Advertisement

ಪರ್ಯಾಯ ಬೆಳೆ ಬೆಳೆಯಲು ಗವಿಶ್ರೀ ಸಲಹೆ

04:28 PM Aug 29, 2017 | |

ಗೊರೇಬಾಳ: ಮಳೆ ಅಭಾವದಿಂದ ಜಲಾಶಯದಲ್ಲಿ ನೀರಿನ ಕೊರತೆ ಯಾಗಿದ್ದು, ಬರೀ ಭತ್ತ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ರೈತರು ಸಮಾಧಾನದಿಂದ ಆಲೋಚಿಸಿ ಪರ್ಯಾಯ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದರು. ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದ ಶ್ರೀ ವಿಶ್ವನಾಥೇಶ್ವರ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ಪರ್ಯಾಯ ಬೆಳೆ ಹಾಗೂ ನದಿಗಳ ಜೋಡಣೆ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ರೈತರು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಎರಡು ಭತ್ತದ ಬೆಳೆ ಬೆಳೆಯುತ್ತಿದ್ದರು. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಕೃಷಿ ಕ್ಷೇತ್ರ ಸಂದಿಗ್ಧ ಸ್ಥಿತಿಯಲ್ಲಿದೆ. ಕೃಷಿ ಸಂಕಷ್ಟ ಪರಿಹರಿಸಿಕೊಳ್ಳುವತ್ತ ರೈತರು ಚಿಂತನೆ ಮಾಡಬೇಕಿದೆ. ರೈತರು ಸಮಾಧಾನದಿಂದ ಆಲೋಚಿಸಿ ಸೂಕ್ತ ಪರ್ಯಾಯ ಬೆಳೆ ಆಯ್ದುಕೊಳ್ಳಬೇಕಿದೆ. ಈ ವಿಷಯ ಗಂಭೀರವಾಗಿರುವುದರಿಂದ ಮುಕ್ತವಾಗಿ ಚರ್ಚೆ ನಡೆಸಬೇಕು ಎಂದರು. ಹೊಸ ಆಲೋಚನೆಗಳು ನಮ್ಮಲ್ಲಿ ಬಂದಾಗ ಮಾತ್ರ ಎಲ್ಲ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ನಮ್ಮ ಮುಂದಿರುವ ಇನ್ನೊಂದು ಸವಾಲು ನದಿಗಳ ಜೋಡಣೆ. ಈ ವಿಚಾರವಾಗಿಯೂ ಆಲೋಚಿಸಬೇಕಿದೆ. ಈಗ ತುಂಗಭದ್ರಾಜಲಾಶಯದಲ್ಲಿ ವರ್ಷದಿಂದ ವರ್ಷಕ್ಕೆ ನೀರು ಸಂಗ್ರಹ ಇಳಿಮುಖವಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಬೇರೆ ನದಿಯನ್ನು ತುಂಗಭದ್ರಾ ಜಲಾಶಯಕ್ಕೆ ಜೋಡಿಸುವ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು. ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಆ. 21ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತುಂಗಭದ್ರಾ ಜಲಾಶಯದಲ್ಲಿ ಈಗ ಸಂಗ್ರಹವಾಗಿರುವ ನೀರು, ಮುಂದೆ ಬರಬಹುದಾದ ಒಳಹರಿವಿನ ಲೆಕ್ಕಾಚಾರದಲ್ಲಿ ಎಡದಂಡೆ ನಾಲೆಗೆ ನೀರು ಹರಿಸಬೇಕೆಂಬ ಸುದೀರ್ಘ‌ ಚರ್ಚೆ ನಡೆಯಿತು. ಈಗ ಲಭ್ಯವಿರುವ ನೀರಿನಲ್ಲಿ ಭತ್ತದ ಬೆಳೆ ಬೆಳೆಯಲು ಸಾಧ್ಯವಿಲ್ಲ. ರೈತರಿಗೂ ನೀರಿನ ಕೊರತೆ ಬಗ್ಗೆ ಗೊತ್ತಿದೆ. ಆ.29 ರಂದು
ನಡೆಯುವ ಐಸಿಸಿ ಸಭೆಯಲ್ಲಿ ನೀರು ಬಿಡುವ ದಿನಾಂಕ ಪ್ರಕಟಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ರೈತರು ಪರ್ಯಾಯ ಬೆಳೆ ಬಗ್ಗೆ ಚಿಂತನೆ ನಡೆಸಬೇಕೆಂದು ಹೇಳಿದರು. ರಾಜ್ಯ ಕೃಷಿ ಬೆಲೆ ಆಯೋಗದ ಸದಸ್ಯ ಹನುಮನಗೌಡ ಬೆಳಗುರ್ಕಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರೈತರಿಗೆ ಪರ್ಯಾಯ ಬೆಳೆಯೇ ಪರಿಹಾರ. ಈಗ ಜಲಾಶಯದಲ್ಲಿ ಲಭ್ಯವಿರುವ ನೀರಿನ ಆಧಾರದಲ್ಲಿ ಭತ್ತದ ಬೆಳೆ ಪಡೆಯಲು ಸಾಧ್ಯವಿಲ್ಲ. ಕೃಷಿ ತಜ್ಞರ ಮಾರ್ಗದರ್ಶನ ಪಡೆದುಕೊಳ್ಳಬೇಕು ರೈತರಿಗೆ ಕಿವಿಮಾತು ಹೇಳಿದರು. ರೌಡಕುಂದ ಮರಿಸಿದ್ಧಲಿಂಗ
ಸ್ವಾಮೀಜಿ, ರಂಭಾಪುರಿ ಶಾಖಾ ಮಠದ ಸೋಮನಾಥ ಶಿವಾಚಾರ್ಯರು, ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ಶಾಸಕ ಪ್ರತಾಪಗೌಡ ಪಾಟೀಲ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ವೆಂಕಟರಾವ್‌ ನಾಡಗೌಡ, ಗಂಗಾಧರ ನಾಯಕ, ಕೃಷಿ ವಿಜ್ಞಾನಿ ಬಸವಣ್ಣೆಪ್ಪ, ಮುಖಂಡರಾದ ರಾಜಶೇಖರ ಪಾಟೀಲ, ಆರ್‌.ಬಸನಗೌಡ ತುರುವಿಹಾಳ, ಜಿ.ಪಂ. ಸದಸ್ಯರಾದ ಅಮರೇಗೌಡ ವಿರೂಪಾಪುರ, ಎನ್‌. ಶಿವನಗೌಡ ಗೊರೇಬಾಳ, ಬಾಬುಗೌಡ ಬಾದರ್ಲಿ, ಬಸವರಾಜ ಹಿರೇಗೌಡ್ರ, ದುರುಗಪ್ಪ ಗುಡಗಲದಿನ್ನಿ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next