‌ ರೈಲನ್ನು ಉಳಿಸಿ ಅಭಿವೃದ್ಧಿಪಡಿಸಬೇಕೆಂಬ ವಿಚಾರದಲ್ಲಿ ಜಿಲ್ಲೆಯ ಜನರ ಹೋರಾಟಕ್ಕೆ ಜಾರ್ಜ್‌ ಫ‌ರ್ನಾಂಡಿಸ್‌ ಅವರು ಹಲವಾರು ಸಂದರ್ಭಗಳಲ್ಲಿ ಧ್ವನಿಗೂಡಿಸಿದ್ದರು.

ಆದರೆ, ಖುದ್ದು ಜಾರ್ಜ್‌ ಫ‌ರ್ನಾಂಡಿಸ್‌ ಅವರೇ ರೈಲ್ವೆ ಸಚಿವರಾಗಿದ್ದ ವೇಳೆ ಕೋಲಾರದಿಂದ ಸಂಸದರಾಗಿದ್ದವರೊಬ್ಬರ ನಿರಾಸಕ್ತಿಯಿಂದಾಗಿ ಕೋಲಾರ ರೈಲ್ವೆ ಯೋಜನೆ ಬೇಡಿಕೆ ಜಾರ್ಜ್‌ರನ್ನು ಮುಟ್ಟಿರಲಿಲ್ಲ. ಒಂದು ವೇಳೆ ಆಗ ಜಾರ್ಜ್‌ ಅವರ ಮೇಲೆ ಒತ್ತಡ ಹಾಕಿದ್ದರೆ ಕೊಂಕಣ ರೈಲ್ವೆ ಯೋಜನೆ ಜೊತೆಗೆ ಕೋಲಾರದ ಯೋಜನೆಗಳು ಈಡೇರುತ್ತಿತ್ತು ಎಂದು ಎಂ.ಜಿ.ಪ್ರಭಾಕರ ನೆನಪಿಸಿಕೊಳ್ಳುತ್ತಾರೆ.

* ಕೆ.ಎಸ್‌.ಗಣೇಶ್

Advertisement

Udayavani is now on Telegram. Click here to join our channel and stay updated with the latest news.

Next