ಬೆಂಗಳೂರು: “ಗದುಗಿನ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳಿಗೆ ಕಣ್ಣು ಕಾಣುಸುತ್ತಿರಲಿಲ್ಲ. ಆದರೆ ಅವರ ಮನದಲ್ಲಿ ಕಾರುಣ್ಯದ ಬೆಳಕಿತ್ತು. ಊಟವಿಲ್ಲದೆ ಪರಿತಪಿಸುತ್ತಿದ್ದ ನನ್ನಂತವರಿಗೆ ಹೊಟ್ಟೆತುಂಬಾ ಊಟಹಾಕಿ ಸಂಗೀತ ವಿದ್ಯೆ ಹೇಳಿಕೊಟ್ಟರು. ಊರು ಕೇರಿಗೆ ಬೇಡವಾಗಿದ್ದ ನನ್ನಂತವರನ್ನು ಶಿಲ್ಪಿಯನ್ನಾಗಿ ಕೆತ್ತಿದರು’ ಎಂದು ತಬಲಾ ಸಾಧಕ ಪಂಡಿತ್ ಎಂ.ನಾಗೇಶ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀಗುರು ಗಾನ ಲಹರಿ ಸಂಗೀತ ಅಕಾಡೆಮಿ ಶನಿವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಶಮಾ ನೋತ್ಸವ ಸಮಾರಂಭದಲ್ಲಿ “ಪುಟ್ಟಶ್ರೀ ಸಮ್ಮಾನ್ ಪ್ರಶಸ್ತಿ’ ಸ್ವೀಕರಿಸಿ ಪುಟ್ಟರಾಜ ಗವಾಯಿಗಳನ್ನು ನೆನೆದರು. ಅಕ್ಷರದ ಅರಿವಿಲ್ಲದೆ ಊರು ಕೇರಿಗೆ ಬೇಡವಾಗಿದ್ದ ನನ್ನನ್ನು ಗುರುಗಳು ಆಶ್ರಮಕ್ಕೆ ಸೇರಿಸಿಕೊಂಡರು. ಹಸಿದ ಹೊಟ್ಟೆಗೆ ಊಟ ಹಾಕುವುದರ ಜತೆಗೆ ಬದುಕಿಗಾಗಿ ಸಂಗೀತ ವಿದ್ಯೆ ಹೇಳಿಕೊಟ್ಟರು. ಕಲ್ಲಿನ ಮೂರ್ತಿಯನ್ನು ಶಿಲ್ಪಿಯನ್ನಾಗಿ ಮಾಡುವ ಶಕ್ತಿ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳಲ್ಲಿತ್ತು ಎಂದು ಬಾವುಕರಾದರು.
ಪುಟ್ಟರಾಜರ ಶಿಕ್ಷಣ ಕಾರಣ: ಹಿರಿಯ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರ ಜತೆಗೆ ಕೆಲಸ ಮಾಡಿದ್ದೇನೆ. ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಹಿರಿಯ ಸಂಗೀತಗಾರರ ಜತೆಗೂ ಕಾರ್ಯ ನಿರ್ವಹಿಸಿದ್ದೇನೆ. ಇದಕ್ಕೆಲ್ಲಾ ಗಾನಯೋಗಿ ಪುಟ್ಟರಾಜ ಗವಾಯಿ ನೀಡಿದ ಶಿಕ್ಷಣ ಕಾರಣ. ನಾನೇನು ಸಾಧನೆ ಮಾಡಿಲ್ಲ. ಸಾಧನೆ ಮಾಡಿದ್ದೇನೆ ಎಂದು ಅನಿಸುವುದೇ ಇಲ್ಲ ಎಂದರು.
ಗವಾಯಿಗಳಲ್ಲಿ ಸಂಗೀತ ಕಲಿತಿದ್ದೇನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ನನ್ನ ಸಿನಿಮಾದಲ್ಲಿ ಸಂಗೀತ ಚೆನ್ನಾಗಿರುತ್ತೆ ಅಂದರೆ ಅದಕ್ಕೆ ಗುದುಗಿನ ಗಾನ ಯೋಗಿ ಪಂಚಾಕ್ಷರಿ ಗವಾಯಿ ಮತ್ತು ಪುಟ್ಟರಾಜ ಗವಾಯಿಗಳ ಸಂಪರ್ಕ ಕಾರಣ. ನಾನೂ ಪಂಚಾಕ್ಷರಿ ಗವಾಯಿಗಳಲ್ಲಿ ಸಂಗೀತ ಕಲಿತಿದ್ದೇನೆ. ಅದು ಸಿನಿಮಾದಲ್ಲಿ ಸಂಗೀತ ಉತ್ತಮವಾಗಿ ಮೂಡಿ ಬರಲು ಕಾರಣ. ಒಂದು ಸಿನಿಮಾ ಸಂಗೀತದ ಮೂಲಕವೂ ಚೆನ್ನಾಗಿ ಮೂಡಿ ಬರಬೇಕು ಎಂದರೆ ಆ ಚಿತ್ರದ ನಿರ್ದೇಶಕನಿಗೆ ಸಂಗೀತದ ಬಗ್ಗೆ ತಿಳಿವಳಿಕೆ ಇರಬೇಕು ಎಂದು ತಿಳಿಸಿದರು.
ನಮ್ಮದು ಗುರು ಪರಂಪರೆ ಹಿನ್ನೆಲೆಯುಳ್ಳ ದೇಶ. ಗುರು ಪರಂಪರೆ ಹಿನ್ನೆಲೆಯಿಂದ ಬಂದರೆ ಭವಿಷ್ಯತ್ತಿನಲ್ಲೂ ಅವರು ಸಂಸ್ಕಾರವಂತವಾಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಕೃತ ಮನಸುಗಳು ಹೆಚ್ಚಾಗಿವೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಪುಟಾಣಿಗಳೂ ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದು ಭವಿಷ್ಯತ್ತಿನ ದೃಷ್ಟಿಯಿಂದ ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಶ್ರೀಗುರು ಗಾನಲಹರಿ ಸಂಗೀತ ಅಕಾಡೆಮಿ ಅಧ್ಯಕ್ಷ ಶಿವಾನಂದ್ ಹೇರೂರ್, ನಿವೃತ್ತ ಮುಖ್ಯೋಪಾಧ್ಯಾಯ ಪಿ.ವೇಣುಗೋಪಾಲ ಆಚಾರ್ಯ, ಕವಿಯತ್ರಿ ಕಸ್ತೂರಿ ಡಿ.ಪತ್ತಾರ್ ಮತ್ತಿತರರು ಉಪಸ್ಥಿತರಿದ್ದರು.
ಗುರುಗಳು ನೀಡಿದ ಕೊಡುಗೆ: ಗದುಗಿನ ಗುರುಗಳ ಆಶ್ರಮ ಸಂಗೀತದ ಕಾಶಿಯಂತಿತ್ತು. ಏನೂ ಇಲ್ಲದ ನೂರಾರು ಅಂಧ ಮಕ್ಕಳಿಗೆ ಆಶ್ರಯ ತಾಣವಾಗಿತ್ತು. ಗುರುಗಳ ಸನ್ನಿಧಿಯಲ್ಲಿ ಸಂಗೀತ ಕಲಿತು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಪದವಿ ಪಡೆದ ಸರ್ಕಾರಿ ಹುದ್ದೆಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಇದೆಲ್ಲವೂ ಗುರುಗಳು ನೀಡಿದ ಕೊಡುಗೆ ಎಂದು ತಬಲಾ ಸಾಧಕ ಪಂಡಿತ್ ಎಂ.ನಾಗೇಶ್ ನುಡಿದರು.