Advertisement

ಟೈಟಲ್‌ ಕೊಟ್ರು, ವಿತರಕರಿಗೂ ಹೇಳಿದ್ರು

11:17 AM May 20, 2018 | |

ಕೆಲವು ಸಿನಿಮಾಗಳಲ್ಲಿ ಅನಂತ್‌ನಾಗ್‌ ಅವರು ಹೋಗಿ ನಟಿಸಿ ಬರುತ್ತಾರೆ. ಇನ್ನು ಕೆಲವು ಸಿನಿಮಾಗಳ ಕಥೆ  ಅವರಿಗೆ ತುಂಬಾನೇ ಇಷ್ಟವಾದರೆ ತಮ್ಮ ಸಲಹೆ ಕೊಟ್ಟು, ಸಿನಿಮಾವನ್ನು ಮತ್ತಷ್ಟು ಚೆಂದಗಾಣಿಸುತ್ತಾರೆ. ಸದ್ಯ ಅನಂತ್‌ನಾಗ್‌ ಅವರು ತುಂಬಾನೇ ಇಷ್ಟಪಟ್ಟಿರುವ ಕಥೆ ಎಂದರೆ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’. ನರೇಂದ್ರ ಬಾಬು ನಿರ್ದೇಶನದ ಈ ಚಿತ್ರ ಮೇ 25 ರಂದು ತೆರೆಕಾಣುತ್ತಿದೆ.

Advertisement

ನರೇಂದ್ರ ಬಾಬು ಅವರು ಮಾಡಿಕೊಂಡಿರುವ ಕಥೆ ಇಷ್ಟವಾದ್ದರಿಂದ ಅನಂತ್‌ನಾಗ್‌ ಅವರು ಸಂಪೂರ್ಣವಾಗಿ ಈ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದು ಸ್ಕ್ರಿಪ್ಟ್ನಲ್ಲಿನ ಒಂದಷ್ಟು ತಿದ್ದುಪಡಿಯ ಜೊತೆಗೆ ಚಿತ್ರಕ್ಕೆ ಟೈಟಲ್‌ ಸೂಚಿಸುವ, ಸಿನಿಮಾಕ್ಕೆ ಹಣಕಾಸಿನ ತೊಂದರೆ ಆದಾಗ ನಿರ್ಮಾಪಕರನ್ನು ಹುಡುಕಿಕೊಡುವುದರಿಂದ ಹಿಡಿದು ಸಿನಿಮಾ ಬಿಡುಗಡೆಗೆ ವಿತರಕರನ್ನು ಸಂಪರ್ಕಿಸುವವರೆಗೂ ಅನಂತ್‌ನಾಗ್‌ ಅವರು “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. 

ಅನಂತ್‌ನಾಗ್‌ ಅವರು ಸ್ಕ್ರಿಪ್ಟ್ನಲ್ಲಿ ತೊಡಗಿಸಿಕೊಂಡ ಬಗ್ಗೆ ಮಾತನಾಡುವ ನಿರ್ದೇಶಕ ನರೇಂದ್ರ ಬಾಬು,  “ಮೊದಲ ಹಂತದ ಸ್ಕ್ರಿಪ್ಟ್ ಮಾಡಿ, ಅನಂತ್‌ನಾಗ್‌ ಅವರಿಗೆ ಕೊಟ್ಟೆ. ಇನ್ನೂ ಫೈನಲ್‌ ಆಗಿರಲಿಲ್ಲ. ಏನು ಬೈಯ್ಯುತ್ತಾರೋ ಎಂದು ಭಯದಲ್ಲಿದ್ದೆ. ಆದರೆ, ಅನಂತ್‌ನಾಗ್‌ ಅವರು ಆ ಸ್ಕ್ರಿಪ್ಟ್ಗೆ ಒಂದು ಅಂತಿಮ ರೂಪ ಕೊಟ್ಟರು. ಎಲ್ಲೆಲ್ಲಿ ಏನೇನೋ ಬೇಕಿತ್ತೋ ಅವೆಲ್ಲವನ್ನು ನೀಟಾಗಿ ಮಾಡಿಕೊಟ್ಟರು. ಆ ನಂತರ ಚಿತ್ರೀಕರಣಕ್ಕೆ ಹೋದೆವು’ ಎನ್ನುವುದು ನರೇಂದ್ರ ಬಾಬು ಮಾತು.

ಆರಂಭದಲ್ಲಿ ಚಿತ್ರಕ್ಕೆ “ಕಲ್ಲು ಸಕ್ಕರೆ ಕೊಳ್ಳಿರೋ’ ಎಂಬ ಟೈಟಲ್‌ ಇಡಲು ನಿರ್ಧರಿಸಿದ್ದರಂತೆ. ಆದರೆ, ಕಥೆ ಕೇಳಿದ ಅನಂತ್‌ನಾಗ್‌ ಅವರು, ಆ ಟೈಟಲ್‌ ಹೊಂದಿಕೆಯಾಗುವುದಿಲ್ಲ ಎಂದು “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಇಡುವಂತೆ ಸೂಚಿಸಿದರಂತೆ. ಇನ್ನು ಸಿನಿಮಾಕ್ಕೆ ಹಣಕಾಸಿನ ಸಮಸ್ಯೆ ಎದುರಾದಾಗ ಅನಂತ್‌ನಾಗ್‌ ಅವರು “ಮಾರ್ಚ್‌ 22′ ಚಿತ್ರದ ನಿರ್ಮಾಪಕ ಹರೀಶ್‌ ಶೇರಿಗಾರ್‌ ಅವರಿಗೆ ಫೋನ್‌ ಮಾಡಿ, ಸಿನಿಮಾವನ್ನು ಮುಂದುವರೆಸುವಂತೆ ಕೇಳಿಕೊಂಡರಂತೆ.

ಹರೀಶ್‌ ಶೇರಿಗಾರ್‌ ದುಬೈನ ಬುರ್ಜ್‌ ಖಲೀಫಾದಲ್ಲಿ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರೀಕರಣ ಮಾಡಲು ಅವಕಾಶ ಮಾಡಿಕೊಟ್ಟರಂತೆ. ಎಲ್ಲಾ ಓಕೆ, ಸಿನಿಮಾದ ವಿತರಣೆ ಯಾರು ಎಂದು ಆಲೋಚಿಸುತ್ತಿರುವಾಗಲೂ ಸಹಾಯಕ್ಕೆ ಬಂದವರು ಅನಂತ್‌ನಾಗ್‌. ಅನಂತ್‌ನಾಗ್‌ ಅವರಿಗೆ ವಿತರಕ ಜಯಣ್ಣ ಅವರ ಪರಿಚಯ ಚೆನ್ನಾಗಿತ್ತಂತೆ. ಅನಂತ್‌ನಾಗ್‌ ಅವರು ಜಯಣ್ಣನಿಗೆ ಫೋನ್‌ ಮಾಡಿ, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾವನ್ನು ವಿತರಣೆ ಮಾಡಿಕೊಡುವಂತೆ ಕೇಳಿಕೊಂಡರಂತೆ.

Advertisement

ಜಯಣ್ಣ ಮರು ಮಾತನಾಡದೇ ಸಿನಿಮಾ ವಿತರಣೆಗೆ ಒಪ್ಪಿಕೊಂಡರಂತೆ. “ಸಿನಿಮಾ ಚೆನ್ನಾಗಿತ್ತು. ಒಳ್ಳೆಯ ಸಿನಿಮಾ ಜನರಿಗೆ ತಲುಪಬೇಕೆಂಬ ಕಾರಣಕ್ಕೆ ಜಯಣ್ಣ ಅವರಲ್ಲಿ ವಿತರಣೆ ಮಾಡಿಕೊಡುವಂತೆ ಕೇಳಿದೆ. ಇನ್ನು ಸಿನಿಮಾಕ್ಕೆ ಹಣಕಾಸಿನ ತೊಂದರೆಯಾದಾಗ ಗೆಳೆಯ ಹರೀಶ್‌ ಶೇರಿಗಾರ್‌ ಅವರನ್ನು ಕೇಳಿಕೊಂಡೆ. ಅವರು ಖುಷಿಯಿಂದ ಬಂದು ಸಿನಿಮಾವನ್ನು ಮುನ್ನಡೆಸಿದರು’ ಎನ್ನುವುದು ಅನಂತ್‌ನಾಗ್‌ ಮಾತು. 

ಚಿತ್ರದಲ್ಲಿ ರಾಧಿಕಾ ಚೇತನ್‌ ಪ್ರಮುಖ ಪಾತ್ರ ಮಾಡಿದ್ದಾರೆ. ಎರಡು ಜನರೇಶನ್‌ನ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಬೇರೆ ಬೇರೆ ಯೋಚನೆಯ, ತಮ್ಮದೇ ಆದ ಸಿದ್ಧಾಂತವನ್ನು ನಂಬಿಕೊಂಡಿರುವ ಎರಡು ಜನರೇಶನ್‌ಗಳು ಒಟ್ಟಾದಾಗ ಆ ಜರ್ನಿ ಹೇಗಿರುತ್ತದೆ ಎಂಬುದನ್ನು ಹೇಳಿದ್ದಾರಂತೆ.  

Advertisement

Udayavani is now on Telegram. Click here to join our channel and stay updated with the latest news.

Next