ಬಡಗನ್ನೂರು: ದೇಯಿ ಬೈದ್ಯೆತಿ- ಕೋಟಿ ಚೆನ್ನಯ ಮೂಲಸ್ಥಾನ, ಗೆಜ್ಜೆಗಿರಿ ನಂದನ ಬಿತ್ತ್ಲ್‌ನಲ್ಲಿ ಪುನರುತ್ಥಾನ ಕಾಮಗಾರಿ ವೇಗ ಪಡೆದುಕೊಳ್ಳುತ್ತಿದೆ. ಕೆಂಪು ಕಲ್ಲು ಮತ್ತು ಶಿಲೆ ಕಲ್ಲಿನ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಭಕ್ತರ ಸರಣಿ ಕರಸೇವೆಯೂ ನಡೆಯುತ್ತಿದೆ. ಮಳೆಯ ಬಿರುಸು ಕಡಿಮೆಯಾಗುತ್ತಲೇ ಕಾಮಗಾರಿ ಹಾಗೂ ಶ್ರಮದಾನಕ್ಕೆ ಆದ್ಯತೆ ನೀಡಲಾಗಿದ್ದು, 2 ತಿಂಗಳಿನಿಂದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ನಾನಾ ಭಾಗಗಳಿಂದ 2,000 ಭಕ್ತರು ಕರಸೇವೆ ಮಾಡಿದ್ದಾರೆ.
ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ನೇತೃತ್ವದಲ್ಲಿ ಕ್ಷೇತ್ರ ಕಾರ್ಯಕ್ಕೆ ವೇಗ ನೀಡಲಾಗಿದೆ. ಸಮಿತಿ ಗೌರವಾಧ್ಯಕ್ಷ, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಜಯ ಸಿ. ಸುವರ್ಣ ಕ್ಷೇತ್ರಕ್ಕೆ ಭೇಟಿ ನೀಡಿ, ಕಾಮಗಾರಿ ಬಗ್ಗೆ ಮಾರ್ಗದರ್ಶನ ನೀಡಿದರು.
ಆದಿ ದೈವ ಧೂಮಾವತಿಯ ಸಾನ್ನಿಧ್ಯ ಪೂರ್ಣಗೊಂಡಿದೆ. ಕುಪ್ಪೆ ಪಂಜುರ್ಲಿ ಸಾನ್ನಿಧ್ಯ, ಬೆರ್ಮೆರ್ ಗುಂಡ ಕಾಮಗಾರಿ ಮುಗಿದಿದೆ. ಗುರು ಸಾಯನ ಬೈದ್ಯರು- ದೇಯಿ ಬೈದ್ಯೆತಿ ಧರ್ಮ ಚಾವಡಿ ಮುಕ್ಕಾಲು ಭಾಗ ಪೂರ್ತಿಗೊಂಡಿದೆ. ಮೂಲಸ್ಥಾನ ಗರಡಿ, ದೇಯಿ ಬೈದ್ಯೆತಿ ಸಮಾಧಿ , ಸರೋಳಿ ಸೈಮಂಜ ಕಟ್ಟೆ, ಕಲ್ಲಾಲ್ದಾಯ ಕಟ್ಟೆ ಕಾಮಗಾರಿ ನಡೆಯುತ್ತಿವೆ. ಕ್ಷೇತ್ರಾಡಳಿತ ಸಮಿತಿಯ ನೇತೃತ್ವದಲ್ಲಿ ಧೂಮಾವತಿ ಕರಸೇವಾ ಸಮಿತಿ ರಚಿಸಲಾಗಿದೆ ಎಂದು ಜಯ ಸುವರ್ಣ ತಿಳಿಸಿದರು.
ದೇಯಿ ಬೈದ್ಯೆತಿ ಸಮಾಧಿಯ ಕಾಮಗಾರಿಯನ್ನು ಕರಸೇವೆ ಮೂಲಕವೇ ಆರಂಭಿಸಲಾಗಿದೆ. ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಗೆಜ್ಜೆಗಿರಿ ಶಿಖರಾಗ್ರದಲ್ಲಿ ಮೂಲಸ್ಥಾನ ಗರಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಗೆಜ್ಜೆಗಿರಿ ಕರಸೇವಾ ಸಮಿತಿಯ ಮೂಲಕ ಶ್ರಮದಾನ ಸಂಘಟಿಸಲಾಗುತ್ತಿದೆ ಎಂದು ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀಧರ ಪೂಜಾರಿ ಹಾಗೂ ಕ್ಷೇತ್ರಾಡಳಿತ ಸಮಿತಿಯ ಪ್ರಭಾರ ಅಧ್ಯಕ್ಷ, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್ ತಿಳಿಸಿದರು.
ಉಪಾಧ್ಯಕ್ಷ ಪೀತಾಂಬರ ಹೇರಾಜೆ, ರಾಜಶೇಖರ ಕೋಟ್ಯಾನ್, ಪ್ರ. ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿಗಳಾದ ಸುಧಾಕರ ಸುವರ್ಣ, ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಚಂದ್ರಶೇಖರ ಸುವರ್ಣ, ಬಿಲ್ಲವ ಮಹಾಮಂಡಲದ ಪ್ರ. ಕಾರ್ಯದರ್ಶಿ ಮೋಹನ್‌ದಾಸ್ ಪಾವೂರು, ಲೀಲಾವತಿ ಪೂಜಾರಿ, ಪದ್ಮನಾಭ ಸುವರ್ಣ, ರವೀಂದ್ರ ಸುವರ್ಣ, ಸವಿತಾ ಪೂಜಾರಿ, ತಾಲೂಕು ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಧೂಮಾವತಿ ಕರಸೇವಾ ಸಮಿತಿ ಅಧ್ಯಕ್ಷ ಉದಯ ಕೋಲಾಡಿ, ಪ್ರ. ಕಾರ್ಯದರ್ಶಿ ಜನಾರ್ದನ ಪದಡ್ಕ, ಉಪಾಧ್ಯಕ್ಷ ನಾರಾಯಣ ಪೂಜಾರಿ ನಂಜೆ, ನಾರಾಯಣ ಪೂಜಾರಿ ಕುರಿಕ್ಕಾರ, ಹರೀಶ್ ಶಾಂತಿ, ಅಶೋಕ್ ಬೊಳ್ಳಾಡಿ, ರವಿ ಮಾಯಿಲ್ಗ, ಕೋಶಾಧಿಕಾರಿ ಚಂದ್ರಕಾಂತ ಶಾಂತಿವನ, ದಯಾನಂದ ಕರ್ಕೆರ, ಸುರೇಶ್ ತಿಂಗಳಾಡಿ, ಶಿವ ಪ್ರಸಾದ್ ಇರ್ದೆ, ಸದಾನಂದ ಕರ್ಕೇರ, ಅವಿನಾಶ್ ಕಾಯರ್‌ಪದವು, ಬಾಬು ಪೂಜಾರಿ ಇದ್ಪಾಡಿ, ನಾರಾಯಣ ಪೂಜಾರಿ ಇರ್ದೆ ಉಪಸ್ಥಿತರಿದ್ದರು.