ನವದೆಹಲಿ: ದೇಶದಲ್ಲಿ ಸಮಗ್ರ ದೇಶೀ ಉತ್ಪನ್ನ ದರ (ಜಿಡಿಪಿ) ಡಿಸೆಂಬರ್ ತ್ರೈಮಾಸಿಕದಲ್ಲಿ 4.7%ಕ್ಕೆ ಏರಿಕೆ ಕಂಡಿದೆ. ಇದಕ್ಕೂ ಮೊದಲು ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ದರ 4.5% ಕುಸಿತ ಕಾಣುವ ಮೂಲಕ ಕಳೆದ ಆರು ವರ್ಷಗಳಲ್ಲೇ ಕನಿಷ್ಟ ದರವನ್ನು ದಾಖಲಿಸಿತ್ತು. ಇದೀಗ ಸರಕಾರದ ಕೆಲವೊಂದು ಪುನಶ್ಚೇತನ ಕ್ರಮಗಳಿಂದ ಜಿಡಿಪಿ ದರದಲ್ಲಿ ಅಲ್ಪಮಟ್ಟಿನ ಪ್ರಗತಿ ಕಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯು ಶುಕ್ರವಾರ ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳ ಪ್ರಕಾರ ಈ ಮಾಹಿತಿ ಲಭ್ಯವಾಗಿದೆ. 2019-20ನೇ ಸಾಲಿನ ಎರಡನೇ ಮುಂಗಡ ಜಿಡಿಪಿ ಅಂದಾಜನ್ನೂ ಸಹ ಎನ್.ಎಸ್.ಒ. ಇವತ್ತು ಬಿಡುಗಡೆಗೊಳಿಸಿದೆ.
ಕಳೆದ ಕೆಲವು ವಾರಗಳಿಂದ ದೇಶೀ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಪೂರಕ ಆಶಾದಾಯಕ ವಾತಾವರಣ ನಿರ್ಮಾಣವಾಗಿದೆ. ನಿಕ್ಕಿ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ 2019ರ ಡಿಸೆಂಬರ್ ತಿಂಗಳಿನಲ್ಲಿ 52.7ಕ್ಕೆ ಏರಿಕೆ ಕಂಡಿದ್ದು ಇದು ಕಳೆದ ವರ್ಷದ ಮೇ ತಿಂಗಳಿನ ಬಳಿಕ ದಾಖಲಾಗಿರುವ ಹೆಚ್ಚಿನ ಏರಿಕೆಯಾಗಿದೆ.
ಡಿಸೆಂಬರ್ ತಿಂಗಳಿನ ಜಿ.ಎಸ್.ಟಿ. ಸಂಗ್ರಹವೂ ಏರಿಕೆ ಕಂಡಿದ್ದು ವರ್ಷಾಂತ್ಯದಲ್ಲಿ ಸರಿಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಜಿ.ಎಸ್.ಟಿ. ಸಂಗ್ರಹಗೊಂಡಿರುವುದು ದೇಶೀ ಮಾರುಕಟ್ಟೆಯಲ್ಲಿ ಚೇತರಿಕೆಯ ವಾತಾವರಣ ಕಂಡುಬರುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಇನ್ನು ತೀವ್ರ ಸಂಕಷ್ಟ ಎದುರಿಸುತ್ತಿದ್ದ ಮೋಟಾರು ಮಾರುಕಟ್ಟೆಯಲ್ಲಿ ಸಹ ಅಭಿವೃದ್ಧಿಯ ಲಕ್ಷಣಗಳು ತೋರಿಬಂದಿದ್ದು ಮಾರುತಿ ಸುಝುಕಿ ಕಾರುಗಳ ಮಾರಾಟದಲ್ಲಿ ಏರಿಕೆಯಾಗಿರುವುದಾಗಿ ಕಂಪೆನಿಯು ಹೇಳಿಕೊಂಡಿದೆ. ಹೊಸ ಹೂಡಿಕೆ ಘೋಷಣೆಗಳು ಡಿಸೆಂಬರ್ ತ್ರೈಮಾಸಿಕದಲ್ಲಿ 2018ರ ಜೂನ್ ತ್ರೈಮಾಸಿಕದ ಬಳಿಕ ಧನಾತ್ಮಕ ಬೆಳವಣಿಗೆ ಕಾಣುವಲ್ಲಿ ಪ್ರಮುಖ ಕಾರಣವಾಗಿದೆ ಎಂದು ಭಾರತೀಯ ಮಾರುಕಟ್ಟೆ ನಿಗಾ ಕೇಂದ್ರದ (CMIE) ಅಂಕಿ-ಅಂಶಗಳು ಸೂಚಿಸಿವೆ.