Advertisement

ನಿವೃತ್ತಿ ಬೆನ್ನಲ್ಲೇ ಧೋನಿ ವಿರುದ್ಧ ಕಿಡಿಕಾರಿದ ಗಂಭೀರ್‌

09:27 AM Dec 10, 2018 | Harsha Rao |

ಹೊಸದಿಲ್ಲಿ: ಕೊನೆಯ ರಣಜಿ ಪಂದ್ಯದಲ್ಲಿ ಶತಕ ಬಾರಿಸುವುದರೊಂದಿಗೆ ತಮ್ಮ ಕ್ರಿಕೆಟ್‌ ಜೀವನಕ್ಕೆ ಮುಕ್ತಾಯ ಹಾಡಿರುವ ದಿಲ್ಲಿ ಕ್ರಿಕೆಟಿಗ ಗೌತಮ್‌ ಗಂಭೀರ್‌, ನಿವೃತ್ತಿಯ ಬೆನ್ನಲ್ಲೇ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. 2012ರಲ್ಲಿ ನಡೆದ ಸಿಬಿ ಸೀರಿಸ್‌ ವೇಳೆ ಧೋನಿ ತೆಗೆದುಕೊಂಡ ಕೆಲವು ನಿರ್ಣಯಗಳನ್ನು ಗಂಭೀರ್‌ ಕಟುವಾಗಿ ಟೀಕಿಸಿದ್ದಾರೆ. ಇದು ಧೋನಿ ಮತ್ತು ಗಂಭೀರ್‌ ನಡುವೆ ಮೊದಲಿಂದಲೂ ಇದ್ದ ಭಿನ್ನಮತವನ್ನು ಜಗಜ್ಜಾಹೀರು ಮಾಡಿದೆ.

Advertisement

2012ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಸಿಬಿ ಸೀರಿಸ್‌ನಲ್ಲಿ ಭಾರತ ತಂಡ ಗೆಲುವಿಗಾಗಿ ಚಡಪಡಿಸುತ್ತಿತ್ತು. ಆಗ ಇದ್ದಕ್ಕಿದ್ದಂತೆ, “ಗಂಭೀರ್‌-ಸಚಿನ್‌-ಸೆಹವಾಗ್‌ ಅವರನ್ನು ಒಟ್ಟಿಗೇ ಆಡಿಸಲು ಸಾಧ್ಯವಿಲ್ಲ. 2015ರ ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವುದರಿಂದ ಹೀಗೆ ಮಾಡಬೇಕಾಗುತ್ತದೆ’ ಎಂದು ನಾಯಕ ಧೋನಿ ತೀರ್ಮಾನ ತೆಗೆದುಕೊಂಡಿದ್ದರು. ಇದನ್ನು ಕೇಳಿ ನನಗೆ ಆಘಾತವಾಯಿತು. 2015ರ ವಿಶ್ವಕಪ್‌ಗೆ 2012ರಲ್ಲೇ ತಂಡ ಆಯ್ಕೆ ಮಾಡುತ್ತಾರೆ ಎಂಬ ಬಗ್ಗೆ ಬೇರೆಲ್ಲೂ ನಾನು ಕೇಳಿರಲಿಲ್ಲ…’ ಎಂದು ಗಂಭೀರ್‌ ಹೇಳಿದ್ದಾರೆ.

ನಾಯಕನ ಬದ್ಧತೆ ಎಲ್ಲಿತ್ತು?
“ಆರಂಭದಲ್ಲಿ ಮೂವರನ್ನು ಒಮ್ಮೆಗೇ ಆಡಿಸಲು ಸಾಧ್ಯವಿಲ್ಲವೆಂದಿದ್ದ ಧೋನಿ, ಗೆಲ್ಲಲೇಬೇಕಾದ ಅನಿವಾರ್ಯತೆ ಬಂದಾಗ ಮೂವರನ್ನೂ ಆಡಿಸುತ್ತೇನೆಂದು ಘೋಷಿಸಿದರು. ಇದು ನನಗೆ ಆಶ್ಚರ್ಯ ತಂದಿತ್ತು. ತಾನು ತೆಗೆದುಕೊಂಡ ನಿರ್ಧಾರಗಳಿಗೆ ನಾಯಕರಾದವರು ಬದ್ಧರಾಗಿರಬೇಕು. 

ಪದೇ ಪದೇ ಅದನ್ನು ಬದಲಾಯಿಸುತ್ತಿರಬಾರದು. ದಿಢೀರನೆ ಧೋನಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆಂದರೆ, ಒಂದೋ ಅವರು ಮೊದಲು ಮಾಡಿದ ನಿರ್ಣಯ ತಪ್ಪಿರಬೇಕು. ಇಲ್ಲವೇ ಅನಂತರ ಕೈಗೊಂಡ ನಿರ್ಣಯ ತಪ್ಪಿರಬೇಕು’ ಎಂದು ಗಂಭೀರ್‌ ವ್ಯಂಗ್ಯವಾಡಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ಅತ್ಯುತ್ತಮ ನಾಯಕನನ್ನು ಹೆಸರಿಸಿದ ಗೌತಮ್‌ ಗಂಭೀರ್‌, ಈ ಹೆಗ್ಗಳಿಕೆಯನ್ನು ಅನಿಲ್‌ ಕುಂಬ್ಳೆ ಅವರಿಗೆ ನೀಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next