Advertisement

ಸಾಹಿತಿ ಡಾ|ಗೀತಾ ನಾಗಭೂಷಣ ಇನ್ನಿಲ್ಲ

11:44 PM Jun 28, 2020 | Sriram |

ಕಲಬುರಗಿ: ಖ್ಯಾತ ಸಾಹಿತಿ, ಹಿರಿಯ ಲೇಖಕಿ, ನಾಡೋಜ ಡಾ|ಗೀತಾ ನಾಗಭೂಷಣ (78) ರವಿವಾರ ರಾತ್ರಿ ನಿಧನ ಹೊಂದಿದರು.

Advertisement

ಇಲ್ಲಿನ ಸ್ವಸ್ತಿಕ್‌ ನಗರದ ನಿವಾಸಿಯಾಗಿದ್ದ ಅವರಿಗೆ ಸಂಜೆ ವೇಳೆಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಫ‌ಲಕಾರಿಯಾಗಲಿಲ್ಲ.

1942ರ ಮಾರ್ಚ್‌ 25ರಂದು ಕಲಬುರಗಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಗೀತಾ ಜನಿಸಿದ್ದರು. ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ.

2010ರಲ್ಲಿ ಗದುಗಿನಲ್ಲಿ ನಡೆದ ಅಖೀಲ ಭಾರತ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು; 1968ರಲ್ಲಿ “ತಾವರೆ ಹೂ’ ಎನ್ನುವ ಪ್ರಥಮ ಕಾದಂಬರಿಯೊಂದಿಗೆ ಸಾಹಿತ್ಯ ಕೃಷಿ ಆರಂಭಿಸಿದ್ದರು. 27 ಪ್ರಸಿದ್ಧ ಕಾದಂಬರಿಗಳನ್ನು ಬರೆದಿದ್ದಾರೆ. 12 ನಾಟಕ, ಎರಡು ಕವನ ಸಂಕಲನ, ಒಂದು ಸಂಪಾದನ ಹಾಗೂ ಒಂದು ಸಂಶೋಧನಾ ಕೃತಿ ಜತೆಗೆ 50 ಸಣ್ಣ ಕಥೆಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ.

Advertisement

“ಬದುಕು’, “ಹಸಿವು’ ಇವರ ಶ್ರೇಷ್ಠ ಕಾದಂಬರಿಗಳಾಗಿವೆ. “ಬದುಕು’ ಕಾದಂಬರಿಗೆ 2004ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತ್ತು. ಈ ಪ್ರಶಸ್ತಿ ಪಡೆದ ರಾಜ್ಯದ ಮೊದಲ ಮಹಿಳಾ ಸಾಹಿತಿ ಎನ್ನುವ ಹೆಗ್ಗಳಿಕೆ ಇವರದ್ದು. ಅಲ್ಲದೇ ಹಂಪಿ ವಿಶ್ವವಿದ್ಯಾಲಯದಿಂದ “ನಾಡೋಜ’ ಗೌರವ ಪಡೆದ ಮೊದಲ ಮಹಿಳಾ ಸಾಹಿತಿಯೂ ಇವರೇ. ಗುಲಬರ್ಗಾ ವಿಶ್ವವಿದ್ಯಾಲಯದ ಡಾಕ್ಟರೇಟ್‌, ಅತ್ತಿಮಬ್ಬೆ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು 2012ರಲ್ಲಿ ಕೊಲ್ಕತ್ತಾದ ಭಾರತೀಯ ಭಾಷಾ ಪರಿಷತ್‌ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಮಹಿಳಾ ಸಾಹಿತಿಯಾಗಿ ಪಡೆದವರಲ್ಲಿ ಪ್ರಥಮರಾಗಿದ್ದಾರೆ. ಬಡತನ, ಅಸಹಕಾರ, ಪರಿಸರ, ಹೆಣ್ಣು ಮಕ್ಕಳ ಶಿಕ್ಷಣ ಮುಂತಾದ ವಿಷಯಗಳ ಕುರಿತು ತಮ್ಮ ಕಾದಂಬರಿಗಳಲ್ಲಿ ಬಿಂಬಿಸಿದ್ದರು.

ಕಳೆದ ಫೆಬ್ರವರಿಯಲ್ಲಿ ಕಲಬುರಗಿಯಲ್ಲಿ ನಡೆದ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಇವರು ಪಾಲ್ಗೊಂಡಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next