Advertisement

ಗಲ್ಲಿಗಲ್ಲಿಗಳಲ್ಲಿ ಗಜಮುಖನ ದರ್ಶನ

11:21 AM Sep 16, 2018 | Team Udayavani |

ಕಲಬುರಗಿ: ಚೌತಿ ನಿಮಿತ್ತ ಗಜಮುಖ ಗಣಪ ಹತ್ತು-ಹಲವು ಅವತಾರಗಳೊಂದಿಗೆ ನಗರದ ಗಲ್ಲಿ-ಗಲ್ಲಿಗಳಲ್ಲಿ ವಿರಾಜಿಸಿದ್ದಾನೆ. ಗಣೇಶ ಮಂಡಳಿಗಳು, ಸಂಘ-ಸಂಸ್ಥೆಗಳು, ಸಮುದಾಯಗಳ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟ ಗಣಪತಿ ಮೂರ್ತಿಗಳು ಸಾರ್ವಜನಿಕರ ಕಣ್ಮನ ಸೆಳೆಯುತ್ತಿವೆ.

Advertisement

ನಗರದ ಹಲವು ಬಡಾವಣೆಗಳ ಪ್ರಮುಖ ರಸ್ತೆಗಳು, ದೇವಸ್ಥಾನ, ಭವನಗಳು ಸೇರಿದಂತೆ ಬೃಹತ್‌ ಪೆಂಡಾಲ್‌ಗ‌ಳನ್ನು ಹಾಕಿ ಬಗೆಬಗೆಯ ಆಕಾರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪುಟಾಣಿ ಗಲ್ಲಿ. ಮಿಲನ್‌ ಚೌಕ್‌, ಚಕ್ಕರ ಕಟ್ಟಾ, ನೆಹರು ಗಂಜ್‌, ಚಪ್ಪಲ ಬಜಾರ್‌ ಸೇರಿದಂತೆ ನಗರದೆಲ್ಲೆಡೆ ಪ್ರತಿ ವರ್ಷದಂತೆ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಒಂದಕ್ಕಿಂತ ಒಂದನ್ನು ಮೀರಿಸುವಂತಿವೆ.

ಪುಟಾಣಿ ಗಲ್ಲಿಯಲ್ಲಿ 18 ಅಡಿಯ ಎತ್ತರದ ಹನುಮನ ಅವತಾರದ ಗಣಪ, ನೆಹರು ಗಂಜ್‌ನಲ್ಲಿ ಲಿಂಗದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ, ಚಕ್ಕರ ಕಟ್ಟಾದ ಡೊಳ್ಳು ಬಾರಿಸುವ ಗಣಪತಿ ಮೂರ್ತಿಗಳು ಜನರನ್ನು ಆಕರ್ಷಿಸುತ್ತಿದೆ. ಆಯಾ ಬಡಾವಣೆ ಮಹಿಳೆಯರು, ಮಕ್ಕಳು ಬೆಳಗ್ಗೆ ಮತ್ತು ಸಂಜೆ ಪೂಜೆ ಸಲ್ಲಿಸುವ ಮೂಲಕ ವಿಘ್ನ ನಿವಾರಕನನ್ನು ಆರಾಧಿಸುತ್ತಿದ್ದಾರೆ. 

ಸಾಯಂಕಾಲ 6 ಗಂಟೆ ನಂತರ ಗಣೇಶ ಪೆಂಡಾಲ್‌ ಗಳ ಎದುರು ಹಮ್ಮಿಕೊಳ್ಳಲಾಗುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಸುತ್ತಮುತ್ತಲಿನ ಬಡಾವಣೆಗಳ ಜನರು ಜಮಾಯಿಸುತ್ತಿದ್ದಾರೆ.

21 ದಿನಗಳವರೆಗೂ ಪ್ರತಿಷ್ಠಾಪನೆ: ಪ್ರಸಕ್ತ ವರ್ಷ ಜಿಲ್ಲೆಯಾದ್ಯಂತ ಒಟ್ಟು 1,447 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಕಲಬುರಗಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 655ಕ್ಕೂ ಹೆಚ್ಚು ಗಣಪನ ಮೂರ್ತಿಗಳನ್ನು
ಪ್ರತಿಷ್ಠಾಪಿಸಲಾಗಿದೆ. ಮೂರು ದಿನಗಳಿಂದ ಹಿಡಿದು 21 ದಿನಗಳವರೆಗೂ ಗಣೇಶನನ್ನು ಪ್ರತಿಷ್ಠಾಪಿಸಿ ವಿಸರ್ಜನೆ ಮಾಡಲಾಗುತ್ತಿದೆ. ಅತಿ ಹೆಚ್ಚು ಗಣೇಶ ವಿಸರ್ಜನೆಗಳು 5, 7, 9 ಹಾಗೂ 11ನೇ ದಿನ ನಡೆಯುತ್ತವೆ.
 
ಮನೆಗಳಲ್ಲಿ ಪರಿಸರ ಸ್ನೇಹಿ ಗಣಪ: ಬಣ್ಣ-ಬಣ್ಣದ ರಾಸಾಯನಿಕಯುಕ್ತ ಪಿಒಪಿ ಮೂರ್ತಿಗಳ ಭರಾಟೆ ನಡುವೆಯೂ ನಗರದ ಜನತೆ ಪರಿಸರ ಸ್ನೇಹಿ ಜೇಡಿ ಮಣ್ಣಿನ ಗಣಪ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಸಾಮಾಜಿಕ ಕಳಕಳಿಗೆ ಸ್ಪಂದಿಸಿದ್ದಾರೆ. ಮನೆಗಳಲ್ಲಿ ಮಣ್ಣಿನ ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ವಿಘ್ನ ನಿವಾರಕನ ಕೃಪೆಗೆ ಪಾತ್ರರಾಗಿದ್ದಾರೆ.

Advertisement

ನೂತನ ಮಹಾವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಕೆ-ಲ್ಯಾಪ್‌ ಮತ್ತಿತರ ಸಂಸ್ಥೆಗಳು ಪರಿಸರ ಸ್ನೇಹಿ ಗಣಪಗಳ ತಯಾರಿಕೆ ಮಾಡಿದ್ದು, 500ಕ್ಕೂ ಹೆಚ್ಚು ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಮಾರಾಟವಾಗಿದ್ದು ವಿಶೇಷವಾಗಿದೆ.

ಕಲಬುರಗಿ ಗಣೇಶ ಮಹಾ ಮಂಡಳ 65 ವರ್ಷಗಳಿಂದ ಇದ್ದು, ಈ ವರ್ಷ ಮಂಡಳದ ಆಶ್ರಯದಲ್ಲಿ ನಗರದಾದ್ಯಂತ ಸುಮಾರು 190 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಸೆ.17ರಂದು ಹೈದ್ರಾಬಾದ ಕರ್ನಾಟಕ ವಿಮೋಚನೆ ದಿನಾಚರಣೆ ನಿಮಿತ್ತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಗರಕ್ಕೆ ಬರುತ್ತಿದ್ದು, ಅಂದು ಪುಟಾಣಿ ಗಲ್ಲಿಯ 18 ಅಡಿ ಎತ್ತರದ ಹನುಮನ ಗಣಪತಿಯನ್ನು ವೀಕ್ಷಿಸುವಂತೆ ಅವರಲ್ಲಿ ಮನವಿ ಮಾಡಲಾಗುತ್ತಿದೆ. 
 ಬಾಬುರಾವ್‌ ಜಹಾಗೀರದಾರ, ಅಧ್ಯಕ್ಷ, ಗಣೇಶ ಮಹಾ ಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next