ಮುಂಬಯಿ, ಸೆ. 24: ವೃತ್ತಿಪರ ಶಿಕ್ಷಣ ಕ್ಷೇತ್ರದ ತುಳು-ಕನ್ನಡಿಗರ ರಾಷ್ಟ್ರದ ಪ್ರಸಿದ್ಧ ಸಂಸ್ಥೆಯಾದ ಇಂಟರ್ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಟ್ರೈನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯ ವತಿ ಯಿಂದ ಟ್ರಾವೆಲ್ ಆ್ಯಂಡ್ ಟೂರಿಸಂ ಹಾಗೂ ಐಎಟಿಎ (ಐಯಾಟ) ವಿದ್ಯಾರ್ಥಿಗಳಿಗಾಗಿ ಇಟೆಲಿಯನ್ ಟೂರಿಸ್ಟ್ ಬೋರ್ಡ್ ಸಹಯೋಗದಿಂದ ಮಾಹಿತಿ ಕಾರ್ಯಗಾರವು ಸೆ. 24 ರಂದು ಅಂಧೇರಿ ಪೂರ್ವದ ಸಹಾರ್‌ನ ಹೊಟೇಲ್ ಲೀಲಾ ಕೆಂಪೆನ್ ಸ್ಕಿಯ ಬಾಲ್‌ರೂಮ್ ಸಭಾಗೃಹದಲ್ಲಿ ನಡೆಯಿತು.
ಪ್ರಯಾಣ ಮತ್ತು ಪ್ರವಾಸೋದ್ಯಮ ವಿಚಾರಿತವಾಗಿ ನಡೆದ ಕಾರ್ಯಾಗಾರದಲ್ಲಿ ಇಟೆಲಿಯನ್ ಇಎನ್‌ಐಟಿ ಮುಂಬಯಿ ಪ್ರತಿನಿಧಿ ಸಲ್ವತೊರ್ ಲನ್ನಿಯಿಲ್ಲೋ ಸಂಪನ್ಮೂಲ ವ್ಯಕ್ತಿ ಯಾಗಿ ಪಾಲ್ಗೊಂಡು ಮಾತನಾಡಿ, ಪ್ರಯಾಣ ಮತ್ತು ಪ್ರವಾಸೋದ್ಯಮ ಜೀವನ ರೂಪಿಸಬಲ್ಲ ಸುಲಭ ಮತ್ತು ಸರಳವಾಗಿ ಆದಾಯ ಗಳಿಕೆಯ ಕ್ಷೇತ್ರವಾಗಿದೆ. ಹತ್ತೂರು ಸುತ್ತುತ್ತಾ ಭೌಗೋಳಿಕ ಅರಿವು ಮೂಡಿಸಬಲ್ಲ ಮನೋಲ್ಲಾಸ ನೀಡುವ ಉದ್ಯಮ ಇದಾಗಿದೆ. ಆದ್ದರಿಂದ ಪ್ರವಾಸೋದ್ಯಮ ಅನುಕೂಲಕರ ಉದ್ಯಮವಾಗಿದೆ ಎಂದರು.
ಕಳೆದ ಸುಮಾರು ಐದುವರೆ ದಶಕಗಳ ಹಿಂದೆ ಎಸ್. ಕೆ. ಉರ್ವಾಲ್ ಅವರ ದೂರದೃಷ್ಟಿತ್ವದಲ್ಲಿ ಸ್ಥಾಪಿತ ಐಐಟಿಸಿ ಸಂಸ್ಥೆ ನಿರಂತರವಾಗಿ ಐಯಾಟ ತರಬೇತಿ, ವಿಮಾನಯಾನ, ಪ್ರಯಾಣ ಮತ್ತು ಪ್ರವಾಸೋದ್ಯಮ ಬಗ್ಗೆ ವೃತ್ತಿಪರ ಶಿಕ್ಷಣ ನೀಡುವಲ್ಲಿ ಸಾಧನಾಶೀಲ ಸಂಸ್ಥೆಯಾಗಿದೆ. ಸದ್ಯ ಐಐಟಿಸಿ ವಾರ್ಷಿಕವಾಗಿ ನೂರಾರು ವಿದ್ಯಾರ್ಥಿಗಳಿಗೆ ವಿವಿಧ ಉದ್ಯಮ ಗಳ ವೃತ್ತಿಪರ ಶಿಕ್ಷಣ ನೀಡುತ್ತಿದೆ. ಪ್ರವಾಸೋದ್ಯಮವು ಜನತೆಗೆ ಇಷ್ಟವಾದ ಅಧ್ಯಯನದ, ಉದ್ಯಮಸ್ಥ ಕ್ಷೇತ್ರವಾಗಿದ್ದು, ಇದು ನಿಖರ ಮತ್ತು ಸ್ಪಷ್ಟವಾದ ಪ್ರಯೋಜನಗಳನ್ನು ಒಳಗೊಂಡಿದೆ.
ಅಧಿಕ ಗಳಿಕೆಯೊಂದಿಗೆ ವ್ಯವಹಾರವನ್ನು ಆದಾಯಕ್ಕೆ ತಂದು ಕೊಡುವುದರಲ್ಲೂ ಪ್ರವಾಸೋದ್ಯಮ ಅನುಕೂಲಕರ ಉದ್ಯಮ. ಇವೆಲ್ಲಕ್ಕೂ ಪ್ರವಾಸೋದ್ಯಮದಲ್ಲಿ ಭೌಗೋಳಿಕ ಜ್ಞಾನದ ಅಗತ್ಯವಿದೆ. ಈ ಬಗ್ಗೆ ಐಐಟಿಸಿ ವಿದ್ಯಾರ್ಥಿಗಳಲ್ಲಿ ಆಳವಾಗಿ ಅಧ್ಯಯನ ರೂಪಿಸುವಲ್ಲಿ ಇಂತಹ ಕಾರ್ಯಾಗಾರ ಆಯೋಜಿಸಲಾಗುತ್ತಿದೆ ಎಂದು ಐಐಟಿಸಿ ನಿರ್ದೇಶಕ ವಿಕ್ರಾಂತ್ ಉರ್ವಾಲ್ ನುಡಿದರು.
ಪ್ರವಾಸೋದ್ಯಮದ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿ ಗಳಾಗಿದ್ದ ರೈಲ್ ಯುರೋಪ್‌ನ ವ್ಯವಸ್ಥಾಪಕಿ ಕು| ಬೆಲಾ ಶ್ಹಾ ಅವರು ಇಟೆಲಿಯನ್ ರೈಲುಯಾನ ಜಾಲದ ಬಗ್ಗೆ, ಕಾರ್ಪ್ ಆ್ಯಂಡ್ ಟ್ರೇಡ್ ಕೊಸ್ಟಾ ಕ್ರೂಜರ್‌ನ ವಿಕ್ರಯ ವ್ಯವಸ್ಥಾಪಕಿ ಕು| ವಸುಂಧರಾ ಗುಪ್ತ ಅವರು ಇಟೆಲಿಯಲ್ಲಿ ವಿಹಾರ ನೌಕಾಯಾನದ ಬಗ್ಗೆ, ಬೆಲ್‌ಮೊಂಡ್ ಹೊಟೇಲ್ ಇಟೆಲಿ ಇದರ ವ್ಯವಸ್ಥಾಪಕಿ ಕು| ಸೋನಾಲ್ ಸಾಲ್ಯಾನ್ ಅವರು ಇಟೆಲಿಯ ಲಕ್ಸುರಿ ಹೊಟೇಲ್ಸ್ ಬಗ್ಗೆ ಹಾಗೂ ಭಾರತೀಯ ಮತ್ತು ವಿಶ್ವದ ವಿವಿಧ ರಾಷ್ಟ್ರಗಳ ಪ್ರವಾಸೋದ್ಯಮ ಮತ್ತು ವಿಪುಲ ಉದ್ಯೋಗಾವಕಾಶಗಳ ಬಗ್ಗೆ ಹಾಗೂ ರೋಮ್, ಫ್ಲೊರೆನ್ಸ್, ವೆನಿಸ್, ಪಿಸಾ, ಮಿಲನ್ ಬಗ್ಗೆ ಮಾಹಿತಿಯಿತ್ತರು.
ಬಾಲಿವುಡ್ ರಂಗದ ಹೆಸರಾಂತ ವಿನ್ಯಾಸಗಾರ್ತಿ, ಮಿಸ್ ಇಂಡಿಯಾ ಪುರಸ್ಕೃತೆ ಮೆಹೆರ್ ಕಾಸ್ತೆಲಿನೋ, ಬಾಲಿವುಡ್‌ನ ಮೇಕ್-ಅಪ್ ಕಲೋಪಾಸಕ ಒಜಾಸ್ ರಜನಿ ಮತ್ತು ಸಲೀಂ ಅಜ್‌ಗಾರ್ ಆಲಿ ಅವರು ಪಾಲ್ಗೊಂಡು “ಫ್ಯಾಶನ್ ರಂಗದ ಭವಿಷ್ಯ’ ಕುರಿತಾದ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಐಐಟಿಸಿ ನಿರ್ದೇಶಕರಾದ ಸಂದೇಶ್‌ಉರ್ವಾಲ್, ನಿಖೀಲ್ ಸಂಪತ್, ಶಂಕರ್ ಪಾಂಡೇ, ಸುನೀಲ್ ಶೆವ್ಹಾಳೆ, ವಂದನಾ ಜೈನ್, ಪವಿತ್ರಾ ರಾಯ್, ದಿವ್ಯಾ ಲಕುರ್, ಈಶಾ ಬೆಡೇಕರ್, ತೋರಲ್ ಠಕ್ಕರ್, ಮುರಳೀಧರ್ ಭಟ್ ಡೊಂಬಿವಲಿ ಮತ್ತಿತರ ಗಣ್ಯರು
ಉಪಸ್ಥಿತರಿದ್ದರು. ಇಟೆಲಿಯ ಮುಂಬಯಿಯ ಕೌನ್ಸಿಲ್ ಜನರಲ್ ಕು| ಸ್ಟೆಫನಿಯಾ ಕೊಸ್ಟಾನ ಸ್ವಾಗತಿಸಿದರು. ವಿಕ್ರಾಂತ್ ಉರ್ವಾಲ್ ಮತ್ತು ರೀನಾ ವಿ. ಉರ್ವಾಲ್ ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಿದರು. ಐಐಟಿಸಿ ಹಾಗೂ ಫ್ಯಾಶನ್ ರಂಗದ ಉಪನ್ಯಾಸಕ, ಮ್ಯಾನೇಜ್‌ಮೆಂಟ್ ಗುರು ಪ್ರೊ| ಸೈರಸ್ ಗೋಂಡ ಮತ್ತು ಉಮೇಶ್ ಫೆರ್ವಾನಿ ಕಾರ್ಯಕ್ರಮ ನಿರೂಪಿದರು. ನಿಖೀಲ್ ಸಂಪತ್ ವಂದಿಸಿದರು. ಸಂಸ್ಥೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ – ವರದಿ: ರೊನ್ಸ್ ಬಂಟ್ವಾಳ್