Advertisement
1859ರಲ್ಲಿ ಮೊಘಲ್ ಸಾಮ್ರಾಜ್ಯ ಅಂತ್ಯಗೊಂಡ ಬಳಿಕ, ರಾಷ್ಟ್ರವ್ಯಾಪಿ ನಿಯಂತ್ರಣ ಸಾಧಿಸಿದ ಅಥವಾ ಮಾನ್ಯತೆ ಪಡೆದ ರಾಜ ವಂಶಾಡಳಿತ ದೇಶಕ್ಕೆ ಒದಗಲಿಲ್ಲ. ಮೊಘಲರ ಆಳ್ವಿಕೆ ಉತ್ತುಂಗ ಸ್ಥಿತಿಯನ್ನು ತಲುಪಿದ್ದ ಕಾಲದಲ್ಲೂ ಅವರಿಗೆ ಇಡೀ ರಾಷ್ಟ್ರವನ್ನು ತಮ್ಮ ಆಡಳಿತದ ವ್ಯಾಪ್ತಿಯೊಳಗೆ ತರಲು ಸಾಧ್ಯವಾಗಿರಲಿಲ್ಲ. ದಕ್ಷಿಣಭಾರತದಲ್ಲಿ ಮೊಘಲ ಆಡಳಿತವೆಂಬುದು ಇರಲಿಲ್ಲ. ಔರಂಗಜೇಬ ದಕ್ಷಿಣ ಪ್ರದೇಶವನ್ನು – ಆ ದಿನಗಳಲ್ಲಿ ಯಾವುದನ್ನು ಮರಾಠವಾಡಾ ಪ್ರದೇಶವೆಂದು ಹೇಳಲಾಗುತ್ತಿತ್ತೋ, ಅದನ್ನು – ತನ್ನ ಆಡಳಿತ ವ್ಯಾಪ್ತಿಯೊಳಗೆ ತಂದುಕೊಳ್ಳುವುದಕ್ಕೆ ಎಲ್ಲಿಲ್ಲದ ಪ್ರಯತ್ನವನ್ನೇನೋ ಮಾಡಿದ್ದ. ಇಂದಿಗೂ ಔರಂಗಾಬಾದ್, ಅವನ ಹೆಸರನ್ನೇ ಹೊತ್ತುಕೊಂಡಿದೆ.
Related Articles
Advertisement
ಗಾಂಧೀಜಿಯವರ ಮೂರನೆಯ ಪುತ್ರ ರಾಮಲಾಲ್ ರಚನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿ ಸಿಕೊಂಡರು. ಗಾಂಧೀಜಿಯ ನಾಲ್ಕನೆಯ ಪುತ್ರ ದೇವದಾಸ್ ವೃತ್ತಪತ್ರಿಕೆಯೊಂದರ ಸಂಪಾದಕರಾದರು. ತಮ್ಮ ಮಕ್ಕಳನ್ನು ರಾಜಕೀಯ ಕಕ್ಷೆಯೊಳಗೆ ಸೇರುವಂತೆ ಉತ್ತೇಜಿಸುವ ಇಂದಿನ ಸಾಮಾನ್ಯ ಮಟ್ಟದ ರಾಜಕೀಯ ನಾಯಕರಂತೆ ವರ್ತಿಸಲಿಲ್ಲ ವೆಂದೇ ಮೋಹನದಾಸ ಕರಮಚಂದ್ ಗಾಂಧಿಯವರು ಮಹಾತ್ಮಾ ಎಂದು ಕರೆಸಿಕೊಂಡರು. ಅವರ ಸಾಹಚರ್ಯದಲ್ಲಿದ್ದ ಇತರ ಕಾಂಗ್ರೆಸ್ ನಾಯಕರು ಕೂಡ ತಮ್ಮ ಮಕ್ಕಳು ರಾಜಕೀಯ ಪ್ರವೇಶಿಸುವ ಬಗ್ಗೆ ಒಲವನ್ನು ತೋರದೆ ಘನತೆ ಮೆರೆದರು. ಸಿ.ರಾಜಗೋಪಾಲಾಚಾರಿಯವರ ಪುತ್ರ ಸಿ.ಆರ್. ನರಸಿಂಹನ್ ಅವರು ತಮ್ಮದೇ ಯೋಗ್ಯತೆಯಿಂದ ಲೋಕಸಭೆಗೆ ಆಯ್ಕೆ ಯಾದರೇ ಹೊರತು, ತಮ್ಮ ತಂದೆಯ ಕೃಪೆಯಿಂದಲ್ಲ. ಸರದಾರ್ ಪಟೇಲರ ಪುತ್ರ ದಯಾಭಾಯ್ ಪುತ್ರಿ ಮಣಿಬೇನ್ ಹಾಗೂ ರಾಜೇಂದ್ರಪ್ರಸಾದರ ಪುತ್ರ ಮೃತ್ಯುಂಜಯ ಪ್ರಸಾದ್ ಅವರು ಕೂಡ ಹೀಗೆಯೇ ತಮ್ಮ ಯೋಗ್ಯತೆಯಿಂದಲೇ ಗೆದ್ದವರು.
ಸಿದ್ಧಾರ್ಥ ಶಂಕರರಾಯ್ ಅವರು ಪಶ್ಚಿಮಬಂಗಾಲದ ಮುಖ್ಯ ಮಂತ್ರಿಯಾದುದು, ತನ್ನ ಅಜ್ಜ ದೇಶಬಂಧು ಚಿತ್ತರಂಜನದಾಸ್ ಅವರು ಕಾಲವಾಗಿ ಹಲವು ದಶಕಗಳ ಬಳಿಕ. ರಾಜಾಜಿ ಅಥವಾ ಸರದಾರ್ ಪಟೇಲ್ ಅವರ ಜಾಗದಲ್ಲಿಂದು ಮುಲಾಯಂ, ಲಾಲೂ, ಎಂ. ಕರುಣಾನಿಧಿ, ನಮ್ಮವರೇ ಆದ ದೇವೇಗೌಡರಂಥವರಿದ್ದಾರೆ. ಬಾಳ್ ಠಾಕ್ರೆಯವರ ಹೆಸರನ್ನೂ ಇಲ್ಲಿ ಉಲ್ಲೇಖೀಸಬಹುದು. ಸ್ವಜನಪಕ್ಷಪಾತದ ರೋಗ ಬಿಜೆಪಿಗೂ ಅಂಟಿಕೊಂಡಿದೆ. ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಈಗ ಶಿವಮೊಗ್ಗದ ಸಂಸದ. ಭಾರತದಲ್ಲಿನ ಹೆಚ್ಚಿನ ರಾಜಕೀಯ ಪಕ್ಷಗಳು ವಂಶಾಡಳಿತದ ಸಮಸ್ಯೆಯಿಂದ ಬಳಲುತ್ತಿವೆ ಎಂದು ರಾಹುಲ್ ಗಾಂಧಿ ಹೇಳಿರುವುದಾಗಿ ವರದಿಗಳು ಹೇಳುತ್ತಿವೆ. “ಭಾರತ ಈಗ ಸಾಗುತ್ತಿರುವ ದಾರಿ ಇದು’ ಎಂದೂ ಅವರು ಉದ್ಗರಿಸಿರುವುದಾಗಿ ವರದಿಯಾಗಿದೆ. ಇಂಥದೇ ಪ್ರವೃತ್ತಿ ಭಾರತದ ಕೈಗಾರಿಕೋದ್ಯಮದಲ್ಲೂ ಇದೆ ಎಂದವರು ಬೆಟ್ಟು ಮಾಡಿದ್ದಾರೆ. ಆದರೆ ಅವರು ಹೇಳದೆ ಉಳಿದ ಅಂಶವೊಂದಿದೆ. ಅದೆಂದರೆ, ವ್ಯಾಪಾರ ಉದ್ಯಮದಲ್ಲಾಗಲಿ, ಕೈಗಾರಿಕೆಯಲ್ಲಾಗಲಿ ಪೂರ್ವಜರ ಹಕ್ಕು ಉತ್ತರಾಧಿಕಾರಿಗೆ ದೊರೆಯುವುದು ಕಾನೂನುಬದ್ಧವಾಗಿ. ರಾಜಕೀಯದ ಅಧಿಕಾರ ಅಥವಾ ಹುದ್ದೆ ಹೀಗೆ ಕಾನೂನುಬದ್ಧವಾಗಿ ದೊರೆಯುವಂಥದ್ದಲ್ಲ. ಆದರೆ ಒಂದು ವಿಷಯದಲ್ಲಿ ರಾಹುಲ್ ಅವರನ್ನು ಒಪ್ಪಬಹುದು. ರಾಜಕೀಯ ಹಕ್ಕುದಾರಿಕೆ ದೊರೆಯಬೇಕಾದುದು ಆಯಾ ವ್ಯಕ್ತಿಯ ಸಾಮರ್ಥ್ಯ ಹಾಗೂ ಸೂಕ್ಷ್ಮಸಂವೇದನೆಯ ಗುಣದಿಂದ ಎಂಬುದನ್ನವರು ಒಪ್ಪಿಕೊಂಡಿದ್ದಾರೆ.
ಇಂದಿನ ದಿನಗಳ ರಾಜಕೀಯ ಹಿಂದಿನಂತಲ್ಲ. ಅದೀಗ ದುಡ್ಡಿನ ವ್ಯವಹಾರವನ್ನು ಒಳಗೊಂಡಿದೆ. ಅದರಲ್ಲಿರುವ ಸಂಪತ್ತಿನ ಸಂಗ್ರಹಣೆಯ ಅವಕಾಶ, ಆಶ್ರಯದಾತರೆನ್ನಿಸಿಕೊಳ್ಳುವ ಹಾಗೂ ಅಧಿಕಾರ ದಕ್ಕಿಸಿಕೊಳ್ಳುವ ಅವಕಾಶ-ಇವೇ ನಮ್ಮ ರಾಜಕಾರಣಿಗಳನ್ನು ತಮ್ಮ ಬಂಧುಗಳ ರಾಜಕೀಯ ಪ್ರವೇಶಕ್ಕೆ ಉತ್ತೇಜನ ನೀಡುತ್ತಿರುವುದು! ದೇಶದಲ್ಲಿ ಕೆಲ ಆನುವಂಶಿಕ ನ್ಯಾಯಾಧೀಶರೂ ಇದ್ದಾರಲ್ಲವೇ ಎಂದು ವಾದಿಸುವವರು ಇದ್ದಾರಾದರೂ, ಸ್ವಲ್ಪ ಮಟ್ಟಿನ ಯೋಗ್ಯತೆಯೆಂಬುದು ಇಲ್ಲದಿದ್ದರೆ ಒಬ್ಬ ವ್ಯಕ್ತಿ ನ್ಯಾಯವಾದಿಯಾಗಿ, ನ್ಯಾಯಾಧೀಶನಾಗಿ ಗುರುತಿಸಿಕೊಳ್ಳುವುದು ಕಷ್ಟಸಾಧ್ಯ.
ನಮ್ಮ ರಾಜಕೀಯ ಕ್ಷೇತ್ರದಲ್ಲಿ ಇನ್ನೊಂದು ಮುಖ್ಯ ಲಕ್ಷಣವೆಂದರೆ ವ್ಯಕ್ತಿ ಪೂಜೆ; ಹೀಗೆ ನಾಯಕಮಣಿಗಳ ಸುತ್ತ ನೇತಾಡುತ್ತಿರುವ ಮಂದಿ ತಮಗೆ ಬೇಕಿರುವ ಸ್ಥಾನಮಾನಗಳನ್ನು ದಕ್ಕಿಸಿಕೊಳ್ಳುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ನಮಗಿಂದು ರಾಂ ಜೇಠ್ಮಲಾನಿಯವರಂಥ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಬೇಕು. ನಮ್ಮ ರಾಜಕೀಯ ಪಕ್ಷಗಳಿಗೆ ಅಮರಿಕೊಂಡಿರುವ ವಂಶಾಡಳಿತ ಪ್ರವೃತ್ತಿಯನ್ನು ನಿರ್ಮೂಲನಗೊಳಿಸುವ ನಿಟ್ಟಿನಲ್ಲಿ ಇರಿಸಬೇಕಾಗಿರುವ ಪ್ರಥಮ ಹೆಜ್ಜೆಗಳ ಪೈಕಿ ಒಂದೆಂದರೆ, ಸಾಂಸ್ಥಿಕ ಚುನಾವಣೆಗಳನ್ನು ನಡೆಸುವುದು. ನಮ್ಮ ಎಲ್ಲ ಪಕ್ಷಗಳಲ್ಲೂ ಇದು ಪ್ರಹಸನವಾಗಿಬಿಟ್ಟಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್‌ನಲ್ಲಿ ಇತ್ತೀಚಿನ ದಶಕಗಳಲ್ಲಿ ನಡೆದ ಒಂದೇ ಒಂದು ನೈಜಸ್ವರೂಪದ ಸಾಂಸ್ಥಿಕ ಚುನಾವಣೆಯೆಂದರೆ, ಎಂ.ವಿ. ರಾಜಶೇಖರನ್ ಅವರನ್ನು ಧರ್ಮಸಿಂಗ್ ಅವರು ಪರಾಭವ ಗೊಳಿಸಿದ ಸಂದರ್ಭ. ಈಚಿನ ದಶಕಗಳಲ್ಲಿ ಎಐಸಿಸಿಯಲ್ಲಿ ಚುನಾಯಿತ ಅಧ್ಯಕ್ಷರಾಗಿದ್ದವರೆಂದರೆ ಸೀತಾರಾಮ ಕೇಸರಿಯ ವರಷ್ಟೇ. ಕೇಸರಿ ಅವರನ್ನು ಸೋನಿಯಾ ಹುದ್ದೆಯಿಂದ ಕಿತ್ತು ಹಾಕಿ ತಾವೇ ಅಧ್ಯಕ್ಷರಾದರು. ದಶಕಗಳ ಹಿಂದೆ ಎಐಸಿಸಿಯಲ್ಲಿ ನಡೆದಿದ್ದ ಅದ್ಭುತವೆನ್ನಬಹುದಾದ ಸಾಂಸ್ಥಿಕ ಚುನಾವಣೆಯಲ್ಲಿ (1950) ಬಾಬೂ ಪುರುಷೋತ್ತಮದಾಸ್ ಟಂಡನ್ ಪ್ರಧಾನಿ ನೆಹರೂ ಅವರ ಅಭ್ಯರ್ಥಿಯಾಗಿದ್ದ ಆಚಾರ್ಯ ಜೆ. ಬಿ. ಕೃಪಲಾನಿ ಯವರನ್ನು ಪರಾಭವಗೊಳಿಸಿದ್ದರು.
ಈಗ ರಾಹುಲ್ ಮೊಘಲರ ಶೈಲಿಯಲ್ಲಿ ತಾಯಿಯನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಿ ತಾನೇ ಕಾಂಗ್ರೆಸ್ ಅಧ್ಯಕ್ಷ ರಾಗುವರೇ? ಕಾದು ನೋಡಬೇಕು. ನಾವು ಭಾರತೀಯರು, ಅಮೆರಿಕದಲ್ಲಿ ಮಾಜಿ ಅಧ್ಯಕ್ಷರ ಪುತ್ರರು ಅಧ್ಯಕ್ಷ ಪದವಿಗೆ ಆಯ್ಕೆಯಾಗಿರುವ ಪ್ರಸಂಗಗಳನ್ನು ಉಲ್ಲೇಖೀಸುತ್ತ ಓಡಾಡುತ್ತಿ ರುತ್ತೇವೆ. ಆದರೆ ಅವರಲ್ಲಿ ಯಾರೂ ತಮ್ಮ ತಂದೆಯ ಅವಧಿ ಮುಗಿದ ಬೆನ್ನಿಗೇ ಉತ್ತರಾಧಿಕಾರಿಗಳಾಗಲಿಲ್ಲ. 19ನೆಯ ಶತಮಾನದಲ್ಲಿ ಜಾನ್ ಕ್ವಿನ್ಸಿ ಆ್ಯಡಮ್ಸ್ ಅವರು, ತಮ್ಮ ತಂದೆ ಜಾನ್ ಆ್ಯಡಮ್ಸ್ ಅಧಿಕಾರದಿಂದಿಳಿದ 24 ವರ್ಷಗಳ ಬಳಿಕ ಅಧ್ಯಕ್ಷರಾದರು. ಹಾಗೆಯೇ ಜಾರ್ಜ್ ಎಚ್. ಡಬ್ಲ್ಯು. ಬುಶ್ ಅವರ ಅಧ್ಯಕ್ಷತೆಯ ಅವಧಿ ಪೂರ್ಣಗೊಂಡ ಎಂಟು ವರ್ಷಗಳ ಬಳಿಕ 2001ರಲ್ಲಿ ಅಧ್ಯಕ್ಷ ಪಟ್ಟ ಪಡೆದರು. ಈ ನಡುವೆ, ವಂಶಾಡಳಿತ ಪದ್ಧತಿ ಹಾಗೂ ಉತ್ತರಾಧಿಕಾರ ಪರಂಪರೆಯನ್ನು ಪಾಲಿಸುವ ವಿಚಾರದಲ್ಲಿ ನಮ್ಮ ನೆರೆರಾಷ್ಟ್ರ ಪಾಕಿಸ್ಥಾನ ನಮ್ಮೊಂದಿಗೆ ಪೈಪೋಟಿ ನಡೆಸುತ್ತಿರುವ ಹಾಗಿದೆ!
ಅರಕೆರೆ ಜಯರಾಮ್