Advertisement

ಟೀಕೆಗಳನ್ನು ಸಿಕ್ಸರ್‌ಗೆ ಅಟ್ಟಿದ ಗೇಲ್‌

11:52 AM Apr 28, 2018 | |

ಮನುಷ್ಯ ದುರ್ಬಲಗೊಂಡಾಗ, ಅವನು ಕಾಲನ ಏಟಿಗೆ ಸಿಲುಕಿ ಹೈರಾಣಾಗಿದ್ದಾಗ ಆಡಿಕೊಳ್ಳುವವರೇ ಹೆಚ್ಚು. ತೋಳ ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಎಂಬ ಕನ್ನಡದ ಗಾದೆ ಇದನ್ನು ಚೆನ್ನಾಗಿ ವಿವರಿಸುತ್ತದೆ. ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌ ದೈತ್ಯ (ಗಾತ್ರದಲ್ಲೂ ದೈತ್ಯನೇ!) ಕ್ರಿಸ್ಟೋಫ‌ರ್‌ ಹೆನ್ರಿ ಗೇಲ್‌ಗಾಗಿ ಇದನ್ನು ಹೇಳಬೇಕಾಗಿ ಬಂತು. ಸುಮ್ಮನೆ ಯೋಚನೆ ಮಾಡುವುದಾದರೆ ಗೇಲ್‌ ಸಾಧನೆ ಯಾವ ದಂತಕಥೆಗೆ ಕಡಿಮೆಯಿದೆ? ಟಿ20 ಕ್ರಿಕೆಟ್‌ನಲ್ಲಿ ಅವರು ಬಾರಿಸಿರುವ ಶತಕಗಳ ಸಂಖ್ಯೆ 21. 

Advertisement

ವಿಶ್ವದ ಇತರೆ ಯಾವುದೇ ಬ್ಯಾಟ್ಸ್‌ಮನ್‌ ಇನ್ನೂ 10 ಶತಕವನ್ನೇ ಬಾರಿಸದ ಕಾಲದಲ್ಲಿ ಗೇಲ್‌ 21 ಶತಕ ಬಾರಿಸಿದ್ದಾರೆಂದರೆ ಅವರ ಬ್ಯಾಟಿಂಗ್‌ ಸಾಮರ್ಥ್ಯವನ್ನು  ಎಲ್ಲರೂ ಗೌರವಿಸಲೇಬೇಕು.

ನೆನಪಿಡಿ, ವಿಶ್ವಕ್ರಿಕೆಟನ್ನು ಸದ್ಯ ಆಳುತ್ತಿರುವ ಭಾರತದ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಒಂದೂ ಶತಕ ಗಳಿಸಿಲ್ಲ. ಗೇಲ್‌ ಅಂತಾರಾಷ್ಟ್ರೀಯ ಟಿ20ಯಲ್ಲಿ 2, ಉಳಿದ 19 ಶತಕಗಳನ್ನು ಐಪಿಎಲ್‌ ಮಾದರಿಯ ಲೀಗ್‌ಗಳಲ್ಲಿ ಬಾರಿಸಿದ್ದಾರೆ. ಅಂತಹ ಗೇಲ್‌, ಈ ಬಾರಿ ಐಪಿಎಲ್‌ ತಂಡದಲ್ಲಿ ಸ್ಥಾನ ಪಡೆಯಲೂ ಒದ್ದಾಡಿದ್ದರು. ಇದಕ್ಕೂ ಹೆಚ್ಚಿನ ಅವಮಾನ 2018ರ ಐಪಿಎಲ್‌ ಹರಾಜಿನ ವೇಳೆ ನಡೆಯಿತು.

ಸತತ 2 ಐಪಿಎಲ್‌ ಆವೃತ್ತಿಯಲ್ಲಿ ಆಡದಿದ್ದ ಅವರನ್ನು ಖರೀದಿಸಲು ಯಾವ ಫ್ರಾಂಚೈಸಿಯೂ ಸಿದ್ಧವಿರಲಿಲ್ಲ. ಆರಂಭದ ಎರಡು ಬಾರಿ ಅವರ ಹೆಸರು ಬಂದಾಗ ಎಲ್ಲರೂ ನಿರ್ಲಕ್ಷಿಸಿದ್ದರು. 3ನೇ ಬಾರಿ ಹೆಸರು ಕೇಳಿದಾಗ ಪಂಜಾಬ್‌ನ ಮೆಂಟರ್‌ ಸೆಹವಾಗ್‌, ಮೂಲಬೆಲೆ 2 ಕೋಟಿ ರೂ.ಗೆ ಖರೀದಿಸಿದರು. ಆಗ ಉಳಿದ ಫ್ರಾಂಚೈಸಿಗಳು ಕಿಸಕ್ಕನೆ ನಕ್ಕಿದ್ದವು. ಅದು ಗೇಲ್‌ಗೆ ಮಾಡಿದ ದೊಡ್ಡ ಅವಮಾನ. 
ಐಪಿಎಲ್‌ನಲ್ಲಿ ರನ್‌ ಸುರಿಮಳೆ ಮಾಡುತ್ತಾ 5 ಆವೃತ್ತಿಗಳಲ್ಲಿ ಬರೀ ಗೇಲ್‌ ಹೆಸರೇ ಕೇಳುವಂತಾಗಿತ್ತು. ಅದರಲ್ಲೂ ಅವರು ಪುಣೆ ವಿರುದ್ಧ ಬಾರಿಸಿದ 175 ರನ್‌ಗಳನ್ನು ಎಂದಾದರೂ ಮರೆಯಲು ಸಾಧ್ಯವೇ? ಇಂಥ ಹಿನ್ನೆಲೆಯ ಗೇಲ್‌, ಕಳೆದೆರಡು ಆವೃತ್ತಿಗಳಲ್ಲಿ ವಿಫ‌ಲರಾಗಿದ್ದರು. ತಮ್ಮ ಬ್ಯಾಟಿಂಗ್‌ ಮೂಲಕ ಆರ್‌ಸಿಬಿಯ ಸ್ವರೂಪವನ್ನೇ ಬದಲಿಸಿದ್ದರೂ ಫಾರ್ಮ್ ಇಲ್ಲ ಎಂಬ ಕಾರಣ ಕೇಳಿ, ಆರ್‌ಸಿಬಿಯೂ ಕೈಬಿಟ್ಟಿತು. ಆಗಲೂ ಗೇಲ್‌ ಬೇಸರಪಡಲಿಲ್ಲ. ಪಂಜಾಬ್‌ಗ ಆಯ್ಕೆಯಾದ ನಂತರ ಎಂದಿನಂತೆ ತಮ್ಮದೇ ಧಾಟಿಯಲ್ಲಿ ನಗುತ್ತಲೇ ಭಾರತಕ್ಕೆ ಬಂದರು. 

ಇಲ್ಲಿಂದ ಶುರುವಾಯಿತು ಗೇಲ್‌ ಹವಾ. ಸತತ 3 ಪಂದ್ಯ ಗಳಲ್ಲಿ ರನ್‌ಗಳನ್ನು ಚಚ್ಚಿದ ಅವರು ಈ ಬಾರಿಯ ಐಪಿಎಲ್‌ನ ಮೊದಲ ಶತಕ ಬಾರಿಸಿದರು. ಅಲ್ಲಿಗೆ ಐಪಿಎಲ್‌ನಲ್ಲಿ ಅವರು ಗಳಿಸಿದ ಶತಕಗಳ ಸಂಖ್ಯೆ 6ಕ್ಕೇರಿತು. ಇದು ಐಪಿಎಲ್‌ ಮಟ್ಟಿಗೆ ದಾಖಲೆ. ಈಗ ಮತ್ತೆ ಗೇಲ್‌ ಗುಣಗಾನ ಶುರುವಾಗಿದೆ. ಇಂತಹ ಯಶಸ್ಸಿನ ನಡುವೆ ಗೇಲ್‌ ಹೇಳಿದ್ದೇನು ಗೊತ್ತಾ? ನನ್ನನ್ನು ಆಯ್ಕೆ ಮಾಡಿ ಸೆಹವಾಗ್‌ ಐಪಿಎಲ್‌ ಅನ್ನು ಉಳಿಸಿದರು!

Advertisement

ಗೇಲ್‌ ಅವರಿಗೀಗ 38 ವರ್ಷ. ಐಪಿಎಲ್‌ನ ಹಿರಿಯ ಆಟಗಾರರಲ್ಲೊಬ್ಬರು. ಆದರೆ ತನಗೆ ವಯಸ್ಸಿನ ಯಾವ ಅಡ್ಡಿಯಿಲ್ಲ ಎನ್ನುವುದನ್ನು ಸ್ಫೋಟಕ ಬ್ಯಾಟಿಂಗ್‌ ಮೂಲಕ ಸಾಬೀತು ಮಾಡಿದ್ದಾರೆ. ತಮ್ಮೆದುರಿಗೆ ಟೀಕೆಗಳ ರೂಪದಲ್ಲಿ ಬಂದು ನಿಂತ ಅವಮಾನವನ್ನು ಬ್ಯಾಟ್‌ನ ಮೂಲಕ ಬೌಂಡರಿ ಗೆರೆ ದಾಟಿದ್ದಾರೆ. ಅಭಿನಂದನೆಗಳು ಗೇಲ್‌.

ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next