Advertisement

ಘಟಕದ ಕ್ರಿಯಾಯೋಜನೆ ರೂಪಿಸಿ

11:15 AM Nov 11, 2017 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಮೇಲ್ವಿಚಾರಣೆಗಾಗಿ ರಚಿಸಿರುವ ವಾರ್ಡ್‌ ಸಮಿತಿಗಳು ನವೆಂಬರ್‌ ಅಂತ್ಯದೊಳಗೆ ಸಭೆ ನಡೆಸಿ ಪ್ರತಿ ವಾರ್ಡ್‌ನಲ್ಲಿ ಹೆಚ್ಚುವರಿ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸುವ ಕುರಿತು ಕ್ರೀಯಾಯೋಜನೆ ರೂಪಿಸುವಂತೆ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಕುರಿತು ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಬಿ.ಎಸ್‌.ಪಾಟೀಲ್‌ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಘನ ತ್ಯಾಜ್ಯ ನಿರ್ವಹಣೆಯ ಮೇಲ್ವಿಚಾರಣೆಗಾಗಿ ರಚಿಸಿರುವ ವಾರ್ಡ್‌ ಸಮಿತಿಗಳು ಮುನ್ಸಿಪಲ… ಕಾರ್ಪೋರೇಷನ್‌ ಕಾಯ್ದೆಯಲ್ಲಿ ಉಲ್ಲೇಖೀಸಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಿದೆ ಎಂದು ಅಭಿಪ್ರಾಯಪಟ್ಟು ಈ ನಿರ್ದೇಶನ ನೀಡಿದೆ.

ಶುಕ್ರವಾರ ಅರ್ಜಿ ವಿಚಾರಣೆಗೆ ಬಂದಾಗ ಬಿಬಿಎಂಪಿ, ನಗರದ ಪ್ರತಿ ವಾರ್ಡ್‌ನಲ್ಲಿ ರಚಿಸಿರುವ ವಾರ್ಡ್‌ ಸಮಿತಿಗಳ ಕುರಿತು ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಇದನ್ನು ಪರಿಶೀಲಿಸಿದ ನ್ಯಾಯಪೀಠ, ವಾರ್ಡ್‌ ಸಮಿತಿಗಳು ನ. 31ರೊಳಗೆ ಸಭೆ ನಡೆಸಬೇಕು. ಅದಕ್ಕೆ ಮುನ್ನ ಬಿಬಿಎಂಪಿ ಹತ್ತು ದಿನಗಳಲ್ಲಿ ಪ್ರತಿ ವಾರ್ಡ್‌ನ ಮೈಕ್ರೋ ಪ್ಲಾನ್‌ ಮತ್ತು ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಕಾಲ ಕಾಲಕ್ಕೆ ಹೊರಡಿಸಿರುವ ಆದೇಶಗಳ ಕುರಿತ ಕಿರುಹೊತ್ತಿಗೆ ಸಿದ್ಧಪಡಿಸಿ ಸಮಿತಿಗೆ ಒದಗಿಸಬೇಕು ಎಂದು ಸೂಚಿಸಿತು.

ವಾರ್ಡ್‌ ಸಮಿತಿಗಳು ಸಭೆಯಲ್ಲಿ ಇದನ್ನು ಪರಿಗಣಿಸಿ ತ್ಯಾಜ್ಯ ವಿಲೇವಾರಿಗೆ ಅನುಕೂಲವಾಗುವಂತೆ ಕ್ರಿಯಾ ಯೋಜನೆ ರೂಪಿಸಿ ಬಿಬಿಎಂಪಿಗೆ ಸಲ್ಲಿಸಬೇಕು. ಬಿಬಿಎಂಪಿ ಈ ಕ್ರಿಯಾಯೋಜನೆ ಮತ್ತು ಸಭೆಯಲ್ಲಿ ಕೈಗೊಂಡ ನಿರ್ಣಯ, ಅದರಂತೆ ಕೈಗೊಂಡ ಕಾರ್ಯಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಹೇಳಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ನಗರದ ಬಾಗಲೂರು, ಮಿಟ್ಟಗನಹಳ್ಳಿ ಮತ್ತು ಬೆಳ್ಳಹಳ್ಳಿಯಲ್ಲಿನ ಕಲ್ಲು ಕ್ವಾರಿಗಳಿಗೆ ಬಿಬಿಎಂಪಿ ಮತ್ತೆ ಕಸ ಸುರಿಯುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ದೂರಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಪರ ವಕೀಲ ಕೆ.ಎನ್‌.ಪುಟ್ಟೇಗೌಡ, ಈಗಷ್ಟೆ ವಾರ್ಡ್‌ ಸಮಿತಿ ರಚಿಸಲಾಗಿದೆ. ಮುಂದೆ ಕಸವನ್ನು ನಗರದಲ್ಲಿಯೇ ಸಂಸ್ಕರಣೆ ಮಾಡಲಾಗುವುದು. ಆ ನಿಟ್ಟಿನಲ್ಲಿ ವಾರ್ಡ್‌ಗಳಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಹೆಚ್ಚುವರಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ತೆರೆಯುವ ಕುರಿತು ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next