ಯಲಬುರ್ಗಾ: ಗೆದಗೇರಿ ಗ್ರಾಮ ಕಲಾವಿದರ ಬೀಡಾಗಿದೆ. ಇಲ್ಲಿನ ಯುವ ಕಲಾವಿದರು ರಂಗಭೂಮಿ ಯನ್ನು ಪೋಷಿಸಿಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಅಟಮಾಳಗಿ ಹೇಳಿದರು.
ತಾಲೂಕಿನ ಗೆದಗೇರಿ ಗ್ರಾಮದಲ್ಲಿ ಶ್ರೀ ದ್ಯಾಮಾಂಬಿಕಾದೇವಿ ಜಾತ್ರೋತ್ಸವದ ಅಂಗವಾಗಿ ವಿಜಯಮಹಾಂತೇಶ್ವರ ಯುವ ನಾಟ್ಯ ಸಂಘದ ಪದಾ ಧಿಕಾರಿಗಳು ಹಮ್ಮಿಕೊಂಡ “ಅಣ್ಣನ ಅರಮನೆ’ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಗೆದಗೇರಿ ಗ್ರಾಮ ನನ್ನ ಮೆಚ್ಚಿನ ಪ್ರೀತಿಯ ಗ್ರಾಮವಾಗಿದೆ. ಇಲ್ಲಿ ನಡೆಯುವ ಹಬ್ಬ, ಜಾತ್ರೆ, ಸಮಾರಂಭ, ನಾಟಕ, ವಿವಿಧ ಕಾರ್ಯಕ್ರಮಗಳಿಗೆ ಅಹ್ವಾನಿಸುತ್ತಿರುವುದು ಸಂತಸ ತಂದಿದೆ. ನಾಟಕ ನೋಡಿದರೆ ಬದುಕಿನಲ್ಲಿ ಬದಲಾವಣೆ ಹೊಂದಲು ಸಾಧ್ಯವಾಗುತ್ತದೆ. ನಾಟಕಗಳು ಕೇವಲ ಮನರಂಜನೆಯಲ್ಲ. ಅವುಗಳು ಪ್ರಸ್ತುತ ಸಮಾಜದ ಅಭಿವ್ಯಕ್ತಿಯಾಗಿ ಕೆಲಸ ಮಾಡುತ್ತವೆ ಎಂದರು.
ಸಮಾಜದಲ್ಲಿನ ಅಂಕುಡೊಂಕು ತಿದ್ದುವ ಮೂಲಕ ನವ ಸಮಾಜ ನಿರ್ಮಾಣದಲ್ಲಿ ರಂಗಭೂಮಿ ಪಾತ್ರ ಅತ್ಯಂತ ಮಹತ್ತರವಾಗಿದೆ. ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ. ಪುರಾತನ ಕಾಲದಲ್ಲಿ ಸಮಾಜದಲ್ಲಿ ಮನೆ ಮಾಡಿದ್ದ ಮೌಡ್ಯವನ್ನು ನಾಟಕಗಳ ಮೂಲಕ ತೋರಿಸಲಾಗುತ್ತಿತ್ತು. ಇತ್ತಿಚೀನ ದಿನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ. ನಾಟಕ ಹೆಚ್ಚೆಚ್ಚು ನೋಡುವುದರ ಮೂಲಕ ನಾಟಕ ಕಲೆ ಉಳಿಸಿ-ಬೆಳೆಸಿಕೊಂಡು ಹೋಗಬೇಕಾಗಿದೆ. ನರೇಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ರಂಗಭೂಮಿ ಕಟ್ಟಡ ನಿರ್ಮಿಸಿಕೊಳ್ಳಲು ಅವಕಾಶವಿದೆ. ಇದನ್ನು ಗ್ರಾಮಸ್ಥರು ಸದ್ಬಳ ಮಾಡಿಕೊಳ್ಳಬೇಕು ಎಂದರು.
ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪೊಲೀಸಪಾಟೀಲ ಮಾತನಾಡಿ, ನಾಟಕಗಳು ಸಮಾಜದಲ್ಲಿನ ವಿದ್ಯಮಾನಗಳನ್ನು ಪ್ರತಿಬಿಂಬಿಸುತ್ತವೆ. ಜನಪದ ಕಲೆ, ಸಾಹಿತ್ಯ, ಜನಪದ ಹಾಡುಗಳು, ಸಾಮಾಜಿಕ ನಾಟಕಗಳ ಪ್ರದರ್ಶನ ನಮ್ಮ ಸಂಸ್ಕೃತಿ ಆಚಾರ-ವಿಚಾರಗಳ ಬಗ್ಗೆ ತಿಳಿಸಿಕೊಡುತ್ತವೆ. ಈ ನಿಟ್ಟಿನಲ್ಲಿ ಜನಪದ ಉಳಿಸಿ, ಬೆಳೆಸುವ ಅವಶ್ಯಕತೆ ಇದೆ ಎಂದರು.
ವೇದಮೂರ್ತಿ ಶಿವಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಶರಣಪ್ಪ ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು. ಜಗದೀಶ ಬಳಿಗಾರ, ಶರಣಪ್ಪ ರಾಜೂರು, ಕಳಕಯ್ಯ ಹಿರೇಮಠ, ವೆಂಕಟೇಶ ಗೊಲ್ಲರ, ಬಸವರಾಜ ಬಂಡಿಹಾಳ, ಹನುಮಗೌಡ ಕೋಳಿಹಾಳ, ರುದ್ರಪ್ಪ ನಡೂಲಮನಿ, ದೇವರಾಜ ಹೊಸಮನಿ, ಗಣೇಶ ರಾಠೊಡ, ಶಿಕ್ಷಕ ಶರಣಪ್ಪ ಇಟಗಿ, ಬಸವರಾಜ ಹಳಗೌಡ್ರ, ಅಶೋಕ ಕೋಳಿಹಾಳ, ಶೇಕರಪ್ಪ ಹಳಗೌಡ್ರ, ಗ್ರಾಪಂ ಸದಸ್ಯರು, ಗುರು-ಹಿರಿಯರು, ಯುವಕರು ಪಾಲ್ಗೊಂಡಿದ್ದರು.