Advertisement
ವರಮಹಾಲಕ್ಷ್ಮಿ ಹಬ್ಬ ಹೇಗಾಯಿತು. ಈ ಬಾರಿ ಹಬ್ಬದ ವಿಶೇಷ ಏನಿತ್ತು? ಹಬ್ಬ ಚೆನ್ನಾಗಿಯೇ ಆಯಿತು. ಆದರೆ, ಹಬ್ಬದ ದಿನ ಅರ್ಜುನ್ ದುಬೈನಲ್ಲಿದ್ದರು. ಅವರ ಅನುಪಸ್ಥಿಯಲ್ಲೇ ಹಬ್ಬ ನಡೆಯಿತು ಅಂತ ಸ್ವಲ್ಪ ಬೇಜಾರಾಯಿತು. ಹಬ್ಬದ ದಿನಗಳಂದು ಅವರು ಆದಷ್ಟೂ ಮನೆಯಲ್ಲೇ ಇರಲು ಪ್ರಯತ್ನಿಸುತ್ತಾರೆ. ಹಬ್ಬ ತಪ್ಪಿಸಿಕೊಳ್ಳಲು ಅವರಿಗೂ ಇಷ್ಟ ಇಲ್ಲ. ಆದರೆ, ದುಬೈಗೆ ಹೋಗುವುದು ಅವರಿಗೆ ಅನಿವಾರ್ಯವಾಗಿತ್ತು.
ಮದುವೆಯಾದ ಹೊಸತರಲ್ಲಿ ಯಾವುದಾದರೂ ವಿಶೇಷ ದಿನದಂದು ಅವರು ಇಲ್ಲದಿದ್ದರೆ ತುಂಬಾ ಕೋಪ ಬರುತ್ತಿತ್ತು. ಬಳಿಕ ಅವರು ಹಗಲಿರುಳು ಕಷ್ಟ ಪಡುವುದು, ಶ್ರಮ ವಹಿಸುವುದನ್ನು ಹತ್ತಿರದಿಂದ ನೋಡುತ್ತಾ ಕನಿಕರ ಬರಲು ಶುರುವಾಯಿತು. ಈಗ ನಾನೇ ಅಡ್ಜಸ್ಟ್ ಮಾಡಿಕೊಳ್ಳುತ್ತೇನೆ. ದಿನಕಳೆದಂತೆ ನಮ್ಮಿಬ್ಬರ ಮಧ್ಯೆ ಅಂಡರ್‌ಸ್ಟಾಂಡಿಂಗ್ ಹೆಚ್ಚಿದೆ. ಅವರು ನಮಗೆ ಸಮಯ ಕೊಡದಿದ್ದರೆ ಸ್ವಲ್ಪ ಬೇಸರವಾಗುತ್ತದೆ. ಆದರೆ, ಜಗಳ ಮಾಡುವಷ್ಟೆಲ್ಲಾ ಅಲ್ಲ. ಸಂಗೀತದ ಬಗ್ಗೆ ನಿಮಗೂ ಆಸಕ್ತಿ ಇದೆಯಾ?
ಸಂಗೀತ ಎಂಬುದು ನನಗೆ ಬೇರೆಯದ್ದೇ ಪ್ರಪಂಚ. ಲವ್ ಮಾಡುವಾಗಲಂತೂ ಆ ಕ್ಷೇತ್ರ ಹೇಗಿದೆ? ಅರ್ಜುನ್ ಆ ಕ್ಷೇತ್ರದಲ್ಲಿ ಏನು ಮಾಡುತ್ತಿದ್ದಾರೆ ಅಂತೇನೂ ಗೊತ್ತಿರಲಿಲ್ಲ. ಟಿ.ವಿ.ಯಲ್ಲಿ ಸಿನಿಮಾ ಹಾಡು ಕೇಳಿದ್ದುಬಿಟ್ಟರೆ, ಸಂಗೀತದ ಬೇರೆ ಪ್ರಕಾರಗಳ ಬಗ್ಗೆ ಕಿಂಚಿತ್ ಜ್ಞಾನವೂ ಇರಲಿಲ್ಲ. ಈಗ ಮದುವೆಯಾಗಿ 13 ವರ್ಷ ಆಗಿದೆ. ಅರ್ಜುನ್ ಸಂಗೀತ ನಿರ್ದೇಶಕರಾಗಿ ಖ್ಯಾತಿ ಗಳಿಸಿದ್ದಾರೆ. ಮಗಳೂ ಸಂಗೀತ ಕಲಿಯುತ್ತಿದ್ದಾಳೆ. ಈಗ ಸಂಗೀತ ಎಂದರೇನು ಎಂದು ಸ್ವಲ್ಪ ತಿಳಿವಳಿಕೆ ಬಂದಿದೆ.
Related Articles
ನಾನು ಮೈಸೂರಿನವಳು. ಓದಿದ್ದು ಬೆಳೆದಿದ್ದೆಲ್ಲಾ ಮೈಸೂರಿನಲ್ಲೇ. ವಿದ್ಯಾವರ್ಧಕ ಕಾಲೇಜಿನಲ್ಲಿ ಬಿ.ಕಾಂ. ಮಾಡಿದೆ. ಮುಂದೆ ಓದಬೇಕು ಅಂತ ತುಂಬಾ ಆಸೆ ಇತ್ತು. ಅಪ್ಪನಿಗೆ ಓದಿಸಲು ಕಷ್ಟವಾಗುತ್ತದೆ ಅಂತ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿದೆ. ಕೆಲಸದ ಜೊತೆ ಜೀವನ ಸಂಗಾತಿ ಕೂಡ ಸಿಕ್ಕಿದ. ಅವನನ್ನು ಮದುವೆಯಾಗಿ ಇಲ್ಲೇ ನೆಲೆನಿಂತೆ.
Advertisement
ನಿಮ್ ಲವ್ ಸ್ಟೋರಿ ಹೇಳಿ?ಅರ್ಜುನ್‌ರನ್ನು ಮೊದಲು ಭೇಟಿ ಮಾಡಿದ್ದು ನಾನು 10ನೇ ತರಗತಿಯಲ್ಲಿದ್ದಾಗ. ಕುಟುಂಬ ಸಮೇತ ಬೆಂಗಳೂರಿಗೆ ಮದುವೆಯೊಂದಕ್ಕೆ ಬಂದಿದ್ದೆವು. ಅಲ್ಲಿ ಅವರು ನನ್ನನ್ನು ನೋಡಿದ್ದರು. ಅವರಿಗೆ ಕ್ರಷ್ ಆಯಿತಂತೆ. ಅದನ್ನು ಸ್ನೇಹಿತನ ಮೂಲಕ ಹೇಳಿಸಿದರು. ನಾನೂ ಅವರನ್ನು ನೋಡಿ ಸುಮ್ಮನಾದೆ. ಅದಾದ ಬಳಿಕ 5 ವರ್ಷಗಳ ಕಾಲ ಇಬ್ಬರ ಸಂಪರ್ಕವೂ ಇರಲಿಲ್ಲ. ಅವರ ನೆನಪೂ ಅಷ್ಟಾಗಿ ಇರಲಿಲ್ಲ. 5 ವರ್ಷಗಳ ಬಳಿಕ ಮತ್ತೆ ಅವರು ನನ್ನ ಜೀವನದಲ್ಲಿ ಬರುತ್ತಾರೆ ಎಂದು ಊಹಿಸಿಯೂ ಇರಲಿಲ್ಲ. ಬೆಂಗಳೂರಿಗೆ ಕೆಲಸಕ್ಕೆ ಬಂದಾಗ ಕಸಿನ್ ಮೂಲಕ ಮತ್ತೆ ಪರಿಚಿತರಾದೆವು. ಆಗಲೂ ಮತ್ತೆ ಅವರು ನನಗೆ ಪ್ರಪೋಸ್ ಮಾಡಿದರು. ನಾನು ಒಪ್ಪಿದೆ.
ನಾನು ಬೆಂಗಳೂರಿಗೆ ಬರುತ್ತಲೇ ಅಪ್ಪ ನನಗೆ ಗಂಡು ನೋಡಲು ಶುರುಮಾಡಿಬಿಟ್ಟಿದ್ದರು. ನನಗೆ ಅರ್ಜುನ್ ಬಿಟ್ಟು ಬೇರೆಯವರನ್ನು ಮದುವೆಯಾಗುವುದನ್ನು ಊಹಿಸಲೂ ಸಾಧ್ಯವಿರಲಿಲ್ಲ. ಆದರೆ, ಅಪ್ಪನೆದುರು ನಿಂತು ಅದನ್ನು ಹೇಳುವ ಧೈರ್ಯವೂ ಇರಲಿಲ್ಲ. ಒಮ್ಮೆ ಒಂದು ಗಂಡಿನ ಕಡೆಯವರು ಬಂದು ನನ್ನನ್ನು ನೋಡಿಕೊಂಡು ಹೋದರು. ನಮ್ಮ ಮನೆಯಲ್ಲಿ ಎಲ್ಲರಿಗೂ ಆ ಸಂಬಂಧ ಇಷ್ಟವಾಗಿತ್ತು. ಆಗ ನನಗೆ ಅರ್ಜುನ್ ಬಗ್ಗೆ ಹೇಳಲೇಬೇಕಾದ ಸ್ಥಿತಿ. ಅಂತೂ ಧೈರ್ಯ ಮಾಡಿ ಹೇಳಿದೆ. ಅಪ್ಪ ಯಾವತ್ತೂ ನನ್ನ ಮೇಲೆ ಕೈಮಾಡಿದವರಲ್ಲ. ಅವತ್ತು ಕಪಾಳಕ್ಕೆ ಹೊಡೆದರು. ನಾನೂ ಹಠ ಬಿಡಲಿಲ್ಲ. ಅರ್ಜುನ್ ದೂರದ ಸಂಬಂಧಿ. ಆದರೆ, ಅವರು ಏನು ಕೆಲಸ ಮಾಡುತ್ತಾರೆ? ಎಷ್ಟು ಸಂಪಾದಿಸುತ್ತಾರೆ ಎಂಬುದು ತಿಳಿದಿರಲಿಲ್ಲವಲ್ಲ; ಅದಕ್ಕೆ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ. ಕೊನೆಗೂ ಒಪ್ಪಿಸಿ ಮದುವೆಯಾದೆವು. ಮದುವೆಯ ಆರಂಭದ ದಿನಗಳು ಹೇಗಿದ್ದವು?
ನಾವು ಮದುವೆಯಾದಾಗ ಅವರು ಸಂಗೀತ ಕ್ಷೇತ್ರದಲ್ಲಿ ಆಗಷ್ಟೇ ಟೇಕಾಫ್ ಆಗುತ್ತಿದ್ದರು. ಒಮ್ಮೆ 1,000 ರೂ. ಕೈಯಲ್ಲಿದ್ದರೆ ಮತ್ತೂಮ್ಮೆ 10 ರೂ. ಇರುತ್ತಿತ್ತು. ಆದರೆ, ಅರ್ಜುನ್ ಯಾವತ್ತೂ ಹಣದ ವಿಷಯಕ್ಕೆ ನೆಮ್ಮದಿ ಹಾಳುಮಾಡಿಕೊಂಡವರಲ್ಲ. “ಇವತ್ತು ಇಷ್ಟಿದೆ, ಇದರಲ್ಲೇ ಖುಷಿಯಾಗಿರೋಣ. ದೇವರಿಗೆ ಗೊತ್ತಿದೆ, ಯಾವತ್ತು ನಮಗೆ ಹಣ ಕೊಡಬೇಕು’ ಅಂತ. ಆಗ ಕೊಡುತ್ತಾನೆ ಅನ್ನುತ್ತಿದ್ದರು. ಅವರೇ ಅಷ್ಟೊಂದು ಕಾನ್ಫಿಡೆನ್ಸ್‌ನಿಂದ ಇರುವಾಗ ನನಗೆ ಚಿಂತೆಯಾಗಲು ಹೇಗೆ ಸಾಧ್ಯ? ರಿಯಾಲಿಟಿ ಶೋಗಳಲ್ಲಿ ಮಕ್ಕಳನ್ನು ಅಷ್ಟು ಪ್ರೀತಿಯಿಂದ ಮಾತಾಡಿಸುತ್ತಾರೆ. ಅವರಿರೋದೇ ಹಾಗಾ?
ಅರ್ಜುನ್ ತುಂಬಾ ಮೃದು ಸ್ವಭಾವದವರು. ಎಲ್ಲರ ಜೊತೆ ಒಂದೇ ರೀತಿ ಇರುತ್ತಾರೆ. ಮನೆಯಲ್ಲಿ ಮಗಳನ್ನು ಹೇಗೆ ಮುದ್ದು ಮಾಡುತ್ತಾರೋ, ಬೇರೆ ಮಕ್ಕಳನ್ನೂ ಅಷ್ಟೇ ಪ್ರೀತಿಯಿಂದ ಮಾತನಾಡಿಸುತ್ತಾರೆ. ಸರಿಗಮಪದಲ್ಲಿ ಪುಟ್ಟ ಮಕ್ಕಳಿಗೆ ಕುಟುಕುಟು ಚಿನ್ನುಪುಟ್ಟು ಅಂತೆಲ್ಲಾ ಹೇಳುತ್ತಾರಲ್ಲ; ಅದನ್ನೆಲ್ಲಾ ಮಗಳಿಗೂ ಹೇಳುತ್ತಾರೆ. ಯಾರ ಮನಸ್ಸನ್ನು ನೋಯಿಸುವುದೂ ಅವರಿಗೆ ಇಷ್ಟವಾಗುವುದಿಲ್ಲ. ಕುಟುಂಬದವರಾದರೂ ಅಷ್ಟೇ, ಸ್ನೇಹಿತರಾದರೂ ಅಷ್ಟೇ ಅಥವಾ ಅಪರಿಚಿತರಾದರೂ ಅಷ್ಟೇ. ತುಂಬಾ ಸಮಾಧಾನದಿಂದ ವರ್ತಿಸುತ್ತಾರೆ. ಯಾರ ಮೇಲೂ ರೇಗುವುದಿಲ್ಲ. ಮಗಳಿಗೆ ನೀವು ಸ್ಟ್ರಿಕ್ಟ್ ಅಮ್ಮನಾ?
ಮಗಳು ಈಗ 6ನೇ ತರಗತಿಯಲ್ಲಿದ್ದಾಳೆ. ಅವಳಿಗೆ ಅಪ್ಪ ಅಂದ್ರೆ ಪ್ರಾಣ. ಊಟ, ಬಟ್ಟೆಯಿಂದ ಹಿಡಿದು, ಹೋಂವರ್ಕ್ ಮಾಡಿಸುವವರೆಗೂ ಅವಳ ಎಲ್ಲಾ ಬೇಕು ಬೇಡಗಳನ್ನು ನಾನೇ ನೋಡಿಕೊಳ್ಳುವುದು. ಆದರೆ, ಅವಳು ಮಾತ್ರ ಯಾವಾಗಲೂ ಅಪ್ಪನ ಪಾರ್ಟಿ. ಅಮ್ಮ ಬೈತಾಳೆ, ಹೊಡೀತಾಳೆ, ಕೇಳಿದ್ದೆಲ್ಲಾ ಕೊಡಿಸಲ್ಲ. ಆದರೆ, ಅಪ್ಪ ಹಾಗಲ್ಲ. ಇದುವರೆಗೆ ಒಮ್ಮೆಯೂ ಹೊಡೆದಿಲ್ಲ. ನಾನು ಅವಳಿಗೆ ಬೈದರೆ ಅವರು ನನಗೇ ಬೈಯುತ್ತಾರೆ. ಅವಳು ಏನು ಕೇಳಿದರೂ ಕೊಡಿಸುತ್ತಾರೆ. ಅವರಷ್ಟು ನಾನು ಮಗಳನ್ನು ಮುದ್ದು ಮಾಡುವುದಿಲ್ಲ. ಅವಳಿಗೆ ಹಣದ ಬೆಲೆ ಗೊತ್ತಾಗಬೇಕು. ಕಷ್ಟಗಳ ಅರಿವಿರಬೇಕು. ಇವತ್ತು ಅಮ್ಮ ಬೈತಾಳೆ ಅಂತ ಅವಳು ಕೋಪಿಸಿಕೊಳ್ಳಬಹುದು. ಮುಂದೆ ಅವಳಿಗೇ ತಿಳಿಯುತ್ತದೆ, ಅಮ್ಮ ನನಗೆ ಏನು ಕಲಿಸಿಕೊಟ್ಟಳು ಅಂತ.
ಇತ್ತೀಚಿನ ದಿನಗಳಲ್ಲಿ ಕೂಡುಕುಟುಂಬ ಬಹಳ ಕಡಿಮೆ. ಜಾಯಿಂಟ್ ಫ್ಯಾಮಿಲಿ ನಿಜಕ್ಕೂ ಚಂದ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ಕೆಲಸಗಳಲ್ಲಿ ಸಹಕರಿಸುತ್ತೇವೆ. ನಮ್ಮತ್ತೆ ಕೂಡ ನನಗೆ ಮತ್ತು ಓರಗಿತ್ತಿಗೆ ಅಡುಗೆಯಲ್ಲಿ ಸಹಾಯ ಮಾಡುತ್ತಾರೆ. ಕೆಲವೊಮ್ಮೆ ಅರ್ಜುನ್ ಮನೆಗೆ ಬರುವುದು ತಡವಾಗಿ, ನಾನು ಮಲಗಿದ್ದರೆ ಓರಗಿತ್ತಿಯೇ ಅವರಿಗೆ ಊಟ ಬಡಿಸುತ್ತಾರೆ. ನಾನೂ ಅವರಿಗೆ ಕೆಲಸಗಳಲ್ಲಿ ನೆರವಾಗುತ್ತೇನೆ. ಹಬ್ಬಗಳಲ್ಲಿ ಎಲ್ಲರೂ ಸೇರಿ ಕೆಲಸಗಳನ್ನು ಮುಗಿಸುತ್ತೇವೆ. ಚಿಕ್ಕ ಹಬ್ಬವಾದರೂ ಮನೆಯಲ್ಲಿ ಸಂಭ್ರಮ ಹೆಚ್ಚಿರುತ್ತದೆ. ಇಬ್ಬರಲ್ಲಿ ಯಾರು ಹೆಚ್ಚು ರೊಮ್ಯಾಂಟಿಕ್? ಬರ್ತ್‌ಡೇ, ಆ್ಯನಿವರ್ಸರಿಗೆ ಯಾರು ಮೊದಲು ಶುಭಾಶಯ ಹೇಳುವುದು?
ಇಬ್ರೂ ತುಂಬಾ ರೊಮ್ಯಾಂಟಿಕ್. ಇಬ್ಬರೂ ಬರ್ತ್‌ಡೇ, ಆ್ಯನಿವರ್ಸರಿಗಳನ್ನು ಮರೆಯುವುದಿಲ್ಲ. ಅವರು ಆಗಾಗ ಸರ್‌ಪ್ರೈಸ್ ಗಿಫ್ಟ್ ಕೊಡುತ್ತಿರುತ್ತಾರೆ. ಮದುವೆ ನಂತರದ ನನ್ನ ಮೊದಲ ಹುಟ್ಟುಹಬ್ಬವನ್ನು 12 ಗಂಟೆಗೆ ಕೇಕ್ ಕತ್ತರಿಸಿ ಆಚರಿಸಿದ್ದರು. ರಾತ್ರಿ 12ಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡದ್ದು ಅದೇ ಮೊದಲು. ಅಲ್ಲಿಂದ ಈಚೆಗೆ ಪ್ರತಿ ಹುಟ್ಟುಹಬ್ಬ ರಾತ್ರಿ 12ಕ್ಕೇ ನಡೆಯುತ್ತದೆ. ಆದರೆ, ಮೊದಲಬಾರಿ ಆಚರಿಸಿದ್ದು ಮಾತ್ರ ಯಾವತ್ತಿಗೂ ನನಗೆ ವಿಶೇಷ. ಇನ್ನು ಮಗಳ ಬರ್ತ್‌ಡೇಯನ್ನಂತೂ ಅವರು ದೊಡ್ಡ ಹಬ್ಬದ ರೀತಿ ಆಚರಿಸುತ್ತಾರೆ. ಅರ್ಜುನ್‌ರ ಯಾವ ಹಾಡು ನಿಮ್ಮ ಆಲ್‌ಟೈಮ್ ಫೇವರಿಟ್?
ಬಿರುಗಾಳಿ ಚಿತ್ರದ “ಮಧುರಾ ಪಿಸು ಮಾತಿಗೆ’… ಈಗಲೂ ಹಾಗೇ ಇದ್ದಾರೆ!
ಒಮ್ಮೆ ನಾವು ಹೊರಗೆ ವಾಕಿಂಗ್‌ಗೆ ಹೋಗಿದ್ದೆವು. ಸಾಮಾನ್ಯವಾಗಿ ಹೊರಗೆ ಹೋದಾಗ ಊಟ ಅಥವಾ ಚಾಟ್ಸ್ ಏನಾದರೂ ತಿನ್ನದೇ ಬರುವುದಿಲ್ಲ. ಆದರೆ, ಅವತ್ತು ನಮ್ಮ ಬಳಿ ಹೆಚ್ಚು ಹಣ ಇರಲಿಲ್ಲ. ಕೊನೆಗೆ ಇದ್ದ 35 ರೂಪಾಯಿಯಲ್ಲೇ ಇಬ್ಬರೂ, ರಸ್ತೆ ಬದಿಯಲ್ಲಿ ನಿಂತು ಫ್ರೈಡ್‌ರೈಸ್ ತಿಂದು ಬಂದೆವು. ಈಗ ಅರ್ಜುನ್‌ಗೆ ಹೆಸರು, ಹಣ ಎಲ್ಲಾ ಇದೆ. ಆದರೆ, ಅವರು ಮಾತ್ರ ಮೊದಲು ಹೇಗಿದ್ದರೋ, ಹಾಗೇ ಇದ್ದಾರೆ. ಅತ್ತೆಯೇ ಅಡುಗೆ ಕಲಿಸಿದ್ದು!
ಮದುವೆಗೂ ಮೊದಲು ನನಗೆ ಅಡುಗೆ ಬರುತ್ತಿರಲಿಲ್ಲ. ಅತ್ತೆಯೇ ಅಡುಗೆ ಕಲಿಸಿದ್ದು. ಈಗಲೂ ಅತ್ತೆಯಿಂದ ಹೊಸ ಹೊಸ ರೆಸಿಪಿಗಳನ್ನು ಕಲಿಯುತ್ತೇನೆ. ಎಷ್ಟೇ ಚೆನ್ನಾಗಿ ಅಡುಗೆ ಮಾಡಿದರೂ ಅವರು ಮಾಡುವಷ್ಟು ರುಚಿಯಾಗಿ ನನಗೆ ಅಡುಗೆ ಮಾಡಲು ಬರುವುದಿಲ್ಲ. ಅತ್ತೆ ಮಾಡುವ ಬಿರಿಯಾನಿ, ಕಿಚಡಿ ಮನೆಮಂದಿಗೆಲ್ಲಾ ಇಷ್ಟ. ಅರ್ಜುನ್‌ಗೆ ನಾನ್‌ವೆಜ್ ಇಷ್ಟ. ಮಟನ್ ಬಿರಿಯಾನಿ, ಫಿಷ್ ಫ್ರೈ ಕೇಳಿ ಮಾಡಿಸಿಕೊಳ್ಳುತ್ತಾರೆ. ಈಗ ಡಯಟ್‌ನಲ್ಲಿರುವುದರಿಂದ ಚಿಕನ್ ಹೆಚ್ಚು ತಿನ್ನುತ್ತಾರೆ. – ಚೇತನ ಜೆ.ಕೆ.