Advertisement
ಗೇರು ಅಭಿವೃದ್ಧಿ ನಿಗಮವು 35 ವರ್ಷಗಳ ಹಿಂದೆ ನಿರ್ಮಿಸಿದ ಕಟ್ಟಡ ಇದಾಗಿದ್ದು, ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ಎಲ್ಲ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಗೇರು ಅಭಿವೃದ್ಧಿ ನಿಗಮವು ಪ್ರತೀ ಗ್ರಾಮದಲ್ಲಿರುವ ತನ್ನ ಗೇರು ತೋಟದ ರಕ್ಷಣೆಗೆ ಬರುವ ಸಿಬಂದಿಯ ಆಶ್ರಯಕ್ಕೆ ಅಲ್ಲಲ್ಲಿ ವಿಶ್ರಾಂತಿ ಕಟ್ಟಡಗಳನ್ನು ನಿರ್ಮಿಸಿತ್ತು. ಗೇರು ತೋಟಗಳಿಗೆ ಹಾಕುವ ರಸಗೊಬ್ಬರ ಹಾಗೂ ಇತರ ಕೃಷಿ ಪರಿಕರಗಳನ್ನು ರಕ್ಷಿಸುವ ಉದ್ದೇಶದಿಂದಲೂ ಪ್ರತೀ ಗ್ರಾಮದಲ್ಲಿ ಎರಡೆರಡು ಕಟ್ಟಡಗಳನ್ನು ಇಲಾಖೆ ನಿರ್ಮಿಸಿತ್ತು.
ಕಟ್ಟಡದ ನಿರ್ವಹಣೆಗೆ ಇಲಾಖೆ ಹೆಚ್ಚು ಮಹತ್ವ ನೀಡದೆ ಕುಸಿದು ಬೀಳುವ ಹಂತವನ್ನು ತಲುಪಿತ್ತು. ಈ ಕಾರಣದಿಂದ ಗೇರು ಮರಗಳು ಬೆಳೆದು ದೊಡ್ಡದಾದ ಬಳಿಕ ಕಟ್ಟಡದಲ್ಲಿ ಉಳಿದುಕೊಳ್ಳುವ ನೌಕರರ ಸಂಖ್ಯೆ ಕಡಿಮೆಯಾಗಿತ್ತು. ಕಟ್ಟಡಗಳು ರಸ್ತೆ ಬದಿಯಲ್ಲಿಯೇ ಇವೆ. ಕಟ್ಟಡಗಳ ಸಮರ್ಪಕ ನಿರ್ವಹಣೆ ಇರುತ್ತಿದ್ದಲ್ಲಿ ಇಂದಿಗೂ ಕಟ್ಟಡಗಳ ಕೊಠಡಿ ಬಾಡಿಗೆಗೆ ಭಾರೀ ಬೇಡಿಕೆ ಬರುತ್ತಿತ್ತು. ಇಲಾಖೆಗೆ ಯಾವುದೇ ಉತ್ಸಾಹ ಇಲ್ಲದ ಪರಿಣಾಮ ಅಲ್ಪಸ್ವಲ್ಪ ಆದಾಯಕ್ಕೂ ತಾನೇ ಕುತ್ತು ತಂದುಕೊಂಡಿದೆ. ಕುಸಿಯುವ ಭೀತಿ
ಕಟ್ಟಡದ ಛಾವಣಿಯ ಪಕ್ಕಾಸು ಮತ್ತು ರೀಪುಗಳು ಮುರಿದು ಹೋಗಿವೆ. ಗೋಡೆಗಳು ಮಳೆಗಾಲದಲ್ಲಿ ನೀರು ಹೀರಿಕೊಳ್ಳುತ್ತಿವೆ. ಹೀಗಾಗಿ, ಬಿರುಕು ಬಿಡಲು ಆರಂಭಿಸಿವೆ. ಕಟ್ಟಡದ ಬಳಿ ಒಂದು ಕ್ರೀಡಾಂಗಣವೂ ಇದೆ. ಕ್ರೀಡಾಕೂಟದ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳು ನೆರಳಿನ ಆಶ್ರಯಕ್ಕಾಗಿ ಕಟ್ಟಡದ ಬಳಿಗೆ ಬರುತ್ತಾರೆ. ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಯಾವುದೇ ಸಮಯದಲ್ಲೂ ಕುಸಿದು ಬೀಳುವ ಆತಂಕವಿದೆ. ಪೊದರು, ಗಿಡಗಂಟಿಗಳಿಂದ ಆವೃತ್ತವಾಗಿದೆ. ಬಾಗಿಲುಗಳು ಮುರಿದು ಹೋಗಿವೆ. ಹಗಲು ರಾತ್ರಿ ಎನ್ನದೆ ಇಸ್ಪೀಟ್ ಜುಗಾರಿ ಆಟವೂ ಇಲ್ಲಿ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ಇಲಾಖೆ ಇನ್ನಾದರೂ ಕಟ್ಟಡದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.
Related Articles
ಕಟ್ಟಡದ ನಿರ್ವಹಣೆಗೆ ಹಲವು ವರ್ಷಗಳಿಂದ ಇಲಾಖೆ ಅನುದಾನ ಬಿಡುಗಡೆ ಮಾಡಿಲ್ಲ. ಇಲಾಖೆಯಲ್ಲಿ ಸಿಬಂದಿ ಸಂಖ್ಯೆಯೂ ಕಡಿಮೆಯಾಗಿರುವ ಕಾರಣ ಕಟ್ಟಡದಲ್ಲಿ ಉಳಿದುಕೊಳ್ಳುವ ಸಿಬಂದಿಯ ಸಂಖ್ಯೆಯೂ ವಿರಳವಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ದುರಸ್ತಿಗೆ ಮುಂದಾಗುತ್ತಿಲ್ಲ. ಕಟ್ಟಡವನ್ನು ಸರಕಾರಿ ನೌಕರರಿಗೆ ಮಾತ್ರ ಬಾಡಿಗೆ ನೀಡಲು ಅವಕಾಶವಿದೆ. ಸರಕಾರಿ ನೌಕರರು ಕಟ್ಟಡ ಬಾಡಿಗೆಗೆ ಬೇಕೆನ್ನುವ ಬೇಡಿಕೆ ಸಲ್ಲಿಸಿದಲ್ಲಿ ದುರಸ್ತಿ ಮಾಡಿಕೊಡಲಾಗುವುದು.
– ಸುರೇಶ್,
ನೆಡುತೋಪು ಅಧಿಕಾರಿ, ಉಪ್ಪಿನಂಗಡಿ ವಲಯ ಗೇರು ಅಭಿವೃದ್ಧಿ ನಿಗಮ
Advertisement
ಸದಾನಂದ ಆಲಂಕಾರು