ಹಾವೇರಿ: ಸಮಾಜದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಿಗೆ ಸೂಕ್ತ ಕಾನೂನು ಹಾಗೂ ಸಾಂಸ್ಥಿಕ ನೆರವು ಒದಗಿಸಲು ಜಿಲ್ಲಾ ಆಸ್ಪತ್ರೆಯಲ್ಲಿ “ಗೆಳತಿ’ ಎಂಬ ವಿಶೇಷ ಚಿಕಿತ್ಸಾ ಘಟಕ ಕಾರ್ಯ ನಿರ್ವಹಿಸುತ್ತಿದೆ.
ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಹೀಗೆ ಅನೇಕ ದೌರ್ಜನ್ಯಗಳಿಗೆ ಒಳಗಾಗುವಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸೂಕ್ತ ಚಿಕಿತ್ಸೆಗಾಗಿ, ಕಾನೂನಿನ ನೆರವಿಗೆ, ಸಮಾಲೋಚನೆಗೆ, ಸೇವೆ ಪಡೆಯಲು ಬೇರೆ ಬೇರೆ ಸ್ಥಳಗಳಿಗೆ ಹೋಗಲು ಸಮಸ್ಯೆ ಎದುರಿಸುವ ಮಹಿಳೆಯರಿಗೆ ಒಂದೇ ಸೂರಿನಡಿ ಶೀಘ್ರ ನೆರವು ಒದಗಿಸಲು ಮಹಿಳಾ ವಿಶೇಷ ಚಿಕಿತ್ಸಾ ಘಟಕ ಸಹಕಾರಿಯಾಗಿದೆ.
14 ವರ್ಷದೊಳಗಿನ ಮಕ್ಕಳಿಗೆ ಅತ್ಯಾಚಾರ, ಲೈಂಗಿಕ ಕಿರುಕುಳ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಫೋಕ್ಸೋ ಕಾಯ್ದೆಯಡಿ ಶಿಕ್ಷೆ ನೀಡಲು 2014ರಿಂದ ಆರಂಭವಾದ ಈ ಘಟಕ, ನಂತರ 2017-18ರಲ್ಲಿ ಗೆಳತಿ ಚಿಕಿತ್ಸಾ ಘಟಕವಾಗಿ ಕೆಲಸ ಪ್ರಾರಂಭಿಸಿದೆ. 2020 ಜನವರಿಯಿಂದ ಸಖೀ (ಒನ್ ಸ್ಟಾಫ್ ಸೆಂಟರ್) ಘಟಕ ತಾತ್ಕಾಲಿಕವಾಗಿ ಪ್ರಾರಂಭಿಸಿದೆ. ಸಾರ್ವಜನಿಕರಿಗೆ ವಿವಿಧ ಕ್ಷೇತ್ರಗಳಲ್ಲಿ ಅವರಿಗೆ ಸೂಕ್ತ ನ್ಯಾಯ ಸಿಗದೇ ಕಂಗಾಲಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿದವರು ಗೆಳತಿ ಮಹಿಳಾ ಚಿಕಿತ್ಸಾ ಘಟಕದಲ್ಲಿ ನ್ಯಾಯ ದೊರಕಿಸಿಕೊಡುವ ಕೆಲಸ ಇದರದ್ದಾಗಿದೆ.
ಉದ್ದೇಶ: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಕಾನೂನು ನೆರವು, ಸಮಾಲೋಚನೆ ಮತ್ತು ಮಹಿಳಾ ಸಹಾಯವಾಣಿ ಮುಂತಾದ ಸೌಲಭ್ಯ ಒದಗಿಸುವುದು. ಮಹಿಳಾ ವಿಶೇಷ ಚಿಕಿತ್ಸಾ ಘಟಕದ ಮೂಲಕ ಸಮಗ್ರವಾದ ಸೇವೆ ಒದಗಿಸುವ ಹಾಗೂ ಒಂದು ಇಲಾಖೆಯಿಂದ ಮತ್ತೂಂದು ಇಲಾಖೆ ಸಂಪರ್ಕಿಸಿ ಮುಖ್ಯವಾಗಿ ಸಾರ್ವಜನಿಕ ಆರೋಗ್ಯ ಸೇವೆಗಳ ಮೂಲಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವುದಾಗಿದೆ. ಸರ್ಕಾರ ಇಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವುದು ನ್ಯಾಯ ಕಲ್ಪಿಸುವ ಉದ್ದೇಶದಿಂದ. ಇದನ್ನು ತಾತ್ಕಾಲಿಕವಾಗಿ ಬಾಹ್ಯ ಮೂಲದ ಏಜೆನ್ಸಿಯಿಂದ ಮಾನವ ಸಂಪನ್ಮೂಲದ ನಿರ್ವಹಣೆ ಮಾಡಲಾಗುತ್ತಿದೆ.
ಗೆಳತಿ ಕೇಂದ್ರದ ನೆರವು ಏನು? : ಲೈಂಗಿಕ ಅತ್ಯಾಚಾರಕ್ಕೊಳಗಾದ ಮಹಿಳೆಗೆ ವೈದ್ಯಾಧಿ ಕಾರಿಗಳಿಂದ ವೈದ್ಯಕೀಯ ನೆರವು, ಕಾನೂನು ನೆರವು ನೀಡಿ ನ್ಯಾಯ ಒದಗಿಸಿಕೊಡುವುದು, ನುರಿತ ಸಮಾಲೋಚಕರಿಂದ ಅಗತ್ಯ ಸಮಾಲೋಚನೆ ನಡೆಸಿ ಮಾನಸಿಕ ಸ್ಥೈರ್ಯ ಹೆಚ್ಚಿಸುವುದು. ಮಹಿಳಾ ಪೊಲೀಸ್ ಅಧಿಕಾರಿಯು ಪ್ರಕರಣ ದಾಖಲಿಸಿಕೊಂಡು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸುವುದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೇಮಿಸಲ್ಪಟ್ಟ ಕಾನೂನು ಸಲಹೆಗಾರರಿಂದ ಅಗತ್ಯ ಕಾನೂನು ನೆರವು ಒದಗಿಸುವುದು, ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಾ ಸಂಸ್ಥೆಗಳು, ಸರ್ಕಾರಿ ಗೃಹಗಳಲ್ಲಿ ಮಹಿಳೆಯರಿಗೆ ಆಶ್ರಯ ಮತ್ತು ರಕ್ಷಣೆ ಒದಗಿಸುವುದು, ನೊಂದ ಮಹಿಳೆಯರಿಗೆ ತುರ್ತು ಚಿಕತ್ಸಾ ಘಟಕ, ಐ.ಸಿ.ಯು. ವ್ಯವಸ್ಥೆ ಮಾಡುವುದು, ಅಷ್ಟೇ ಅಲ್ಲದೇ ಚಿಕಿತ್ಸೆಗೆ ದಾಖಲಾದ ಮಹಿಳೆಯರಿಗೂ ಗೆಳತಿ ಘಟಕದ ಬಗ್ಗೆ ಮಾಹಿತಿ ನೀಡಿ ಸೌಲಭ್ಯ ಮಾಡಿಕೊಡುವುದು, ಚಿಕಿತ್ಸೆಗೆ ಅಗತ್ಯವಿದ್ದಲ್ಲಿ ಶುಶ್ರೂಷಕರನ್ನು ನೇಮಿಸಿ ಒ.ಪಿ.ಡಿಯ ಸ್ಥಳಾವಕಾಶ ಕಲ್ಪಿಸಲಾಗುವುದು ಗೆಳತಿ ಕೇಂದ್ರದ ಕಾರ್ಯವಾಗಿದೆ.