ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಜನನಿ ಟ್ರಸ್ಟ್ ಆಯೋಜಿಸಿದ್ದ ಮನೆಮನೆ ಗೊಂಬೆ ಪ್ರದರ್ಶನದಲ್ಲಿ ಗಿರಿದರ್ಶಿನಿ ಬಡಾವಣೆ ನಿವಾಸಿ ಗೀತಾ ಪ್ರಥಮ ಸ್ಥಾನ ಪಡೆದಿದ್ದಾರೆ. ನಗರದ ಜಗನ್ಮೋಹನ ಅರಮನೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮನೆಮನೆ ಗೊಂಬೆ ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಅದರಂತೆ ಗಿರಿದರ್ಶಿನಿ ಬಡಾವಣೆಯ ಗೀತಾ ಶ್ರೀಹರಿ ಮೊದಲ ಸ್ಥಾನ ಪಡೆದರೆ, ಸರಸ್ವತಿಪುರಂನ ಜಯಶ್ರೀ(ದ್ವಿ) ಹಾಗೂ ಕುವೆಂಪುನಗರದ ಇಂದ್ರಾಣಿ(ತೃ) ಸ್ಥಾನ ಪಡೆದರು. ಉಳಿದಂತೆ ಕುವೆಂಪುನಗರದ ಮೀರಾ, ಗೋಕುಲಂನ ಪ್ರಿಯಾಂಕ, ಅರವಿಂದನಗರದ ರಾಜೇಶ್ವರಿ, ವಿಜಯನಗರದ ರೈಲ್ವೆ ಬಡಾವಣೆಯ ಪೂರ್ಣಿಮಾ ಸಮಾಧಾನಕರ ಬಹುಮಾನ ಪಡೆದುಕೊಂಡರು.
ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಜನನಿ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಕೆ.ಅಶೋಕ್, ದಸರಾ ಮಹೋತ್ಸವದ ಅಂಗವಾಗಿ ಟ್ರಸ್ಟ್ ಆಯೋಜಿಸಿದ್ದ ಮನೆಮನೆ ದಸರಾ ಗೊಂಬೆ ಸ್ಪರ್ಧೆಯಲ್ಲಿ 43 ಸ್ಪರ್ಧಿಗಳು ಭಾಗವಹಿಸಿದ್ದರು. ಕೇವಲ ಮನೆಗಳಲ್ಲಿ ಗೊಂಬೆ ಕೂರಿಸಿದ್ದಾರೆ ಎಂದೇ ಬಹುಮಾನ ನೀಡಿಲ್ಲ. ಇತಿಹಾಸವಿರುವ ಗೊಂಬೆಗಳು, ಹಲವು ವರ್ಷಗಳ ಇತಿಹಾಸವಿರುವ ವಸ್ತುಗಳು,
ಕೈಯಲ್ಲೇ ತಯಾರಿಸಿರುವ ಗೊಂಬೆಗಳು, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಗೊಂಬೆ ಪ್ರದರ್ಶನವನ್ನು ಪರಿಗಣಿಸಿ ತೀರ್ಪು ನೀಡಲಾಗಿದೆ. ಸ್ಪರ್ಧೆಯ ತೀರ್ಪುಗಾರರಾಗಿದ್ದ ಸುಧಾ, ಸರಸ್ವತಿ ಪ್ರಸಾದ್ ವಿಜೇತರನ್ನು ಆಯ್ಕೆ ಮಾಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಗಾಯತ್ರಿ ಸೇವಾ ಟ್ರಸ್ಟ್‌ನ ಡಾ.ಎ.ರವಿಕಲ್ಯಾಣ ಚಕ್ರವರ್ತಿ, ಇಂಡಿಯನ್ ಮೆಡಿಕಲ್ ಕೌನ್ಸಿಲ್ ಕಾರ್ಯದರ್ಶಿ ಡಾ.ಸುಜಾತ, ಜನನಿ ಟ್ರಸ್ಟ್ ರೂಪ, ಗಿರಿಜಾಇನ್ನಿತರರಿದ್ದರು.