ಕೊಪ್ಪಳ: ಮನುಷ್ಯ ಜಗದಲ್ಲಿ ನೀರು ಇದ್ದರೆ ನೀ ಇರುವೆ, ನೀರು ಇಲ್ಲದಿದ್ದರೆ ನೀ ಇರಲಾರೆ. ಜೀವನದಲ್ಲಿ ನಾವೆಲ್ಲರೂ ಮೂರು ಸಂಪತ್ತು ಕಾಪಾಡಿಕೊಳ್ಳಬೇಕು. ಅನ್ನ, ನೀರು, ಒಳ್ಳೆಯ ಮಾತುಗಳು ಮನುಷ್ಯನ ನಿಜವಾದ ಸಂಪತ್ತುಗಳು. ಹಾಗಾಗಿ ಗಿಣಗೇರಿ ಕೆರೆಯ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈ ಜೋಡಿಸಿ ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಗಿಣಗೇರಿ ಕೆರೆಯ ಹೂಳೆತ್ತುವ ಕಾರ್ಯದ ಕುರಿತು ಜಾಗೃತಿ ಪಾದಯಾತ್ರೆ ಜೊತೆಗೆ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನ ನಿಜವಾದ ಸಂಪತ್ತು ಯಾವುದು? ಎಂದು ದಾರ್ಶನಿಕರು ಚಿಂತನೆ ಮಾಡುತ್ತಿದ್ದಾರೆ. ನಾವೆಲ್ಲ ಯಾವುದಕ್ಕೆ ಸಂಪತ್ತು ಎನ್ನಬೇಕು. ನಮ್ಮ ದೃಷ್ಟಿಯಲ್ಲಿ ಬಂಗಾರ ನಿಜವಾದ ಸಂಪತ್ತಲ್ಲ. ತುಂಬಾ ಬಂಗಾರ ಹಾಕಿಕೊಂಡು ರಾತ್ರಿ ಸುತ್ತಾಡಿದರೆ ನಾವು ಉಳಿಯಲ್ಲ. ನನಗೆ ಆಪತ್ತು ತರುವ ಸಂಪತ್ತು ನಿಜವಾದ ಸಂಪತ್ತು ಆಗಲು ಸಾಧ್ಯವೇ ಇಲ್ಲ. ಬಂಗಾರ, ಬೆಳ್ಳಿ, ಹೊಲ, ಮನಿ, ವಜ್ರ, ಆಸ್ತಿ-ಅಂತಸ್ತು ನಮ್ಮ ಸಂಪತ್ತಲ್ಲ. ಮನುಷ್ಯನ ಜೀವನದಲ್ಲಿ ಅನ್ನ, ನೀರು, ನಾಲ್ಕು ಒಳ್ಳೆಯ ಮಾತುಗಳೇ ನಿಜವಾದ ಮೂರು ಸಂಪತ್ತುಗಳು ಎಂದರು.
ಯಾಕೆ ನೀರು ಸಂಪತ್ತಾಯ್ತು ಎಂದರೆ ಮನುಷ್ಯ ಕೊನೆಯ ಉಸಿರು ಎಳೆಯುವಾಗ ಅವನ ಪ್ರಾಣಪಕ್ಷಿ ಹಾರಿ ಹೋಗುವಾಗ ಆತನ ಬಾಯಿಗೆ ಬಂಗಾರ ಹಾಕಲ್ಲ, ನೀರು ಹಾಕುತ್ತಾರೆ. ಹಾಗೆ ಮನುಷ್ಯ ನೀರು ಇದ್ದರೆ ನೀ ಇರುವೆ ಇಲ್ಲದಿದ್ದರೆ ನೀ ಇರುವುದಿಲ್ಲ. ನೀರಿಗೆ ಅಷ್ಟೊಂದು ಮಹತ್ವ ಇದೆ. ಗಿಣಗೇರಿಯ ಜನರನ್ನು ಈ ಮೊದಲು ಬದುಕಿಸಿದ್ದು, ಈ ಗಿಣಗೇರಿ ಕೆರೆ. ನಿಮ್ಮೆಲ್ಲ ಹಿರಿಯರು ಇದೇ ಕೆರೆ ನೀರು ಕುಡಿದು ಬದುಕಿದ್ದಾರೆ. ಗಿಣಗೇರಿ ಎಂಬ ಹೆಸರಿನಲ್ಲಿಯೇ ಇಲ್ಲೊಂದು ಪಕ್ಷಿಧಾಮ ಇದ್ದಿರಬಹುದು, ಹಾಗಾಗಿ ಗಿಣಗೇರಿ ಕೆರೆ ಎಂದು ಹೆಸರು ಬಂದಿರಬಹುದು ಎಂದರು.
ಈ ಬಾರಿ ಅಜ್ಜನ ತೇರು ಮಠದಲ್ಲಿ ಎಳೆದಿದೆ. ಜಾತ್ರೆ ಗಿಣಗೇರಿ ಕೆರೆಯಲ್ಲಿ ನಡೆಯುತ್ತಿದೆ. ಇಲ್ಲಿನ ಯುವಕರು, ಹಿರಿಯರು, ಸಂಘ-ಸಂಸ್ಥೆಗಳು ಎಷ್ಟು ಸಾಧ್ಯವಿದೆಯೋ ಅಷ್ಟು ಕೆಲಸ ಮಾಡಿ. ಇದ್ದವರು ಧನ ದಾನ ಮಾಡಿ, ಶಕ್ತಿ ಇದ್ದವರು ಕೆರೆ ಸ್ವತ್ಛ ಮಾಡಿ, ಕೈಯಲ್ಲಿ ಶಕ್ತಿ ಇಲ್ಲದವರು ನಮ್ಮೂರು ಕೆರೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿ. ಕಳೆದ ವರ್ಷ ಹಿರೇಹಳ್ಳ ಸ್ವತ್ಛ ಮಾಡಿದೆವು. ಅಲ್ಲೀಗ 9 ಸೇತುವೆ ನಿರ್ಮಾಣಗೊಳ್ಳುತ್ತಿವೆ. ಇದರಿಂದ 25 ಹಳ್ಳಿಗಳು ಬದುಕಲಿವೆ. ಇಂದು ನೀರಿಗಾಗಿ ಹೋರಾಟ ನಡೆಯುತ್ತಿವೆ. ನೀವು ತುಪ್ಪ ಏಷ್ಟಾದರೂ ಬಳಸಿ, ಆದರೆ ನೀರನ್ನು ಮಿತವಾಗಿ ಬಳಸಿ. ಯರೆ ಭಾಗದಲ್ಲಿ ಇಂದು ಯುವಕರಿಗೆ ಕನ್ಯೆ ಕೊಡುತ್ತಿಲ್ಲ.
ಮನೆ ಮಗಳು ದೂರದ ಕೆರೆಗೆ ಹೋಗಿ ನೀರು ತರಬೇಕು ಎಂದು ಪಾಲಕರು ಕನ್ಯೆ ಕೊಡದಂತ ಸ್ಥಿತಿ ಬಂದಿದೆ. ಇದನ್ನು ನೀವೆಲ್ಲ ಅರ್ಥಮಾಡಿಕೊಳ್ಳಬೇಕು ಎಂದರು. ಬಿಜಕಲ್ ಮಠದ ಸಿದ್ಧಲಿಂಗ ಸ್ವಾಮಿಗಳು ಆಶೀರ್ವಚನ ನೀಡಿ, ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಾದದಿಂದ ಇಂದು ಗಿಣಗೇರಿ ಕೆರೆ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದೊಂದು ಪವಿತ್ರ ಹಾಗೂ ಶ್ರೇಷ್ಠದ ಕೆಲಸವಾಗಿದೆ. ಮನುಷ್ಯನಿಗೆ ನೀರೇ ಆಹಾರವಾಗಿದೆ.
ನೀರಿದ್ದರೆ ಎಲ್ಲವೂ ಚೆನ್ನಾಗಿ ನಡೆಯಲಿದೆ. ನೀರಿಲ್ಲದಿದ್ದರೆ ಏನೂ ಇಲ್ಲ. ಪಶು, ಪಕ್ಷಿಗೆ ನೀರು ಬೇಕೇ ಬೇಕು. ಅಲ್ಲಿ ಯಾವ ಜಾತಿ ಭೇದವಿಲ್ಲ. ಸರ್ವರಿಗೂ ನೀರು ಬೇಕು. ಅದರಿಂದಲೇ ನಾವು ಬದುಕುವುದು, ಅಂತಹ ಪವಿತ್ರ ಕಾರ್ಯಕ್ಕೆ ಗವಿ ಶ್ರೀಗಳು ಕೈ ಹಾಕಿದ್ದಾರೆ ಎಂದರು.
ಈ ಮೊದಲು ಶ್ರೀಗಳು ನಿಡಶೇಷಿ ಕೆರೆ ಅಭಿವೃದ್ಧಿಗೆ ಕೈ ಹಾಕಿದ್ದರು. ಅಲ್ಲಿ ನಿರಂತರ ದಾಸೋಹ ನಡೆಸಿ, ಪಾದ ಇಟ್ಟ ಬಳಿಕ ಕೆರೆಯ ಅಂದವೇ ಬದಲಾಗಿದೆ. ಅವರ ಪಾದ ದಿವ್ಯ ಪಾದವಾಗಿದೆ. ಇಂದು ಗಿಣಗೇರಿ ಕೆರೆಯಲ್ಲಿ ಪಾದ ಇರಿಸಿದ್ದಾರೆ. ನಿಮ್ಮ ಗಿಣಗೇರಿ ಕೆರೆಯು ತಾಯಿ ಇದ್ದಂತೆ, ತಾಯಿಯನ್ನು ಹೇಗೆ ಜೋಪಾನ ಮಾಡುತ್ತೇವೆಯೋ ಅದೇ ರೀತಿ ಗಿಣಗೇರಿ ಕೆರೆ ಜೋಪಾನ ಮಾಡಿ ಎಂದರು.
ಸಮಾರಂಭದಲ್ಲಿ ಶ್ರೀಕಂಠ ಸ್ವಾಮೀಜಿ, ಸುಬ್ಬಣ್ಣಾಚಾರ್, ನಾಗಲಿಂಗ ಸ್ವಾಮೀಜಿ, ವಿಶ್ವನಾಥ ಹಿರೇಗೌಡ್ರ, ಕರಿಯಪ್ಪ ಮೇಟಿ, ಗೂಳಪ್ಪ ಹಲಗೇರಿ, ವೆಂಕಟೇಶ ಬಾರಕೇರ, ಎ.ವಿ. ರವಿ, ಯಮನೂರಪ್ಪ ಕಟಗಿ, ಗುದೆ° ಹೊಸೂರು, ರಾಮಚಂದ್ರಪ್ಪ ಕವಲೂರು, ಪಾಂಡು ಹಲಗೇರಿ, ವೆಂಕಟೇಶ ಪೂಜಾರ, ಲಕ್ಷ್ಮಣ ಡೊಳ್ಳಿನ್, ಶೇಖರ ಇಂದರಗಿ, ಮಾರ್ಕಂಡೆಪ್ಪ ಹಡಪದ, ಬಸವಂತಪ್ಪ ಹಡಪದ, ಭೀಮಣ್ಣ ಹೂಗಾರ, ರವಿಕುಮಾರ ಬನ್ನಿಕೊಪ್ಪ, ಅನೀಲ್‌ಕುಮಾರ ಜಾನ ಸೇರಿದಂತೆ ಇತರರು ಪಾಲ್ಗೊಂಡಿದ್ದರು.