Advertisement

ಜಿಡಿಪಿ ಕುಸಿತ, ಉದ್ಯೋಗ ನಷ್ಟ, ಬಡತನ ಏಳು ವರ್ಷಗಳ ಮೋದಿ ಸಾಧನೆ: ಸಿದ್ದರಾಮಯ್ಯ

08:13 PM Aug 09, 2021 | Team Udayavani |

ಬೆಂಗಳೂರು: ಅರವತ್ತು ತಿಂಗಳು ಅಧಿಕಾರ ಕೊಟ್ಟರೆ ದೇಶದ ಸಾಮಾಜಿಕ – ಆರ್ಥಿಕ ಚಿತ್ರಣ ಬದಲಾಯಿವುದಾಗಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಏಳು ವರ್ಷಗಳ ಆಡಳಿತದಲ್ಲಿ ಐವತ್ತು ವರ್ಷಗಳಷ್ಟು ಹಿಂದಕ್ಕೆ ಹೋಗಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

ಕ್ವಿಟ್‌ ಇಂಡಿಯಾ ಚಳುವಳಿ ದಿನದ ಸ್ಮರಣಾರ್ಥ ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಏಳು ವರ್ಷಗಳಲ್ಲಿ ಸಾಮಾನ್ಯ ಶೇ.23 ರಷ್ಟು ಜನ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. ಹನ್ನೆರಡು ಕೋಟಿ ಉದ್ಯೋಗ ನಷ್ಟವಾಗಿದೆ, ದೇಶದ ಜಿ.ಡಿ.ಪಿ -7.7 ಕ್ಕೆ ಬಂದಿದೆ. ಇದು ದೇಶಕ್ಕೆ ಮೋದಿಯವರ ಕೊಡುಗೆ ಎಂದು ಟೀಕಿಸಿದರು.

ದೇಶದಲ್ಲಿ ಜನರ ಜೀವನ ನಿರ್ವಹಣಾ ವೆಚ್ಚ ದುಪ್ಪಟ್ಟಾಗಿದ್ದರೂ ಸುಳ್ಳು ಹೇಳಿಕೊಂಡು ಅಭಿವೃದ್ಧಿ ಎಂದು ನಂಬಿಸುತ್ತಿದ್ದಾರೆ. ಭಾರತದಲ್ಲಿ ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ ಎಂದು ಹೇಳಿದರು.

ಸಾವರ್ಕರ್‌ ಅವರಿಂದ ಹಿಡಿದು ಭಾರತೀಯ ಜನತಾ ಪಕ್ಷದ ಯಾವೊಬ್ಬ ನಾಯಕನೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರಲ್ಲ. ತ್ಯಾಗ ಬಲಿದಾನಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್‌ ಮಾತ್ರ. ಕಾಂಗ್ರೆಸ್‌ ತೊರೆದು ಹೋದವರು ಸೈದ್ಧಾಂತಿಕ ಬದ್ಧತೆಯಿಲ್ಲದವರು ಎಂದು ತಿಳಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಮಾಡಿದ್ದೆವು. ಟಿಪ್ಪುವಿನ ದಿವಾನರಾಗಿದ್ದ ಪೂರ್ಣಯ್ಯನವರು ಹಿಂದುವಲ್ಲವೇ, ಹಣಕಾಸು ಮಂತ್ರಿಯಾಗಿದ್ದ ಕೃಷ್ಣಸ್ವಾಮಿ ಹಿಂದುವಲ್ಲವೇ. ಮೊಘಲರ ಆಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿದ್ದವರ ಪೀಳಿಗೆಯವರೇ ಇಂದು ಆರ್‌ಎಸ್‌ಎಸ್‌ ನ ನಾಯಕರಾಗಿದ್ದಾರೆ ಎಂದು ಹೇಳಿದರು.

Advertisement

ಇದನ್ನೂ ಓದಿ:ರಾಜ್ಯದಲ್ಲಿ ತಗ್ಗಿದ ಕೋವಿಡ್ : ಇಂದು 1186 ಪ್ರಕರಣ ಪತ್ತೆ| 24 ಜನರ ಸಾವು

ಕ್ವಿಟ್‌ ಇಂಡಿಯಾ ಚಳವಳಿ ದಿನ, ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯ ದಿನಾಚರಣೆ ಮುಂತಾದ ಪ್ರಮುಖ ದಿನಗಳಂದು ನಾವೆಲ್ಲ ತ್ಯಾಗ ಬಲಿದಾನದ ಮನಸ್ಥಿತಿ ಬೆಳೆಸಿಕೊಳ್ಳುವ ಪ್ರತಿಜ್ಞೆ ಮಾಡಬೇಕಾಗುತ್ತದೆ. ಜೊತೆಗೆ ಬಿಜೆಪಿಯನ್ನು ತೊಲಗಿಸುವ ಕೆಲಸಕ್ಕೆ ಒಂದಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಆಹಮದ್‌, ರಾಮಲಿಂಗಾರೆಡ್ಡಿ,ಮಾಜಿ ಸಚಿವ ಆರ್‌.ವಿ.ದೇಶಪಾಂಡೆ, ಪರಿಷತ್‌ ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌, ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಮತ್ತಿತರರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ರೇಸ್‌ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಭವನದಿಂದ ಕೆಪಿಸಿಸಿ ಕಚೇರಿವರೆಗೆ ಧ್ವಜ ಪಥ ಸಂಚಲನ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next