Advertisement
ಮಂಗಳವಾರ ಮುಂಜಾನೆ 5.30ರಿಂದಲೇ ಎಲ್ಲ ವಲಯಗಳ ಡಿಸಿಪಿ, ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳು, ಹೊಯ್ಸಳ, ಚಿತಾ ವಾಹನಗಳ ಸಿಬ್ಬಂದಿ ಆಯಾ ಠಾಣಾ ವ್ಯಾಪ್ತಿಗಳಲ್ಲಿ ಗಸ್ತು ತಿರುಗಿ, ಸಾರ್ವಜನಿಕರಲ್ಲಿ ಧೈರ್ಯ ತುಂಬಿದರು. ಅಲ್ಲದೆ, ಬಲವಂತವಾಗಿ ಅಂಗಡಿ ಮುಂಗಟ್ಟು, ಖಾಸಗಿ ಸಂಸ್ಥೆಗಳನ್ನು ಮುಚ್ಚಿಸಲು ಯತ್ನಿಸಿದ ಕೆಲ ಕಿಡಿಗೇಡಿಗಳನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಎಚ್ಚರಿಕೆ ನೀಡಿ ಕಳುಹಿಸಿದರು.
Related Articles
Advertisement
ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ನಗರ ಬಸ್ ನಿಲ್ದಾಣಗಳು, ಎಪಿಎಂಸಿಯಲ್ಲಿ ಹೆಚ್ಚಿನ ಸಂಖ್ಯೆಯ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿತ್ತು. ಮುಂಜಾನೆಯಿಂದಲೇ ಬಿಎಂಟಿಸಿ ಬಸ್‌ಗಳ ಸಂಚಾರ ವಿರಳವಾಗಿತ್ತು. ಪರಿಣಾಮ ಕೆಲ ಪ್ರಯಾಣಿಕರು ನಿಲ್ದಾಣಗಳಲ್ಲೇ ಕಾಲ ಕಳೆದರು. ಅಂತಹ ಸಂದರ್ಭದಲ್ಲಿ ಪೊಲೀಸರೇ ತಮ್ಮ ವಾಹನಗಳ ಮೂಲಕ ಪ್ರಯಾಣಿಕರನ್ನು ಕರೆದೊಯ್ಯುವ ಮೂಲಕ ನೆರವಾದರು.
ಸೆಲ್ಫಿ ಕ್ಲಿಕಿಸಿಕೊಂಡರು: ಸದಾ ಪ್ರಯಾಣಿಕರಿಂದ ತುಂಬಿರುತ್ತಿದ್ದ ಮೆಜೆಸ್ಟಿಕ್‌ನ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳು ಮಂಗಳವಾರ ಖಾಲಿ ಖಾಲಿಯಾಗಿದ್ದವು. ಹೀಗಾಗಿ ಬಸ್‌ಗಾಗಿ ಕಾಯುತ್ತಿದ್ದ ಯುವಕ, ಯುವತಿಯರು, ಕೆಲ ಪ್ರಯಾಣಿಕರು ಖಾಲಿ ನಿಲ್ದಾಣಗಳಲ್ಲಿ ಸೆಲ್ಫಿà ಕ್ಲಿಕಿಸಿಕೊಂಡು ಸಂಭ್ರಮಿಸಿದರು.
ವಾಟಾಳ್ ನಾಗರಾಜ್ ಬಂಧನ, ಬಿಡುಗಡೆ: ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಮೆಜೆಸ್ಟಿಕ್‌ನಲ್ಲಿ ಚಾಪೆ ಹಾಸಿಕೊಂಡು ಮಲಗಿ ಪ್ರತಿಭಟನೆ ನಡೆಸಿದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ವಾಟಾಳ್ ನಾಗರಾಜ್ ಹಾಗೂ ಇತರರನ್ನು ವಶಕ್ಕೆ ಪಡೆದು ಕರೆದೊಯ್ದರು. ಈ ವೇಳೆ ಬುಧವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆಯುವ ಮುಷ್ಕರದಲ್ಲಿ ಪಾಲ್ಗೊಳ್ಳುವುದಾಗಿ ವಾಟಾಳ್ ನಾಗರಾಜ್ ಹೇಳಿದರು.
ದುಬಾರಿ ಪ್ರಯಾಣ ದರ – ಪ್ರಕರಣ ದಾಖಲು: ಬಿಎಂಟಿಸಿ ಬಸ್‌ಗಳ ಸಂಚಾರ ವಿರಳವಾಗಿದ್ದರಿಂದ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋದರು. ಇದನ್ನೇ ದುರುಪಯೋಗ ಪಡಿಸಿಕೊಂಡ ಖಾಸಗಿ ವಾಹನ ಚಾಲಕರು, ದುಬಾರಿ ಪ್ರಯಾಣ ದರ ವಸೂಲಿ ಮಾಡುತ್ತಿದ್ದರು. ಈ ಸಂಬಂಧ ಮೆಜೆಸ್ಟಿಕ್, ರೈಲು ನಿಲ್ದಾಣ ಸೇರಿ ಕೆಲ ಆಟೋ ನಿಲ್ದಾಣಗಳಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿತ್ತು. ನಿಗದಿತ ಪ್ರಯಾಣ ದರಕ್ಕಿಂತ ಹೆಚ್ಚು ಹಣ ಕೇಳುವ, ವಸೂಲಿ ಮಾಡುವ ಆಟೋ, ಕ್ಯಾಬ್ ಚಾಲಕರ ವಿರುದ್ಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದರು.
ಎಪಿಎಂಸಿ ಖಾಲಿ ಖಾಲಿ: ಕಾರ್ಮಿಕರ ಮುಷ್ಕರದ ಬಿಸಿ ಎಪಿಎಂಸಿಗೂ ತಟ್ಟಿತ್ತು. ಮುಂಜಾನೆ 4 ಗಂಟೆಗೆ ಆರಂಭವಾಗುತ್ತಿದ್ದ ಮಾರುಕಟ್ಟೆ ಮಂಗಳವಾರ ಅಪರಾಹ್ನ 12 ಗಂಟೆಯಾದರೂ ಗ್ರಾಹಕರಿಲ್ಲದೆ ಬಣಗುಡುತ್ತಿತ್ತು. ಕೂಲಿ ಕಾರ್ಮಿಕರು ಕೂಡ ಕೆಲಸಕ್ಕೆ ಗೈರಾಗಿದ್ದು, ವ್ಯಾಪಾರಿಗಳ ವಹಿವಾಟಿಗೆ ಭಾರೀ ಪೆಟ್ಟು ಬಿದ್ದಿತ್ತು. ಬೇರೆ ಜಿಲ್ಲೆಗಳಿಂದ ಹತ್ತಾರು ಲಾರಿಗಳಲ್ಲಿ ಬಂದಿದ್ದ ತರಕಾರಿ ಹಾಗೂ ದಿನಸಿ ವಸ್ತುಗಳನ್ನು ಕೆಳಗಿಳಿಸಲು ಕೂಲಿ ಕಾರ್ಮಿಕರಿಲ್ಲದೆ, ಲಾರಿಗಳು ನಿಂತಲ್ಲೇ ನಿಂತಿದ್ದು ಕಂಡು ಬಂತು.
ಓಂ ಶಕ್ತಿ ಭಕ್ತರಿಗೆ ಸಂಕಷ್ಟ: ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹೊರಡಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರ ಪರಿಣಾಮ ನೆರೆ ಜಿಲ್ಲೆಗಳಿಗೆ ಹೊರಡಬೇಕಿದ್ದ ಪ್ರಯಾಣಿಕರ ಜತೆಗೆ ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ಹೋಗಬೇಕಿದ್ದ ಭಕ್ತಾಧಿಗಳು ನಿಲ್ದಾಣದಲ್ಲೇ ಕಾಲ ಕಳೆಯುವಂತಾಯಿತು.
ಉಚಿತ ಕ್ಯಾಬ್ ಸೇವೆ ಕಲ್ಪಿಸಿದ ಬಟ್ಟೆ ವ್ಯಾಪಾರಿ: ವಿಜಯಪುರದಿಂದ ಬೆಂಗಳೂರಿಗೆ ಮಗುವಿನ ಕಣ್ಣಿನ ಚಿಕಿತ್ಸೆಗಾಗಿ ಬಂದಿದ್ದ ಕುಟುಂಬವೊಂದು ಸರಿಯಾದ ಸಮಯಕ್ಕೆ ಬಸ್ ಸಿಗದೆ ಪರದಾಡಬೇಕಾಯಿತು. ಮುಷ್ಕರದ ಮಾಹಿತಿ ತಿಳಿಯದ ಕುಟುಂಬ ಬಣಗುಡುತ್ತಿದ್ದ ಬಸ್ ನಿಲ್ದಾಣ ಕಂಡು ಆತಂಕಗೊಂಡಿತ್ತು. ಇದನ್ನು ಗಮನಿಸಿದ ಬಟ್ಟೆ ವ್ಯಾಪಾರಿ ಸಭಾಪತಿ ಎಂಬುವವರು ಕೂಡಲೇ ಉಚಿತ ಕ್ಯಾಬ್ ಸೇವೆ ಒದಗಿಸಿ ಮಾನವೀಯತೆ ಮೆರೆದರು.