Advertisement

ಅಂಧರ ಬಾಳಿಗೆ ಬೆಳಕಾದ ಗವಾಯಿಗಳು

05:33 PM Sep 18, 2018 | |

ದಾವಣಗೆರೆ: ಪುಟ್ಟರಾಜ ಗವಾಯಿಗಳು ಜಗತ್ತಿನ ಅದ್ಭುತಗಳಲ್ಲಿ ಒಬ್ಬರು. ಕಣ್ಣಿದ್ದು ಕುರುಡರಂತೆ ಆಗಿರುವ ಲೋಕದ ಜನರ ಬಾಳಲ್ಲಿ ಹೊಸ ಪರಿವರ್ತನೆಯ ಬೆಳಕು ಚೆಲ್ಲಿದವ ಅವರು, ಕಲಾವಿದರು, ಅಂಧರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾದವರು ಎಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಡಾ| ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಿಸಿದರು.

Advertisement

ಬಾಡಾಕ್ರಾಸ್‌ ಸಮೀಪದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ 202ನೇ ಅನಂತ ಹುಣ್ಣಿಮೆ, ಗಾನಯೋಗಿ ಲಿಂ| ಪಂ. ಪಂಚಾಕ್ಷರಿ ಗವಾಯಿಗಳವರ 74 ನೇ ಹಾಗೂ ಡಾ| ಪಂಡಿತ ಪುಟ್ಟರಾಜ ಗವಾಯಿಗಳವರ 8ನೇ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗದಗಿನಿಂದ ದಾವಣಗೆರೆಯ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಗೀತದ ಗದ್ದುಗೆ ಆರಂಭವಾಗಲು ಇಲ್ಲಿನ ಜನರ, ದಾನಿಗಳ, ಭಕ್ತರ ಪ್ರೀತಿಯೇ ಮುಖ್ಯ ನಿದರ್ಶನವಾಗಿದೆ. ಈ ಆಶ್ರಮದ ಗದ್ದುಗೆ ಶಿವಮೊಗ್ಗದಲ್ಲೂ ಇರುವುದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ. ಗದಗ, ದಾವಣಗೆರೆ, ಶಿವಮೊಗ್ಗ ಇಲ್ಲಿನ ಪುಣ್ಯಾಶ್ರಮದ ಶಾಖಾ ಮಠಗಳು ತ್ರಿಕೋನ ಆಕಾರದ ಪವಿತ್ರ ಕೇಂದ್ರಗಳಿದ್ದಂತೆ ಎಂದರು.

ಪಂಚಾಕ್ಷರಿ ಗವಾಯಿಗಳು ತ್ರಿಭಾಷಾ ಜ್ಞಾನಿಯಾಗಿದ್ದು, ಸಂಗೀತದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ಅವರು ಮನೆ ಮನೆ ಹೋಗಿ ಭಿಕ್ಷೆ ಬೇಡುವ ಮೂಲಕ ವೀರೇಶ್ವರ ಪುಣ್ಯಾಶ್ರಮ ಕಟ್ಟಿ ಬೆಳೆಸಿದವರು. ಅಲ್ಲದೇ ಹಾನಗಲ್‌
ಕುಮಾರಸ್ವಾಮಿಯವರು ಶಿವಯೋಗಾಶ್ರಮ, ವೀರಶೈವ ಸಮಾಜ ಕಟ್ಟಿದರು. ಸಮಾಜದ ಸರ್ವಾಂಗೀಣ ಪ್ರಗತಿಗೆ 100 ವರ್ಷಗಳ ಹಿಂದೆಯೇ ಸಾಕಷ್ಟು ಸಹಕಾರ ನೀಡಿದ್ದವರು ಎಂದು ಹೇಳಿದರು. 

ವಿದ್ಯೆಗೆ ಯಾವುದೇ ಜಾತಿ-ಬೇಧಗಳ ಹಂಗಿಲ್ಲ. ಎಲ್ಲರಿಗೂ ಸಮಾನಾಗಿ ಸಂಗೀತದ ವಿದ್ಯೆ ಕಲಿಸಬೇಕೆಂಬುದು ಅವರ ಸದಾಶಯವಾಗಿತ್ತು. ಅವರು ಆಶ್ರಮದ ಅಭಿವೃದ್ಧಿಗೆ ಶ್ರಮಿಸಿದ ಸೇವೆ ಅಪಾರ ಎಂದ ಅವರು, ಜಿಲ್ಲೆಯ ವಿದ್ಯಾರ್ಥಿಗಳಿಗೆ
ಶಿಕ್ಷಣ ನೀಡುವಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಸಹಕಾರಿಯಾದಂತೆ, ವೀರೇಶ್ವರ ಪುಣ್ಯಾಶ್ರಮ ಕೂಡ ಸಮಾಜದಲ್ಲಿ ಸಂಗೀತ, ಸಾಹಿತ್ಯ ಬೆಳೆಸುವ ಸಂಗೀತ ವಿಶ್ವವಿದ್ಯಾಲಯ ಆಗುವ ಮಟ್ಟಕ್ಕೆ ಬೆಳೆಯುವಂತಾಗಲಿ ಎಂದು ಆಶಿಸಿದರು. 

Advertisement

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಆಶ್ರಮದ ಅಂಧ ಮಕ್ಕಳನ್ನ ಕಣ್ಣಿದ್ದವರಂತೆ ತಯಾರು ಮಾಡುವಲ್ಲಿ ಪುಟ್ಟರಾಜ ಗವಾಯಿಗಳ ಶ್ರಮ ಅಪಾರವಾಗಿದೆ. ಅವರು ಸಂಗೀತದಲ್ಲಿ ಗಳಿಸಿದ ಕೀರ್ತಿ ದೇಶದುದ್ದಕ್ಕೂ ಹರಡಿದೆ ಎಂದರು.ವೀರೇಶ್ವರ ಪುಣ್ಯಾಶ್ರಮದ ಕಟ್ಟಡಗಳ ನಿರ್ಮಾಣಕ್ಕೆ ಶಿಲಾನ್ಯಾಸ ಆಗಿ ಮೂರು ವರ್ಷ ಆದರೂ ಇನ್ನು ಮುಗಿದಿಲ್ಲ. ಹಾಗಾಗಿ ಬಹುಬೇಗ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಮಿಟಿ ಕೆಲಸ ಮಾಡಲಿ ಎಂದು ಹೇಳಿದರು.

ಸಂಗೀತ ಶಾಲೆಯಲ್ಲಿ ಸಂಗೀತದ ಶಿಕ್ಷಕರ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಅನುಭವಿ ಸಂಗೀತ ಶಿಕ್ಷಕರನ್ನು ಕಮಿಟಿ ನೇಮಕ ಮಾಡುವ ಮೂಲಕ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತದಲ್ಲಿ ಮಕ್ಕಳು ಹೆಸರು ಮಾಡುವಂತೆ ತಯಾರು ಮಾಡುವಂತಾಗಬೇಕು ಎಂದರು.

ಇದೇ ವೇಳೆ ಪತ್ರಕರ್ತರಾದ ವೀರಪ್ಪ ಎಂ. ಭಾವಿ, ಇ.ಎಂ. ಮಂಜುನಾಥ್‌, ಮಂಜಪ್ಪ ಮಾಗನೂರು, ಕರವೇ ರಾಮೇಗೌಡರನ್ನ ಸನ್ಮಾನಿಸಲಾಯಿತು. ನಂತರ ಐದು ನಿಮಿಷಕ್ಕೂ ಹೆಚ್ಚು ಕಾಲ ವಾಯಿಲಿನ್‌ ನುಡಿಸಿದ ಬಿ.ಎಸ್‌.ಮs… ದಂಪತಿಗೆ ಶ್ರೀ ಗುರು ಪುಟ್ಟರಾಜ ಪ್ರಶಸ್ತಿ ಪುರಸ್ಕಾರ ನೀಡಿ, ಗೌರವಿಸಲಾಯಿತು.
 
ಆಟ್ನೂರ-ರಾಜೂರು-ಗದಗ ಮಠದ ಶ್ರೀ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಆರ್‌.ಬಿ. ಸಂಗಮೇಶ್ವರ ಗವಾಯಿ,
ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಕೈಗಾರಿಕೋದ್ಯಮಿ ಅಥಣಿ ವೀರಣ್ಣ, ಆಶ್ರಮದ ಅಧ್ಯಕ್ಷ ಎ.ಸಿ. ಜಯಣ್ಣ, ಎಸ್‌.ಟಿ. ಕುಸುಮಶೆಟ್ರಾ, ಎನ್‌.ಜಿ. ಪುಟ್ಟಸ್ವಾಮಿ, ಅಜ್ಜಂಪುರ ಶೆಟ್ರಾ ಸುಶೀಲಮ್ಮ, ಎ.ಎಚ್‌. ಶಿವಮೂರ್ತಿಸ್ವಾಮಿ, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಶ್ರೀಕಲ್ಲಯ್ಯಜ್ಜರ ತುಲಾಭಾರ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next