ಸೈಂಟ್ ಲೂಸಿಯಾ: ಬೌಲರ್ ಗಳ ಬಿಗು ದಾಳಿ, ಕ್ರಿಸ್ ಗೇಲ್ ರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರನೇ ಪಂದ್ಯದಲ್ಲೂ ಗೆಲುವು ಸಾಧಿಸಿದೆ. ಇದರೊಂದಿಗೆ ಇನ್ನೆರಡು ಪಂದ್ಯ ಬಾಕಿ ಇರುವಂತೆ ಸರಣಿ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ ತಂಡ 20 ಓವರ್ ಗಳಲ್ಲಿ ಗಳಿಸಿದ್ದು 141 ರನ್ ಮಾತ್ರ. ನಾಯಕ ಫಿಂಚ್ 30 ರನ್, ಹೆನ್ರಿಕ್ಸ್ 33 ರನ್ ಮತ್ತು ಟರ್ನರ್ 24 ರನ್ ಗಳಿಸಿದರು. ಆದರೆ ನಿಧಾನಗತಿಯ ಬ್ಯಾಟಿಂಗ್ ಆಸೀಸ್ ಗೆ ಮುಳುವಾಯಿತು. ವಿಂಡೀಸ್ ಪರ ಹೇಯ್ಡನ್ ವಾಲ್ಶ್ ಎರಡು ವಿಕೆಟ್ ಪಡೆದರೆ, ಮೆಕಾಯ್, ಬ್ರಾವೋ ಮತ್ತು ಅಲೆನ್ ತಲಾ ಒಂದು ವಿಕೆಟ್ ಕಬಳಿಸಿದರು.
ಇದನ್ನೂ ಓದಿ:ಹತ್ತಾರು ತಲ್ಲಣಗಳ ನಡುವೆ ಒಲಿಂಪಿಕ್ಸ್‌ಗೆ ಸಿದ್ಧವಾಗಿದೆ ಟೋಕಿಯೊ
ಗುರಿ ಬೆನ್ನತ್ತಿದ್ದ ವಿಂಡೀಸ್ ಕೂಡಾ ಆರಂಭದಲ್ಲಿ ಫ್ಲೆಚರ್ ವಿಕೆಟ್ ಕಳೆದುಕೊಂಡಿತು. ಸಿಮನ್ಸ್ ಕೂಡಾ 15 ರನ್ ಗೆ ಔಟಾದರು. ಆದರೆ ತನ್ನ ಹಳೇಯ ಖದರ್ ನಲ್ಲಿ ಬ್ಯಾಟ್ ಬೀಸಿದ ಗೇಲ್ ಕೇವಲ 38 ಎಸೆತದಲ್ಲಿ 67 ರನ್ ಚಚ್ಚಿದರು. ಈ ಇನ್ನಿಂಗ್ಸ್ ನಲ್ಲಿ ಗೇಲ್ ಏಳು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಬಾರಸಿದರು. ನಾಯಕ ಪೂರನ್ ಜವಾಬ್ದಾರಿಯ ಆಟವಾಡಿ ಅಜೇಯ 32 ರನ್ ಗಳಿಸಿದರು. ವಿಂಡೀಸ್ 14.5 ಓವರ್ ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಆಸೀಸ್ ಪರ ಮೆರಡಿತ್ ಮೂರು ವಿಕೆಟ್ ಪಡೆದರೆ, ಒಂದು ವಿಕೆಟ್ ಸ್ಟಾರ್ಕ್ ಪಾಲಾಯಿತು. ನಾಯಕ ಪೊಲಾರ್ಡ್ ಅನುಪಸ್ಥಿತಿಯಲ್ಲಿ ನಿಕೋಲಸ್ ಪೂರನ್ ತಂಡವನ್ನು ಮುನ್ನಡೆಸುತ್ತಿದ್ದು, ಸರಣಿಯ ಮೊದಲ ಮೂರು ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಂಡಿದೆ.