ಶಿರಸಿ: ಬಣ್ಣದ ಚಿತ್ರಗಳೇ ಮಕ್ಕಳ ಚಿತ್ತ ಬದಲಿಸುತ್ತವೆ ಎಂದು ಪ್ರಸಿದ್ಧ ಸಾಹಿತಿ ತಮ್ಮಣ್ಣ ಬೀಗಾರ ಹೇಳಿದರು. ಅವರು ನಗರದಲ್ಲಿ ಗಾಯತ್ರಿ ಗೆಳೆಯರ ಬಳಗ ಗುರುವಾರ ಸಂಜೆ ಆಯೋಜಿಸಿದ್ದ ಸನ್ಮಾನ, ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೇಡದ ಬೇಕಿರುವ ಚಿಂತೆ, ಚಿಂತನೆಯನ್ನು ನಾವು ಮಾಡುತ್ತೇವೆ. ಆದರೆ ಮಕ್ಕಳು ಹಾಗಲ್ಲ. ಅವರ ಮನಸ್ಸು ನಿಷ್ಕಲ್ಮಷವಾಗಿರುತ್ತದೆ.
ನಾವು ಏನನ್ನು ನೀಡುತ್ತೇವೆಯೋ ಅದನ್ನೇ ನೋಡಿ ಕಲಿಯುತ್ತಾರೆ. ನಮ್ಮ ಮಕ್ಕಳು ಉತ್ತಮ ಪ್ರಜೆ ಆಗಬೇಕೆಂದಿದ್ದರೆ ಮೊದಲು ನಾವು ಅವರ ಕೈಗೆ ಬಣ್ಣದ ಚಿತ್ತಾರಗಳ ಚಿತ್ರವನ್ನೇ ನೀಡಬೇಕು. ಅವು ಅವರ ಚಿತ್ತವನ್ನು ಉತ್ತಮವಾಗಿ ಬದಲಿಸುತ್ತವೆ ಎಂದು ವಿವರಿಸಿದರು. ಮಕ್ಕಳ ವ್ಯಕ್ತಿತ್ವ ರೂಪಗೊಳ್ಳುವಿಕೆ ನಿರಂತರ ಕ್ರಿಯೆ. ಪರಿಪೂರ್ಣರು ಯಾರೂ ಇರುವುದಿಲ್ಲ. ಆದರೆ ಬಾಲ್ಯದಲ್ಲಿ ಪರಿಸರದ ಪ್ರಭಾವಕ್ಕೆ ಒಳಗಾಗುತ್ತೇವೆ.
ಮಕ್ಕಳಿಗೆ ಯಾವ ರೀತಿಯ ಪರಿಸರ ಒದಗಿಸಬಹುದು ಎನ್ನುವುದನ್ನು ನಾವು ಮೊದಲು ಅರಿಯಬೇಕು. ಮಕ್ಕಳಿಗ ಕೊಡುವ ಪ್ರೀತಿ ಕಟ್ಟಿಕೊಡುವ ಪ್ರೀತಿಯೇ ಉತ್ತಮ ಸಂಸ್ಕಾರವಾಗಲಿದೆ. ಮಕ್ಕಳ ಬಗ್ಗೆ ಹೇಳುವಾಗ ಮೊಬೈಲ್‌ಗೆ ಮಕ್ಕಳು ದಾಸರಾಗುತ್ತಾರೆ ಎನ್ನುತ್ತೇವೆ.
ಆದರೆ ನಾವು ಅದನ್ನು ಬಳಸಬೇಡಿ ಎನ್ನದೇ ಅದರ ಮೇಲಿನ ಪ್ರಭಾವದ ಬಗ್ಗೆ ಗಮನ ಹರಿಸಬೇಕು. ಉತ್ತಮವಾದುದೇ ಅವರು ತೆಗೆದುಕೊಳ್ಳಬೇಕೆಂದು ನಾನು ಅವರಿಗೆ ಮನವರಿಕೆ ಮಾಡಬೇಕು. ಬಣ್ಣ, ಬಣ್ಣದ ಪುಸ್ತಕಗಳು ಮಕ್ಕಳ ಮನಸ್ಸಿಗೆ ಮುದನೀಡುತ್ತದೆ. ಚಿತ್ರಗಳೇ ಮನಸ್ಸಿನಚಿತ್ತಾರ ಬಿಡಿಸಬಲ್ಲವು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತೆ ವಿನುತಾ ಹೆಗಡೆ ಕಾನಗೋಡ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವವರ ಗುರುತಿಸುವಿಕೆ ಕಾರ್ಯವಾಗಬೇಕಿದೆ. ಅಂಥ ಕಾರ್ಯವನ್ನು ಗಾಯತ್ರಿ ಗೆಳೆಯರ ಬಳಗ ನಿರಂತರವಾಗಿ ಮಾಡುತ್ತ ಬಂದಿದ್ದು ಆಸಕ್ತರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದರು.
ಸನ್ಮಾನ ಸ್ವೀಕರಿಸಿದ ಪಂಡಿತ್ ಆಸ್ಪತ್ರೆ ಸುಶ್ರೂಷಕಿ ರವಿನಾ ರೊಡ್ರಿಗ್ಸ್ ಮಾತನಾಡಿ, ನನ್ನ ಕಾರ್ಯ ಗುರುತಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಡಿಎಂ ಭಟ್ ಕುಳವೆ ಸ್ವಾಗತಿಸಿದರು. ಸಾಹಿತಿ ತ್ರಿವೇಣಿ ಹೆಗಡೆ ಪರಿಚಯಿಸಿದರು. ಬಳಗದ ವಿ.ಜಿ.ಗಾಯತ್ರಿ ಉಪಸ್ಥಿತರಿದ್ದರು. ಬಳಿಕ ಯುವ ಗಾಯಕ ಮನು ಹೆಗಡೆ ಬಳಗದಿಂದ ಗಾಯನ ನಡೆಯಿತು. ತಬಲಾದಲ್ಲಿ ರಾಮದಾಸ ಭಟ್ಟ, ಹಾರ್ಮೋನಿಯಂದಲ್ಲಿ ಭರತ್ ಹೆಗಡೆ ಹೆಬ್ಬಲಸು, ತಾನಪೂರಾದಲ್ಲಿ ಪ್ರಜ್ವಲ ಹೆಗಡೆ, ಮಂಜಿರಾದಲ್ಲಿ ಅನಂತಮೂರ್ತಿ ಮತ್ತೀಘಟ್ಟಾ ಸಹಕರಿಸಿದರು.