Advertisement

ಜನೌಷಧಿ ಮಳಿಗೆ ಸೇವೆ ಜನರಿಗೆ ದೊರೆಯಲಿ

04:51 PM Jul 21, 2018 | Team Udayavani |

ದಾವಣಗೆರೆ: ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಮಳಿಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಸಂಬಂಧ ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಸೂಚಿಸಿದ್ದಾರೆ.

Advertisement

ಶುಕ್ರವಾರ, ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಂತರ ಸಭೆಯಲ್ಲಿ ಮಾತನಾಡಿದ ಅವರು, ಜನೌಷಧಿ ಮಳಿಗೆಯಲ್ಲಿ ಸರಿಯಾಗಿ ಔಷಧಿ ಕೊಡುವುದೇ ಇಲ್ಲ. ಸಂಜೆ 6ಕ್ಕೆ ಬಾಗಿಲು ಹಾಕಲಾಗುತ್ತದೆ ಎಂಬುದಾಗಿ ಅನೇಕರು ಹೇಳಿಕೊಂಡಿದ್ದಾರೆ. ದಿನದ 24 ಗಂಟೆ ಕಾರ್ಯ ಎಂಬುದು ಬರೀ ಹೆಸರಿಗೆ ಆಗಬಾರದು. 

ಸದಾ ಔಷಧಿ ದೊರೆಯುವಂತಾಬೇಕು. ಜನೌಷಧಿ ಮಳಿಗೆಯವರು ಸರಿಯಾಗಿ ತೆಗೆಯದೇ ಇದ್ದರೆ, ಔಷಧಿ ಕೊಡದೇ ಇದ್ದರೆ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲವೇ ಎಂದು ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ಎಚ್‌.ಡಿ. ನೀಲಾಂಬಿಕೆ, ನಿವಾಸಿ ವೈದ್ಯಾಧಿಕಾರಿ ಡಾ| ರಾಘವೇಂದ್ರಸ್ವಾಮಿಗೆ ಪ್ರಶ್ನಿಸಿದರು. 

ಜನೌಷಧಿ ಮಳಿಗೆಯಲ್ಲಿ 700 ಔಷಧಿಗಳು ಇರಬೇಕು. ಮಳಿಗೆ ಪ್ರಾರಂಭವಾದಾಗನಿಂದಲೂ 300ಕ್ಕೂ ಹೆಚ್ಚು ಔಷಧಿಗಳು ಇರುವುದಿಲ್ಲ. ಕೇಳಿದರೆ ಪೂರೈಕೆ ಆಗುತ್ತಿಲ್ಲ ಎಂಬ ಸಬೂಬು ಹೇಳುತ್ತಾರೆ ಎಂದು ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ಎಚ್‌.ಡಿ.
ನೀಲಾಂಬಿಕೆ ಹೇಳಿದರು.

ಸ್ಥಳಕ್ಕೆ ಜನೌಷಧಿ ಮಳಿಗೆ ಸಿಬ್ಬಂದಿಯನ್ನು ಕರೆಸಿ, ವಿಚಾರಿಸಿದಾಗ, ನಮಗೆ ಬರುತ್ತಿರುವುದೇ 300 ಔಷಧಿಗಳು ಮಾತ್ರ. ಇಬ್ಬರೇ ಇರುವುದರಿಂದ ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ಇರುತ್ತೇವೆ ಎಂದು ಸಮಜಾಯಿಷಿ ನೀಡಿದರು.

Advertisement

ಈ ವೇಳೆ ಕೇಂದ್ರ ಸಚಿವ ಅನಂತ್‌ಕುಮಾರ್‌ ಅವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ ರವೀಂದ್ರನಾಥ್‌, ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಜನೌಷಧದ ಮಳಿಗೆಗೆ 700 ಔಷಧಿಯಲ್ಲಿ 300 ಮಾತ್ರ ಬರುತ್ತಿವೆ. ಸಂಜೆ 6 ಗಂಟೆಗೆ ಬಾಗಿಲು ಹಾಕಲಾಗುತ್ತಿದೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂಬುದನ್ನು ತಿಳಿಸಿದರು.

ನಂತರ ಎಂಎಸ್‌ಐಎಲ್‌ ಅಧಿಕಾರಿ ಜಗದೀಶ್‌ ಅವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಜಿಲ್ಲಾ ಆಸ್ಪತ್ರೆಯ ಜನೌಷಧಿ ಮಳಿಗೆಯ ಸಮಸ್ಯೆ ತಿಳಿಸಿದರು. ಸಾಕಷ್ಟು ಚರ್ಚೆಯ ನಂತರ ಸಂಜೆ 6 ಬದಲಿಗೆ ರಾತ್ರಿ 9ಕ್ಕೆ ಮುಚ್ಚಲು ಸಿಬ್ಬಂದಿಗೆ ಸೂಚಿಸಲಾಯಿತು.

ಜಿಲ್ಲಾ ಆಸ್ಪತ್ರೆ 930 ಹಾಸಿಗೆ ಸಾಮರ್ಥ್ಯ ಹೊಂದಿದೆ. ಈಗಲೂ 450 ಹಾಸಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ಇದ್ದಾರೆ. 139 ನರ್ಸ್‌ಗಳ ಹುದ್ದೆಯಲ್ಲೇ 39 ಹುದ್ದೆ ಖಾಲಿ ಇವೆ. 500 ಮಂದಿ ಕೆಲಸ ಮಾಡಬೇಕಾದ ಜಾಗದಲ್ಲಿ 100 ಜನರು ಮಾಡಬೇಕಾಗಿದೆ. ಖಾಲಿ ಇರುವ 39 ಹುದ್ದೆ ಭರ್ತಿ ಮಾಡಿದರೆ ಅನುಕೂಲ ಆಗುತ್ತದೆ ಎಂದು ಡಾ| ನೀಲಾಂಬಿಕೆ ಮನವಿ ಮಾಡಿದರು. ನರ್ಸ್‌ ಹುದ್ದೆ ಒಳಗೊಂಡಂತೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೋರಿ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಕೊಡಿ, ನಾನು ಸಂಬಂಧಿತರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ರವೀಂದ್ರನಾಥ್‌ ತಿಳಿಸಿದರು.

ದುರಸ್ತಿ ಬೇಗ ಮುಗಿಸಿ: ಆಸ್ಪತ್ರೆಯಲ್ಲಿ ಅನೇಕ ಕಡೆ ದುರಸ್ತಿ ನಡೆಯುತ್ತಿದೆ. ಆದಷ್ಟು ಬೇಗ ಕೆಲಸ ಮುಗಿಸಿ ಎಂದು ಶಾಸಕ ರವೀಂದ್ರನಾಥ್‌ ಆರೋಗ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಮಾಂತೇಶ್‌ಗೆ ಸೂಚಿಸಿದರು. 

2017ರ ಫೆಬ್ರವರಿಯಿಂದ 7.5 ಕೋಟಿ ವೆಚ್ಚದ ರಿಪೇರಿ ಕೆಲಸ ನಡೆಸಲಾಗುತ್ತಿದೆ. ಕಟ್ಟಡ ಅಡಿಪಾಯದ ಮಧ್ಯಭಾಗದಲ್ಲೇ ಒಳ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಕಟ್ಟಡ ಹಳೆಯದ್ದಾಗಿದೆ. ಒಂದಕ್ಕೊಂದು ಸಮಸ್ಯೆ ಎದುರಾಗುತ್ತಿವೆ. ಹಾಗಾಗಿ ವಿಳಂಬವಾಗುತ್ತಿದೆ. ಆದರೂ, ಪೂರ್ವ ಭಾಗದ ಒಂದು ಭಾಗವನ್ನು ಮುಂದಿನ ತಿಂಗಳಲ್ಲಿ ಮುಗಿಸಲಾಗುವುದು ಎಂದು ಇಂಜಿನಿಯರ್‌ ತಿಳಿಸಿದರು. 

ಹೆರಿಗೆ ವಿಭಾಗದಲ್ಲಿ ತಿಂಗಳಿಗೆ 850-900 ಹೆರಿಗೆ ಆಗುತ್ತವೆ. 100 ಹಾಸಿಗೆ ಸಾಮರ್ಥಯದ ವಿಭಾಗ ಮಂಜೂರಾಗುವ ಭರವಸೆ ಇತ್ತು. ಆದರೆ. ಮಂಜೂರಾಗಿಲ್ಲ. ಇನ್ನೊಂದು ಹೆರಿಗೆ ಆಸ್ಪತ್ರೆ ಇದೆ ಎಂದು ಹೇಳುತ್ತಾರೆ. ಜಿಲ್ಲಾ ಆಸ್ಪತ್ರೆಗೆ ಇನ್ನೊಂದು ವಿಭಾಗ ಬೇಕಾಗುತ್ತದೆ ಎಂದು ಡಾ| ನೀಲಾಂಬಿಕೆ ತಿಳಿಸಿದರು. ಆ ಬಗ್ಗೆಯೂ ಚರ್ಚೆ ನಡೆಸುವುದಾಗಿ ಶಾಸಕ ರವೀಂದ್ರನಾಥ್‌ ತಿಳಿಸಿದರು. 

ನೋ ಸೂಪರ್‌ ಸ್ಪೆಷಾಲಿಟಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ 25 ಕೋಟಿ ಅನುದಾನದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಅನುದಾನ ಇಲ್ಲ ಎಂಬ ಕಾರಣಕ್ಕೆ ಈವರೆಗೆ ಮಂಜೂರಾಗಿಲ್ಲ. 5-6 ಜಿಲ್ಲೆಗಳ ಜನರು ಜಿಲ್ಲಾ ಆಸ್ಪತ್ರೆಗೆ ಬರುತ್ತಾರೆ. ಹಾಗಾಗಿ ಸೂಪರ್‌ ಸ್ಪೆಷಾಲಿಟಿ ವೈದ್ಯರು ಬೇಕೇ ಬೇಕು ಎಂದು ಡಾ| ನೀಲಾಂಬಿಕೆ ಮನವಿ ಮಾಡಿದರು. ಆ ಬಗ್ಗೆಯೂ ಸಂಬಂಧಿತರೊಂದಿಗೆ ಮಾತನಾಡುವುದಾಗಿ ಶಾಸಕರು ತಿಳಿಸಿದರು.

ಸಭೆಗೆ ಮುನ್ನ ವಿವಿಧ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರೋಗಿಗಳೊಂದಿಗೆ ಚರ್ಚಿಸಿ, ದೊರೆಯುವ ಸೌಲಭ್ಯ, ಸಮಸ್ಯೆಗಳ ಮಾಹಿತಿ ಪಡೆದುಕೊಂಡರು. ಮಾಜಿ ಉಪ ಮೇಯರ್‌ ಪಿ.ಎಸ್‌. ಜಯಣ್ಣ, ಶಿವಾಜಿರಾವ್‌ ಪಾಟೀಲ್‌, ಬಿ.ಎಸ್‌. ಜಗದೀಶ್‌, ನಿಟುವಳ್ಳಿ ಲಕ್ಷ್ಮಣ್‌ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next