ಗೋಕಾಕ: ಸಾಧನೆಗೆ ಬಡತನ, ಶಿಕ್ಷಣ ಮಾಧ್ಯಮ ಎಂದಿಗೂ ಅಡ್ಡಿಯಾಗಲಾರದು ಎಂಬುದಕ್ಕೆ ಉರಬಿನಟ್ಟಿ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ ಗೀತಾ ಗಣಪತಿ ರಡ್ಡಿ ತಾಜಾ ಉದಾಹರಣೆ. ಸಾಧಾರಣ ರೈತ ಕುಟುಂಬಕ್ಕೆ ಸೇರಿದ ಗೀತಾ ಕೆಎಸ್‌ಪಿಎಸ್ ಪರೀಕ್ಷೆಯಲ್ಲಿ 25ನೇ ರ್‍ಯಾಂಕ್ ಪಡೆಯುವ ಮೂಲಕ ಸಾಧನೆಗೈದಿದ್ದಾಳೆ.
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಈ ಕಾಲದಲ್ಲಿ ಗೀತಾ, ಉರಬಿನಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ನಂತರ ಗ್ರಾಮದ ಸರ್ಕಾರಿ ಕಾಲೇಜಿನಲ್ಲಿಯೇ ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಳು. ನಂತರ ಪಾಶ್ಚಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉನ್ನತ ಹುದ್ದೆಯನ್ನು ಅಲಂಕರಿಸುವ ಮಹಾದಾಸೆಯೊಂದಿಗೆ ವಿದ್ಯಾನಗರಿ ಖ್ಯಾತಿಯ ಧಾರವಾಡ ನಗರಕ್ಕೆ ತೆರಳಿ ಅಲ್ಲಿ ಅಧ್ಯಯನ ನಡೆಸಿ, 2 ಬಾರಿ ಯುಪಿಎಸ್‌ಸಿ ಪರೀಕ್ಷೆ, 1 ಸಾರಿ ಕೆಎಸ್‌ಎ, 3ಬಾರಿ ಪಿಎಸ್‌ಸಿ ಪರೀಕ್ಷೆಯನ್ನು ಎದುರಿಸಿ ಅದರಲ್ಲಿ ಅಲ್ಪಮಟ್ಟಿನ ಸೋಲಿನ ರುಚಿ ಕಂಡಿದ್ದರೂ ಕೂಡಾ ಸಾಧನೆಯ ದಾರಿಯಲ್ಲಿ ಏಳು ಬೀಳುಗಳು ಸಹಜ ಎನ್ನುವಂತೆ ಅವುಗಳನ್ನೆಲ್ಲಾ ಬದಿಗೊತ್ತಿ ಸತತ ಪ್ರಯತ್ನದೊಂದಿಗೆ ಪೋಲಿಸ್ ಪೇದೆ ಆಯ್ಕೆಗಾಗಿ ಬರೆದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲನೇ ರ್‍ಯಾಂಕ್. ಹಾಗೂ ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆ ಪರೀಕ್ಷೆಯಲ್ಲಿ ಈಗ 25ನೇ ರ್‍ಯಾಂಕ್ ಪಡೆದಿದ್ದಾಳೆ.
ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುವುದು ಕಡಿಮೆ, ಇಂತಹ ಸಂದರ್ಭದಲ್ಲಿಯೂ ನನ್ನ ತಂದೆ-ತಾಯಿ ಪ್ರೋತ್ಸಾಹ ಹಾಗೂ ಗುರುಗಳ ಮಾರ್ಗದರ್ಶದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ನನ್ನ ಪ್ರಯತ್ನದಲ್ಲಿ ಹಿನ್ನಡೆಯಾಗಿದ್ದಾಗಲೂ ನನ್ನಲ್ಲಿ ಆತ್ಮಸ್ಥೈರ್ಯವನ್ನು ತುಂಬಿದ್ದರಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ. ನನಗೆ ಆಯ್‌ಎಎಸ್ ಅಧಿಕಾರಿಯಾಗಬೇಕೆಂಬ ಮಹದಾಸೆಯಿದ್ದು ಅದಕ್ಕಾಗಿ ನನ್ನ ಪ್ರಯತ್ನ ಮುಂದುವರಿಸುತ್ತೇನೆ.
– ಗೀತಾ ರಡ್ಡಿ
ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆತು ಸಾಧನೆ ಮಾಡಲು ಅವರಕಾಶವಿದೆ ಎಂಬುದನ್ನು ಗ್ರಾಮೀಣ ಭಾಗದ ವಿದ್ಯಾರ್ಥಿನಿ ತೋರಿಸಿಕೊಡುವ ಮೂಲಕ ಗೋಕಾವಿ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದು ನಮಗೆಲ್ಲ ಸಂತಸ ತಂದಿದೆ.
– ಜಿ.ಬಿ..ಬಳಗಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು