Advertisement

ಗವಿಗಂಗಾಧರನಿಗೆ ಸೂರ್ಯಾಭಿಷೇಕ ;ನೂತನ ವರ್ಷ ಶುಭವಾಗಿರಲಿದೆ

11:08 AM Jan 15, 2022 | Team Udayavani |

 ಬೆಂಗಳೂರು: ಹನುಮಂತ ನಗರದಲ್ಲಿರುವ ಐತಿಹಾಸಿಕ ಶಿವದೇವಾಲಯ ಗವಿಗಂಗಾಧರೇಶ್ವರನ ಸನ್ನಿಧಿ ಶುಕ್ರವಾರ ಸೂರ್ಯನ ರಶ್ಮಿಯ ಚಮತ್ಕಾರಕ್ಕೆ ಸಾಕ್ಷಿಯಾಯಿತು. ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಸೂರ್ಯರಶ್ಮಿ ಶಿವನ ಪಾದವನ್ನು ಸ್ಪರ್ಶಿಸಿ ಅಚ್ಚರಿ ಸನ್ನಿವೇಶವನ್ನು ಸೃಷ್ಟಿಸಿತು. ಹೀಗಾಗಿ ಕೆಲವು ನಿಮಿಷಗಳ ಕಾಲ ಗವಿಗಂಗಾಧರನಿಗೆ ಸೂರ್ಯಾಭಿಷೇಕವೇ ನಡೆಯಿತು.

Advertisement

ಗರ್ಭ ಗುಡಿಯೊಳಗಿನ ಲಿಂಗದ ಮುಂದಿ ರುವ ನಂದಿಕೊಂಬಿ ನಿಂದ ಹಾದು ಹೋದ ಸೂರ್ಯನ ಕಿರಣಗಳು ನಂತರ ಪಾಣಿ ಪೀಠದ ಮೂಲಕ ಶಿವಲಿಂಗದ ಮೇಲೆ ಪ್ರಕಾಶ ಮಾನವಾಗಿ ಬೆಳಗಿತು. ಸುಮಾರು 2 ನಿಮಿಷ 13 ಸೆಂಕೆಡ್‌ಗಳ ಕಾಲ ಸೂರ್ಯನು ಗವಿಗಂಗಾಧರನ ದರ್ಶನ ಪಡೆದಂತಾಗಿತ್ತು. ಸೂರ್ಯನ ರಶ್ಮಿಗಳು ಶಿವಲಿಂಗವನ್ನು ಸ್ಪರ್ಶಿಸುವ ವೇಳೆ ಬಂಗಾರದ ಬಣ್ಣ ಶಿವಲಿಂಗದ ಸುತ್ತ ಕವಿದು ಭಕ್ತಿ ಲೋಕವನ್ನು ಅನಾವರಣಗೊಳಿಸಿತು. ಓಂ ನಮಃ ಶಿವಾಯ ಮಂತ್ರ ಘೋಷಗಳು ಮೊಳಗಿದವು. ಗಂಟೆ ಸದ್ದಿನ ಜತೆಗೆ ನಾದ ಸ್ವರ ಭಕ್ತರ ಭಕ್ತಿಯನ್ನು ಇಮ್ಮಡಿಗೊಳಿಸಿತು. ಕಳೆದ ಬಾರಿ ಮೋಡಕವಿದ ವಾತಾವರಣದಿಂದ ಸೂರ್ಯರಶ್ಮಿಗಳು ಗಂಗಾಧರನಿಗೆ ತಲುಪಿರಲಿಲ್ಲ.

ದೇಗುಲಕ್ಕೆ ಅಪಾರಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದ ಕಾರಣ ಟಿ.ವಿ.ಮಾಧ್ಯಮಗಳ ನೇರ ಪ್ರಸಾರ ಮೂಲಕ ಅಸಂಖ್ಯಾತ ಭಕ್ತರು ಗವಿಗಂಗಾಧರೇಶ್ವರನ ಸೂರ್ಯಾಭಿಷೇಕವನ್ನು ಕಣ್ತುಂಬಿಕೊಂಡರು. ಸೂರ್ಯರಶ್ಮಿ ಶಿವಲಿಂಗ ಸ್ಪರ್ಶಿಸಿದ ನಂತರ ಶಿವಲಿಂಗಕ್ಕೆ ಕ್ಷೀರಾಭಿಷೇಕ ಸೇರಿದಂತೆ ವಿಶೇಷ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್‌ ದೀಕ್ಷಿತ್‌ ಪ್ರತಿಕ್ರಿಯಿಸಿ, ಸೂರ್ಯ ದೇವ ದಕ್ಷಿಣಾಯನ ಮುಗಿಸಿ ಉತ್ತರಾಯಣದತ್ತ ಹಾದು ಹೋಗಿದ್ದಾನೆ. ಕಳೆದ ಬಾರಿ ಮೋಡದ ಮರೆಯಲ್ಲಿ ಸೂರ್ಯ ಹಾದುಹೋಗಿದ್ದ. ಈ ಬಾರಿ ಸೂರ್ಯ ರಶ್ಮಿ ಚೆನ್ನಾಗಿ ಗೋಚರಿಸಿದೆ.

ಕೊರೊನಾ ಮಹಾಮಾರಿಯಿಂದ ಈ ವರ್ಷ ಭಕ್ತರಿಗೆ ಅವಕಾಶ ಕಲ್ಪಿಸಲಾಗಿರಲಿಲ್ಲ. ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಸಾಗುವ ಸೂರ್ಯ ದೇವ ಶಿವದರ್ಶನ ಪಡೆದ ವೇಳೆ ಶಿವನ ವಿಗ್ರಹಕ್ಕೆ ಎಳನೀರು ಮತ್ತು ಕ್ಷೀರಾಭಿಷೇಕ ಮಾಡಲಾಯಿತು ಎಂದರು.

ಈ ನೂತನ ವರ್ಷ ಶುಭವಾಗಿರಲಿದೆ

Advertisement

ಕಳೆದ ಬಾರಿ ಮೋಡದ ಮರೆಯಲ್ಲಿ ಸೂರ್ಯ ಹಾದುಹೋಗಿದ ಹಿನ್ನೆಲೆಯಲ್ಲಿ ಹಲವು ಸಂಕಷ್ಟಗಳನ್ನು ನಾವು ಅನುಭವಿಸಿದ್ದೆವು. ಕೊರೊನಾ ಸಂಕಷ್ಟ ಎದುರಾಯಿತು. ಆದರೆ ಈ ವರ್ಷ ಸೂರ್ಯ ರಶ್ಮಿ ಶಿವಲಿಂಗವನ್ನು ಸಂಪೂರ್ಣ ವಾಗಿ ಸ್ಪರ್ಶಿಸಿದೆ. ಹೀಗಾಗಿ ಎಲ್ಲವೂ ಶುಭವಾಗಿಯೇ ಇರಲಿದೆ ಎಂದು ಸೋಮಸುಂದರ್‌ ದೀಕ್ಷಿತ್‌ ತಿಳಿಸಿದರು. ಕಳೆದ ತಿಂಗಳ ಅಂತ್ಯ ಮತ್ತು ಈ ತಿಂಗಳ ಆರಂಭದಲ್ಲೆ ಕ್ರಮೇಣ ಸೋಂಕು ಏರಿಕೆಯಾಗಿದೆ. ಜಗತ್ತು ಕೋವಿಡ್‌ ಮಹಾಮಾರಿಯಿಂದ ಮುಕ್ತಿಯಾಗಲಿ. ಆ ಮೂಲಕ ವಿಶ್ವಕ್ಕೆ ಒಳಿತಾಗಲಿ ಎಂದು ಆಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next