Advertisement
ಸಮಾಜವಾದಿ, ಕಾರ್ಮಿಕ ನಾಯಕನಾಗಿ ಸತತ ಉತ್ಸಾಹಿಯಾಗಿದ್ದ ಜಾರ್ಜ್, ಅಲೆಮರ್ ಕಾಯಿಲೆಗೆ ತುತ್ತಾಗಿ ಒಂಬತ್ತು ವರ್ಷಗಳೇ ಕಳೆದವು. ಆದರೆ, ಅವರ ಬದುಕು ಸಾಹಸಮಯವಾಗಿತ್ತು, ಧೈರ್ಯದಿಂದ ತುಂಬಿತ್ತು, ಚಟುವಟಿಕೆಯಿಂದ ಕೂಡಿತ್ತು, ಸ್ಫೂರ್ತಿದಾಯಕವಾಗಿತ್ತು. ಜಾರ್ಜ್ ವಕೀಲರಾಗಬೇಕೆಂಬುದು ಅವರ ತಂದೆ ಜಾನ್ ಫೆರ್ನಾಂಡಿಸ್ ಮಹದಾಸೆಯಾಗಿತ್ತು. ಆದರೆ, ಉನ್ನತ ಶಿಕ್ಷಣ ಪಡೆಯುವ ಆಯ್ಕೆ ಮಾಡಿಕೊಂಡು ಅವರ ತಂದೆಯನ್ನೂ ಖುಷಿಪಡಿಸಿದರು. ಮೊದಲಿನಿಂದಲೂ ಸ್ವತಂತ್ರ ವಿಚಾರಗಳನ್ನು ಹೊಂದಿದ್ದ ಜಾರ್ಜ್, ಚರ್ಚಿನ ಕುಂದು-ಕೊರತೆಗಳೊಂದಿಗೆ ರಾಜಿ ಮಾಡಿಕೊಳ್ಳಲಾರದೆ ಶಿಕ್ಷಣವನ್ನು ತ್ಯಜಿಸಿದರು. ಇದಕ್ಕಾಗಿ ಚರ್ಚಿನ ಸಂಪರ್ಕ ಕಳೆದುಕೊಂಡ ತಮ್ಮ ತವರು ಮಂಗಳೂರಿನಲ್ಲಿ ಕಾರ್ಮಿಕ ಸಂಘಗಳ ಚಳವಳಿಗಳಲ್ಲಿ ಅವರು ಸಕ್ರಿಯರಾದರು. ಅಲ್ಲಿ ಪಿ. ಡಿ’ಮೆಲ್ಲೋ ಅವರು ಮಾರ್ಗದರ್ಶಕರಾಗಿ ಸಿಕ್ಕರು. ಕೇವಲ 19 ವರ್ಷಗಳಿದ್ದಾಗ ಜಾರ್ಜ್ ಅವರನ್ನು ಮುಂಬೈಗೆ ಕಳುಹಿಸಲಾಯಿತು. ಅಲ್ಲಿ ಬೀದಿಗಳಲ್ಲಿ ನಿದ್ರಿಸಬೇಕಾದ ಸ್ಥಿತಿಯಲ್ಲೂ ಜಾರ್ಜ್ ಎದೆಗುಂದಲಿಲ್ಲ. ತಮ್ಮ ಸಂಘಟನ ಶಕ್ತಿಯಿಂದ ಕೆಲವೇ ವರ್ಷಗಳಲ್ಲಿ ಕಾರ್ಮಿಕ ನಾಯಕರಾಗಿ ಮೂಡಿಬಂದರು. ಅಲ್ಲಿಯ ಜಾಡಮಾಲಿಗಳ ದೊರೆಯಾಗಿ ಗೌರವದಿಂದ ಗುರುತಿಸಿಕೊಂಡರು.
Related Articles
Advertisement
ಮದುವೆಯಾದ ಹೊಸದರಲ್ಲಿ ನಾನೂ ಜಾರ್ಜ್ ಅವರೊಂದಿಗೆ ಕೆಲವು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದೆ. ರಾಜಸ್ಥಾನದ ಒಂದು ಹಳ್ಳಿಗೆ ಹೋಗಿದ್ದೆವು. ಅಲ್ಲಿನ ಜನ ಜಾರ್ಜ್ ಬರುವಿಕೆಗಾಗಿ ಬಹಳ ತಾಳ್ಮೆಯಿಂದ ಕಾದಿದ್ದರು. ಸರಳವಾದ ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ಜಾರ್ಜ್ ಜನರನ್ನು ಮೋಡಿ ಮಾಡುತ್ತಿದ್ದರು. 1975ರ ಜೂನ್ 26, ನಮ್ಮ ಗುರಿಯನ್ನು ಬದಲಿಸಿದ ದಿನವಾಗಿತ್ತು. ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಸಂದರ್ಭದಲ್ಲಿ ಗೋಪಾಲಪುರದ ಮೀನು ಗಾರರ ಸಣ್ಣ ಹಳ್ಳಿಯೊಂದರಲ್ಲಿ ನಾವಿದ್ದೆವು. ದಿಲ್ಲಿಯಲ್ಲಿ ನಾಯಕರ ಸಾಮೂಹಿಕ ಬಂಧನವಾದಾಗ ಜಾರ್ಜ್ ಪಾರಾಗಿದ್ದು ಇದೇ ಕಾರಣದಿಂದಾಗಿ. ಆಗ ನಮ್ಮ ಪುತ್ರನಿಗೆ ಕೇವಲ 17 ತಿಂಗಳು. ಮುಂದಿನ 22 ತಿಂಗಳು ನಾನು ಹಾಗೂ ಜಾರ್ಜ್ ಪ್ರತ್ಯೇಕವಾಗಿಯೇ ಬದುಕಬೇಕಾಯಿತು. ಮುಂದೆ ಎಂದಾದರೂ ಸಂಧಿಸುತ್ತೇವೋ ಎಂಬುದೂ ಅಸ್ಪಷ್ಟವಾಗಿತ್ತು. ವಿಶ್ವಾಸಘಾತಕತನದಿಂದ ಬಂಧನಕ್ಕೊಳ ಗಾಗುವ ಮೊದಲು ಒಂದು ವರ್ಷ ಜಾರ್ಜ್ ಭೂಗತರಾಗಿಯೇ ಕಾಲ ಕಳೆದರು. ಈ ಅವಧಿಯಲ್ಲಿ ಅವರು “ಲೆಟರ್ಸ್ ಫÅಮ್ ದ ಅಂಡರ್ ಗ್ರೌಂಡ್’ ಎಂಬ ವಾರ್ತಾಪತ್ರವನ್ನು ನಿಯಮಿತವಾಗಿ ಪ್ರಕಟಿಸುತ್ತಿದ್ದರು. ಪೊಲೀಸರು ನಿರಂತರವಾಗಿ ಶೋಧ ನಡೆಸುತ್ತಿದ್ದ ಕಾರಣ ಜಾರ್ಜ್ ದೇಶಾದ್ಯಂತ ಗುಪ್ತವಾಗಿಯೇ ಓಡಾಡುತ್ತ ಜನರನ್ನು ಸಂಘಟಿಸಿದರು. “ದ ಬರೋಡಾ ಡೈನಮೈಟ್ ಕೇಸ್’ನಲ್ಲಿ ಜಾರ್ಜ್ ಅವರ ಹೋರಾಟದ ಮನೋಭಾವವನ್ನು ಸೊಗಸಾಗಿ ಚಿತ್ರಿಸಿದ್ದಾರೆ.
ಗೋಪಾಲಪುರದಿಂದ ಜಾರ್ಜ್ ನಾಪತ್ತೆಯಾದ ಮೇಲೆ ನಾನು, ನನ್ನ ಮಗು ಹಾಗೂ ತಾಯಿಯೊಂದಿಗೆ ದಿಲ್ಲಿಗೆ ಮರಳಿದೆವು. ಜಾರ್ಜ್ ಮತ್ತು ನಾನು “ಪ್ರತಿಪಕ್ಷ’ ಎಂಬ ಹಿಂದಿ ಪತ್ರಿಕೆಯನ್ನು ನಡೆಸುತ್ತಿದ್ದೆವು. ನಾವು ನವದೆಹಲಿಗೆ ಬಂದಾಗ ಲೆಕ್ಕಾಧಿಕಾರಿ ಬಾಗಿಲಲ್ಲೇ ನನಗಾಗಿ ಕಾಯುತ್ತಿದ್ದ. “ಸಂಪಾದಕ ಕಮಲೇಶ್, ಸಹ ಸಂಪಾದಕ ಗಿರಿಧರ್ ರತಿ ಅವರನ್ನು ಸೆರೆಹಿಡಿದಿದ್ದಾರೆ. ನಮ್ಮೆಲ್ಲ ಪತ್ರಿಕೆಗಳು ಹಾಗೂ ಕಚೇರಿಯನ್ನು ವಶಪಡಿಸಿಕೊಂಡಿದ್ದಾರೆ. ಅವರು ನಿಮ್ಮನ್ನೂ ಬಂಧಿಸುತ್ತಾರೆ. ಇಲ್ಲಿಂದ ಈಗಲೇ ಹೊರಟು ಹೋಗಿ’ ಎಂದು ಎಚ್ಚರಿಸಿದ. ಆತನನ್ನು ಸಮಾಧಾನಿಸಿದೆ. ಆದರೆ, ದಿಲ್ಲಿಯಲ್ಲಿ ಉಳಿಯುವುದು ಸೂಕ್ತವಲ್ಲ ಎಂಬುದು ನನ್ನ ಅರಿವಿಗೂ ಬಂತು. ಪೊಲೀಸರು ನನ್ನ ಮನೆಯ ಮೇಲೆ ಕಣ್ಣಿಟ್ಟಿದ್ದಾರೆ. ಕಾರು ಏರಿದೊಡನೆ ಹಿಂಬಾಲಿಸುತ್ತಾರೆ. ಹೆದರಿಕೆ ಯಿಂದ ಯಾರೂ ನನ್ನ ಭೇಟಿಗೂ ಬರುವುದಿಲ್ಲ ಎಂದು ಗೊತ್ತಾಯಿತು.
ಆ ಸಮಯದಲ್ಲಿ ದೇಶವನ್ನು ಬಿಡುವುದೊಂದೇ ನನಗುಳಿದ ಆಯ್ಕೆಯಾಗಿತ್ತು. ನನ್ನನ್ನೂ ತಿಹಾರ್ ಜೈಲಿಗಟ್ಟಿದರೆ ಮಗನಿಗೆ ತೊಂದರೆಯಾಗುತ್ತದೆ. 7000 ಮೈಲು ದೂರದ ಅಮೆರಿಕದಲ್ಲಿದ್ದ ನನ್ನ ಸಹೋದರನನ್ನು ಸೇರಿದ್ದು ಯಾರೂ ನಂಬಲು ಅಸಾಧ್ಯವಾದ ಕಥೆ. ಭಾರತದಲ್ಲಿ ಸರ್ವಾಧಿಕಾರವನ್ನು ಅಂತ್ಯಗೊಳಿಸಲು ಅಲ್ಲಿ ಆರಂಭಿಸಿದ್ದ “ಪ್ರಜಾಪ್ರಭುತ್ವಕ್ಕಾಗಿ ಭಾರತೀಯರು’ ಸಂಘಟನೆಯಲ್ಲಿ ಸಕ್ರಿಯಳಾದೆ. ಅಮೆರಿಕದ ಕಾರ್ಮಿಕ ಸಂಘಟನೆಗಳನ್ನು ಸಂಪರ್ಕಿಸಿದೆ. ಇಂದಿರಾ ಗಾಂಧಿಯವರ ಸರ್ವಾಧಿಕಾರದ ವಿರುದ್ಧ ಅಮೆರಿಕದಲ್ಲಿ ದೊಡ್ಡ ದನಿಯೊಂದು ಮೊಳಗುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್‌ನ ಅಮೆರಿಕ ಘಟಕ ನನ್ನನ್ನು ಪತ್ತೆ ಮಾಡಿ, ಅಮೆರಿಕದ ಸೆನೆಟ್‌ನ ಅಂತಾರಾಷ್ಟ್ರೀಯ ವ್ಯವಹಾರಗಳ ಉಪಸಮಿತಿಯ ಮುಂದೆ ನಾನು ಸೆಪ್ಟಂಬರ್ 16, 1976ರಂದು ಹಾಜರಾಗುವಂತೆ ಮಾಡಿತು. ಅಮೆರಿಕದ ಕಾರ್ಮಿಕ ಸಂಘಟನೆಗಳಿಂದ ಜಾರ್ಜ್ ರಕ್ಷಣೆಗಾಗಿ 2,500 ಡಾಲರ್ ಗಳ ನಿಧಿ ಸಂಗ್ರಹಿಸಿ, ಮರುದಿನವೇ ನನ್ನ ಎರಡುವರೆ ವರ್ಷದ ಪುತ್ರನೊಂದಿಗೆ ನಾನು ಲಂಡನ್‌ಗೆ ಹಾರಿದೆ. ಜಾರ್ಜ್ ಅವರಿಗೆ ಕೆಂಪು ಕೋಟೆಯಲ್ಲಿ ಚಿತ್ರಹಿಂಸೆ ನೀಡುತ್ತಿದ್ದು, ಅವರ ಜೀವ ಅಪಾಯದಲ್ಲಿರುವ ಸೂಚನೆ ಅರಿತು ಯುರೋಪ್ ದೇಶಗಳ ಬೆಂಬಲ ಪಡೆಯಲು ಮುಂದಾದೆ. ಲಂಡನ್‌ಗೆ ಕಾಲಿಟ್ಟೊಡನೆಯೇ ನಾನು ನನ್ನಲ್ಲಿದ್ದ ನಿಧಿಯನ್ನು ಸೋಷಲಿಸ್ಟ್ ಇಂಟರ್ ನ್ಯಾಷನಲ್ ಸಂಘಟನೆಗೆ ಹಸ್ತಾಂತರಿಸಿದೆ. ಜಾರ್ಜ್ ಅವರಂತೆ ಸಾವಿರಾರು ಭಾರತೀಯರು ಅನುಭವಿಸುತ್ತಿರುವ ಯಾತನೆಯನ್ನು ಯುರೋ ಪಿನ ಎಂಟು ದೇಶಗಳ ಮುಖಂಡರಿಗೆ ಮನವರಿಕೆ ಮಾಡಿಕೊಡು ವಂತೆ ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನನ್ನನ್ನು ಪ್ರಚೋದಿ ಸಿದರು. ತನ್ನ ತಂದೆಯೊಂದಿಗೆ ದೇಶದಲ್ಲಿರಲು ಅಸಾಧ್ಯವಾದ ಬಟ್ಟಲು ಕಂಗಳ ನನ್ನ ಪುತ್ರನ ಚಿತ್ರಗಳೊಂದಿಗೆ ಅಲ್ಲಿನ ಮಾಧ್ಯಮಗಳೂ ಸಾಕಷ್ಟು ಬೆಂಬಲ ನೀಡಿದವು. 1976ರ ಸೆಪ್ಟಂಬರ್ ತಿಂಗಳ ಕೊನೆಯಲ್ಲಿ ಸರಪಳಿಗಳಿಂದ ಬಂಧಿಸಿ ಜಾರ್ಜ್ ಅವರನ್ನು ನ್ಯಾಯಾಲಯಕ್ಕೆ ಎಳೆದೊಯ್ಯುತ್ತಿರುವ ಚಿತ್ರಗಳೇ ಎಲ್ಲವನ್ನೂ ಹೇಳಿದವು. “ಈ ಸರಪಳಿಗಳು ನನ್ನನ್ನು ಕಟ್ಟಿ ಹಾಕಲಾರವು. ಇಡೀ ದೇಶವನ್ನು ಇವರು ಹೇಗೆ ಸೆರೆಯಾಳಾಗಿ ಮಾಡಿಕೊಂಡಿದ್ದಾರೆ ಎಂಬುದರ ಸಂಕೇತವಿದು’ ಎಂದು ಜಾರ್ಜ್ ಕೋಳಗಳಿರುವ ಕೈಗಳನ್ನೆತ್ತಿ ಘೋಷಿಸಿದ್ದರು.
ಜನವರಿ 1977ರಲ್ಲಿ ಇಂದಿರಾ ಗಾಂಧಿಯವರು ಮಾರ್ಚ್ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಸುವುದಾಗಿ ಹೇಳಿ ಅಚ್ಚರಿ ಮೂಡಿಸಿದರು. ಎಲ್ಲರ ಹೃದಯಗಳಲ್ಲೂ ಹೊಸ ಭರವಸೆ ಮೂಡಿತು. ಬಿಹಾರದ ಮುಝಾಫರ್‌ಪುರಕ್ಕೆ ಒಂದು ಸಲವೂ ಭೇಟಿ ಕೊಡದೆ ಜಾರ್ಜ್ ಆ ಲೋಕಸಭಾ ಕ್ಷೇತ್ರದಲ್ಲಿ ದಾಖಲೆಯ ಮತಗಳಿಂದ ಜಯಗಳಿಸಿದ್ದು ಐತಿಹಾಸಿಕ. ಇಂದಿರಾ ಗಾಂಧಿಯವರ ಹೀನಾಯ ಸೋಲನ್ನೂ ನಾವು ಅಮೆರಿಕದ ಚಾರ್ಲೊàಟ್ಸ್ ವಿಲೆಯಲ್ಲಿದ್ದು ಕೊಂಡೇ ಗಮನಿಸಿದೆವು. ಸ್ಥಳೀಯ ಪತ್ರಿಕೆಯೊಂದರ ಪ್ರತಿನಿಧಿ ನನ್ನ ಸಂದರ್ಶನಕ್ಕೆ ಬಂದಿದ್ದ. ಆಗ ಮೂರು ವರ್ಷದವನಾಗಿದ್ದ ನನ್ನ ಮಗನನ್ನು ಗಮನಸಿ, ನಿನ್ನ ಅಪ್ಪನನ್ನು ನೋಡಲು ನೀನು ಭಾರತಕ್ಕೆ ಮರಳುತ್ತೀ ಅಲ್ಲವೇ ಎಂದು ಪ್ರಶ್ನಿಸಿದ. ನನ್ನ ಮಗ “ಇಲ್ಲ’ ಎಂದ. ಮತ್ತೆ ಕೇಳಿದರೂ ಅದೇ ಉತ್ತರ. ನಾನು ನನ್ನ ತಾಯಿಯ ಗಂಡನನ್ನು ನೋಡಲು ಹೋಗುವೆ ಎಂದ. ಆ ಪುಟ್ಟ ಕಂದನಿಗೆ “ಅಪ್ಪ’ ಎಂದರೆ ಏನು ಗೊತ್ತು? ಕೆಲವು ವಾರಗಳ ಬಳಿಕ ನಾವು ಭಾರತಕ್ಕೆ ಮರಳಿದೆವು. “ನೀನು ಹೇಳಿದೆ, ನಾವು ಅಪ್ಪನನ್ನು ನೋಡುತ್ತೇವೆಂದು. ಆದರೆ, ಅಪ್ಪ ಎಲ್ಲಿದ್ದಾರೆ?’ ನನ್ನ ಮಗನ ಈ ಪ್ರಶ್ನೆ ಜನರು ಹಾಗೂ ದೇಶಕ್ಕಾಗಿ ಹಗಲಿರುಳೂ ದುಡಿಯುವ ರಾಜಕಾರಣಿಗಳ ಬದುಕನ್ನು ವಿವರಿಸೀತು.
1977ರ ಬಳಿಕ ಬೆಂಕಿಯ ಚೆಂಡು ಜಾರ್ಜ್ ಸರ್ಕಾರದ ಭಾಗವಾದರು. ಮೊರಾರ್ಜಿ ದೇಸಾಯಿ, ವಿ.ಪಿ. ಸಿಂಗ್ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟಗಳಲ್ಲಿ ಸಚಿವರಾ ದರು. ರೈಲ್ವೇ ಸಚಿವರಾಗಿ ಇತಿಹಾಸ ಅವರನ್ನು ಬಹುಕಾಲ ನೆನಪಿನ ಲ್ಲಿಟ್ಟುಕೊಳ್ಳುತ್ತದೆ. ಕೊಂಕಣ ರೈಲ್ವೆ ನಿರ್ಮಾಣ ಅವರ ಅತ್ಯಂತ ಯಶಸ್ವಿ ಯೋಜನೆ. ಅವರ ಮನೆಯೂ ನಿರ್ಗತಿಕರ, ಕಲಾವಿದರ ಹಾಗೂ ವಿದ್ಯಾರ್ಥಿಗಳ ಧರ್ಮಶಾಲೆಯಂತಿತ್ತು. ಬರ್ಮಾ ಹಾಗೂ ಟಿಬೆಟಿನ ವಿದ್ಯಾರ್ಥಿಗಳು ಜಾ ರ್ಜ್ ಜನ್ಮದಿನಗಳಂದು ನೂರಾರು ಸಂಖ್ಯೆಯಲ್ಲಿ ಆಗಮಿಸಿ, ಕೃತಜ್ಞತೆ ಸಲ್ಲಿಸುತ್ತಿದ್ದರು. ಅಸ್ವಸ್ಥರಾಗಿದ್ದ ಜಾರ್ಜ್ ಅವರ ಯೋಗಕ್ಷೇಮ ವಿಚಾರಿಸಲು ಅವರ ಆಪ್ತ ಮಿತ್ರರಾಗಿದ್ದ ದಲೈ ಲಾಮಾ ಅವರೂ ಆಗಾಗ ಬರುತ್ತಿದ್ದರು.
ಜಾರ್ಜ್ ಕುಟುಂಬ ಜೀವಿಯಾಗಿದ್ದರೇ ಎಂದು ಕೇಳಿದರೆ ಇಲ್ಲ ಎನ್ನಬೇಕು. ಅವರ ಬದುಕಿನ ಶೇ. 95 ಭಾಗ ಜನಸಾಮಾನ್ಯರಿಗೆ ಮೀಸಲಾಗಿತ್ತು. ರಾತ್ರಿ ಬಹಳ ಹೊತ್ತಿನ ವರೆಗೂ ಕೆಲಸಗಳಲ್ಲೇ ಮುಳುಗಿ ರುತ್ತಿದ್ದರು ಅಥವಾ ಓಡಾಟಗಳಲ್ಲೇ ಇರುತ್ತಿದ್ದರು. ಅವರ ಕರ್ತವ್ಯಕ್ಕೆ ಅಡ್ಡಿಯಾ ಗದಂತೆ ಇಬ್ಬರೂ ಪ್ರತ್ಯೇಕವಾಗಿ ಜೀವಿಸುವ ಸಲಹೆ ನೀಡಿದೆ. ಮೊದಲು ತಿರಸ್ಕರಿಸಿದರು. ಒಲ್ಲದ ಮನಸ್ಸಿನಿಂದಲೇ ಒಪ್ಪಿದರು. ಈ ನಿರ್ಧಾರ ಅತ್ಯಂತ ನೋವಿನದಾದರೂ ಸರಿಯಾದು ದೆಂದು ಈಗಲೂ ಅನಿಸುತ್ತಿದೆ. ಸೀನ್‌ನ ಜನ್ಮದಿನಗಳಂದು ಜಾರ್ಜ್ ತಪ್ಪಿಸುತ್ತಿರಲಿಲ್ಲ. ಆತ 2000ನೇ ಇಸವಿಯಲ್ಲಿ ಎಂಬಿಎ ಪದವಿ ಸ್ವೀಕರಿಸುವ ಸಮಾರಂಭಕ್ಕೆ ಜಾರ್ಜ್ ಶಿಕಾಗೋ ತನಕ ಬಂದಿದ್ದರು. 2002ರಲ್ಲಿ ಕೊಟೋದಲ್ಲಿ ನಡೆದ ಸೀನ್‌ನ ವಿವಾಹ ಸಮಾರಂಭಕ್ಕೂ ಹಾಜರಾದರು. ಅವರ ನೆನಪಿನ ಶಕ್ತಿ ನಶಿಸುವ ಮೊದಲು 2009ರಲ್ಲಿ ಒಂಭತ್ತು ತಿಂಗಳ ತಮ್ಮ ಮೊಮ್ಮಗ ಕೆನ್‌ನನ್ನು ಅವರು ಗುರುತಿಸಿ, ಖುಷಿಪಟ್ಟಿದ್ದನ್ನು ಎಂದಿಗೂ ಮರೆಯಲಾರೆ.
ಅಲೆjçಮರ್ ಕಾಯಿಲೆ ಜಾರ್ಜರನ್ನು ತೀವ್ರವಾಗಿ ಬಾಧಿಸಿದಾಗ 2010ಲ್ಲಿ ಜಾರ್ಜ್ ಮನೆಗೆ ಮರಳಿದರು. ನಾನು ಅವರ ಸೇವೆಗೆ ನಿಂತೆ. ಅವರ ಸಾನ್ನಿಧ್ಯ ಮತ್ತೆ ಸಿಕ್ಕಿದ್ದು, ಸೇವೆಯ ಅವಕಾಶ ಒದಗಿದ್ದು ನನ್ನ ಭಾಗ್ಯವೇ ಎನ್ನಬೇಕು.
ಲೀಲಾ ಕಬೀರ್ ಫೆರ್ನಾಂಡಿಸ್