ವರದಿ : ದತ್ತು ಕಮ್ಮಾರ
ಕೊಪ್ಪಳ : ಜಿಲ್ಲೆಯಲ್ಲಿ 100 ಆಕ್ಸಿಜನ್ ಬೆಡ್‌ಗಳ ಕೋವಿಡ್ ಆಸ್ಪತ್ರೆ ಆರಂಭಿಸಿರುವ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ನಿತ್ಯವೂ ಸೋಂಕಿತರ ಯೋಗಕ್ಷೇಮ ವಿಚಾರಿಸಲು ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಾರೆ.
ಆಸ್ಪತ್ರೆಯಲ್ಲಿನ ಸೋಂಕಿತರ ಜತೆ ಇನ್ನಿತರೆ ಸೋಂಕಿತರಿಗೂ ಧೈರ್ಯ ಹೇಳುವಂತೆಯೂ ಸಲಹೆ ನೀಡಿ ಗಮನ ಸೆಳೆದಿದ್ದಾರೆ. ಹೌದು. ಕೇವಲ ಆಸ್ಪತ್ರೆ ಆರಂಭಿಸಿ ಎಲ್ಲವನ್ನೂ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ ಎಂದು ಸುಮ್ಮನೆ ಕುಳಿತುಕೊಳ್ಳದ ಶ್ರೀಗಳು ಆಸ್ಪತ್ರೆಯ ಪ್ರತಿಯೊಂದು ಆಗು ಹೋಗುಗಳ ಬಗ್ಗೆ ನಿಗಾ ವಹಿಸಿದ್ದಾರೆ.
ಗವಿಮಠ ಕೋವಿಡ್ ಆಸ್ಪತ್ರೆ ಆರಂಭವಾಗಿ ನಾಲ್ಕೈದು ದಿನ ಕಳೆದಿದ್ದು, ಶನಿವಾರ ವೇಳೆಗೆ 31 ಜನ ಸೋಂಕಿತರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಸೋಂಕಿತರು ಆತಂಕಕ್ಕೆ ಒಳಗಾಗಬಾರದೆಂಬ ಉದ್ದೇಶದಿಂದ ನಿತ್ಯ ಸಂಜೆ ಆರೋಗ್ಯ ಸ್ಥಿರವಾಗಿದ್ದ ಸೋಂಕಿತರಿಗೆ ವಿಡಿಯೋ ಕಾಲ್ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ನಿಮಗೆ ಏನೂ ಆಗಲ್ಲ. ಚಿಕಿತ್ಸೆಗೆ ವೈದ್ಯರೊಂದಿಗೆ ಸ್ಪಂದಿಸಿ. ಆ ಗವಿಸಿದ್ದೇಶ್ವರನ ಕೃಪಾಶೀರ್ವಾದದಿಂದ ನೀವು ಬೇಗ ಗುಣಮುಖರಾಗಲಿದ್ದೀರಿ. ಸೋಂಕು ಬಂದಿದೆ ಎಂದು ಆತಂಕಕ್ಕೆ ಒಳಗಾಗಬೇಡಿ. ನಿಮ್ಮ ಹಿಂದೆ ನಿಮ್ಮ ಕುಟುಂಬ ವರ್ಗವಿದೆ. ಧೈರ್ಯವೇ ಎಲ್ಲವನ್ನೂ ದೂರ ಮಾಡುತ್ತದೆ ಎಂದು ಸೋಂಕಿತರಿಗೆ ಆತ್ಮಸ್ಥೈರ್ಯ ಹೇಳುತ್ತಿದ್ದಾರೆ. ನಿಮಗೆ ಏನೇ ಬೇಕಾದರೂ ಆಸ್ಪತ್ರೆಯಲ್ಲಿನ ಅಟೆಂಡರ್ ಇರುತ್ತಾರೆ. ಅವರ ಗಮನಕ್ಕೆ ತನ್ನಿ ಅವರು ನಿಮಗೆ ಸಹಾಯ ಮಾಡುತ್ತಾರೆ ಎಂದೆನ್ನುತ್ತಿದ್ದಾರೆ. ಶ್ರೀಗಳನ್ನು ನೋಡುವ ಸೋಂಕಿತರಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತಿದೆ. ನಮ್ಮನ್ನು ದೇವರು ಕಾಪಾಡುತ್ತಿದ್ದಾನೆ. ಶ್ರೀಗಳೇ ನಮ್ಮೊಂದಿಗೆ ಮಾತನಾಡುತ್ತಿದ್ದಾರೆಂದು ಧೈರ್ಯ ತಂದುಕೊಳ್ಳುತ್ತಿದ್ದಾರೆ.
ಸೋಂಕಿತರಿಂದ ಸಲಹೆ: ಇನ್ನು ಆಸ್ಪತ್ರೆಯಲ್ಲಿ ಸೋಂಕಿತರ ಜತೆ ಮಾತನಾಡುವ ಶ್ರೀಗಳು ಸೋಂಕಿತರಿಂದ ಇತರೆ ಸೋಂಕಿತರಿಗೂ ಧೈರ್ಯ, ಸಲಹೆ ಹೇಳುವ ಕೆಲಸ ಮಾಡಿಸುತ್ತಿದ್ದಾರೆ. ಒಂದು ವಾರ್ಡಿನಲ್ಲಿನ ಸೋಂಕಿತನ ಜತೆ ಮಾತನಾಡುವ ಶ್ರೀಗಳು ಅಕ್ಕ ಪಕ್ಕದ ಸೋಂಕಿತರಿಗೆ ಸಹಕರಿಸಿ, ನೀವು ಸಲಹೆ ನೀಡಬೇಕು. ಅವರಿಗೆ ಆರೋಗ್ಯದಲ್ಲಿ ಏನಾದರೂ ತೊಂದರೆಯಿದ್ದರೆ ಕೂಡಲೇ ಅಟೆಂಡರ್ ಗಮನಕ್ಕೆ ತರುವ ಕೆಲಸ ಮಾಡಬೇಕು. ಏನಾದರೂ ಸಮಸ್ಯೆಯಿದ್ದರೆ ನನ್ನ ಗಮನಕ್ಕೆ ತರಬೇಕೆಂದು ಶ್ರೀಗಳು ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಸೋಂಕಿತರ ಇಚ್ಛೆಯಂತೆ ದಾಸೋಹ: ಗವಿಮಠದ ಆಸ್ಪತ್ರೆಗೆ ದಾಸೋಹ ಭವನದಿಂದಲೇ ನಿತ್ಯ ಊಟ ಪೂರೈಸಲಾಗುತ್ತಿದೆ. ಸೋಂಕಿತರಿಗೆ ಅವರ ಇಚ್ಛೆಯಂತೆ ಬೆಳಗ್ಗೆ ಇಡ್ಲಿ, ಉಪ್ಪಿಟ್ಟು ಸೇರಿ ಉಪಹಾರ ಕೊಡಲಾಗುತ್ತಿದೆ. ಮಧ್ಯಾಹ್ನ ಪಲಾವು, ಚಪಾತಿ, ದಾಲ್ ಕೊಡಲಾಗುತ್ತಿದೆ. ರಾತ್ರಿಯೂ ಸಹಿತ ಇಚ್ಛೆಯಂತೆ ಪ್ರಸಾದವನ್ನು ಅವರ ದಾಸೋಹ ಭವನದ ಕೆಲ ಬಾಣಸಿಗರಿಂದ ತಯಾರಿಸಿ ಪೂರೈಸಲಾಗುತ್ತಿದೆ. ಓರ್ವ ಸೋಂಕಿತನು ತನಗೆ ರೊಟ್ಟಿ ತಿನ್ನಲು ಆಸೆಯಾಗಿದೆ ಎಂದು ಶ್ರೀಗಳ ಮುಂದೆ ಇಂಗಿತ ವ್ಯಕ್ತಪಡಿದನಂತೆ, ಅವರ ಆಸೆಯಂತೆ ರೊಟ್ಟಿಯನ್ನೂ ಮಾಡಿಸಿ ಊಟ ವಿತರಿಸಲಾಗಿದೆ.
ರಾತ್ರೋ ರಾತ್ರಿ ಬರ್ತಾರೆ: ಗವಿಮಠದಲ್ಲಿ 100 ಆಕ್ಸಿಜನ್ ಬೆಡ್‌ಗಳ ಆಸ್ಪತ್ರೆ ಆರಂಭಿಸಿದ ಸುದ್ದಿ ತಿಳಿದಾಕ್ಷಣ ನೂರಾರು ಸೋಂಕಿತರು ನೇರ ಮಠಕ್ಕೆ ಆಗಮಿಸಿ ಬೆಡ್ ನೀಡುವಂತೆ ಶ್ರೀಗಳಿಗೆ ಕೇಳಿಕೊಳ್ಳುತ್ತಿದ್ದಾರೆ. ಈಚೆಗೆ ಓರ್ವ ವ್ಯಕ್ತಿ ರಾತ್ರಿ 3 ಗಂಟೆಗೆ ಮಠಕ್ಕೆ ಆಗಮಿಸಿ ಬೆಳಗಿನ ಜಾವ ಶ್ರೀಗಳು ವಾಕಿಂಗ್ ಮಾಡಲು ತೆರಳುವಾಗ ಅವರನ್ನು ಭೇಟಿ ಮಾಡಿ ಆಕ್ಸಿಜನ್ ಬೆಡ್ ನೀಡುವಂತೆ ಕೇಳಿಕೊಂಡಿದ್ದಾನೆ. ಆಗ ಆ ಭಕ್ತನಿಗೆ ಶ್ರೀಗಳು ಸಲಹೆ ನೀಡಿ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.