ನವದೆಹಲಿ: ಭಾರತದ ಖ್ಯಾತ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಪಾನ್ ಮಸಾಲ ಕಂಪನಿಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕೆಲ ಭಾರತೀಯ ಕ್ರಿಕೆಟಿಗರ ವಿರುದ್ಧ ಹಿಗ್ಗಾಮುಗ್ಗಾ ಕಿಡಿಕಾರಿದ್ದಾರೆ. ಆದರೆ ಅವರು ಯಾವ ಕ್ರಿಕೆಟಿಗರ ಹೆಸರನ್ನೂ ಉಲ್ಲೇಖೀಸಿಲ್ಲ.
ಪಾನ್ ಮಸಾಲ ಕಂಪನಿಯೊಂದರ ಬೆಳ್ಳಿ ಪದರ ಲೇಪಿತ ಏಲಕ್ಕಿ ಉತ್ಪನ್ನವೊಂದಕ್ಕೆ ಸುನೀಲ್ ಗಾವಸ್ಕರ್, ಕಪಿಲ್ ದೇವ್, ವೀರೇಂದ್ರ ಸೆಹ್ವಾಗ್ ಜಾಹೀರಾತು ನೀಡಿದ್ದಾರೆ. ಇದು ಬಾಯಿಯನ್ನು ತಾಜಾ ಆಗಿಡುವ ಒಂದು ಉತ್ಪನ್ನ. ಈ ಜಾಹೀರಾತಿನ ಮೂಲಕ ಪರೋಕ್ಷವಾಗಿ ಪಾನ್ ಮಸಾಲ ಕಂಪನಿಯನ್ನೇ ಪ್ರೋತ್ಸಾಹಿಸಿರುವುದು ಗಂಭೀರ್ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.
“ಕ್ರಿಕೆಟಿಗನೊಬ್ಬ ಪಾನ್ ಮಸಾಲ ಜಾಹೀರಾತಿನಲ್ಲಿ ಪಾಲ್ಗೊಂಡಿರುವುದನ್ನು ನಾನೆಂದೂ ನೋಡಿರಲಿಲ್ಲ. ಇದು ಅತ್ಯಂತ ನಾಚಿಕೆಗೇಡಿನ, ದುರದೃಷ್ಟಕರ ಸಂಗತಿ. ಅದಕ್ಕೆ ನಾನು ಹೇಳುವುದು ನಿಮ್ಮ ಮಾದರಿ ವ್ಯಕ್ತಿಯನ್ನು ಸರಿಯಾಗಿ ಆಯ್ದುಕೊಳ್ಳಿ ಎಂದು. ನೀವು ಯಾವ ಉದಾಹರಣೆ ಹಾಕಿಕೊಡುತ್ತಿದ್ದೀರಿ ಎಂಬ ಅರಿವಿದೆಯಾ ನಿಮಗೆ?’ ಎಂದು ಗಂಭೀರ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ದಿಗ್ಗಜರ ವಿದಾಯದ ಬಳಿಕ…; ಭಾರತದ ಭವಿಷ್ಯದ ಟೆಸ್ಟ್ ತಂಡ ಹೀಗೆ ಇರುತ್ತದೆ..
“ಒಬ್ಬ ವ್ಯಕ್ತಿಯನ್ನು ಅವನ ಹೆಸರಿನಿಂದಲ್ಲ, ಅವರ ಕೆಲಸದಿಂದ ಗುರ್ತಿಸುತ್ತಾರೆ. ನಿಮ್ಮನ್ನು ಕೋಟ್ಯಂತರ ಮಕ್ಕಳು ನೋಡುತ್ತಿದ್ದಾರೆ. ಪಾನ್ ಮಸಾಲ ಜಾಹೀರಾತಿನಿಂದ ನೀವು ಗಳಿಸುವ ಹಣ ಮುಖ್ಯವಲ್ಲ. ಹಣ ಮಾಡುವುದಕ್ಕೆ ಬೇಕಾದಷ್ಟು ಇತರೆ ದಾರಿಗಳೂ ಇವೆ. ಹೀಗೆಲ್ಲ ಮಾಡುವುದಕ್ಕಿಂತ ದೊಡ್ಡ ಮೊತ್ತವನ್ನು ಬಿಟ್ಟುಕೊಡುವ ಧೈರ್ಯವಿರಬೇಕು. 2018ರಲ್ಲಿ ನಾನು ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ತೊರೆದಾಗ ಪಾನ್ ಮಸಾಲ ಕಂಪನಿಯ ಜಾಹೀರಾತಿನಲ್ಲಿ ಪಾಲ್ಗೊಳ್ಳಲು 3 ಕೋಟಿ ರೂ. ಆಫರ್ ಬಂದಿತ್ತು. ಆಗದನ್ನು ತಿರಸ್ಕರಿಸಿದ್ದೆ. ಸಚಿನ್ ತೆಂಡುಲ್ಕರ್‌ಗೆ 20, 30 ಕೋಟಿ ರೂ. ಆಮಿಷಗಳು ಬಂದಿದ್ದವು. ಅವರೂ ಅದನ್ನು ತಿರಸ್ಕರಿಸಿದ್ದರು. ಅದಕ್ಕೆ ಸಚಿನ್ ಮಾದರಿ ವ್ಯಕ್ತಿ’ ಎಂದು ಗಂಭೀರ್ ಹೇಳಿದ್ದಾರೆ.
ಆನ್ ಲೈನ್ ರಮ್ಮಿ ಆಟ, ಬೆಟ್ಟಿಂಗ್, ಪಾನ್ ಮಸಾಲದಂತಹ ಜಾಹೀರಾತಿನಲ್ಲಿ ಸಿನಿಮಾ ನಟರು, ಕ್ರಿಕೆಟಿಗರು ಕಾಣಿಸಿಕೊಳ್ಳುವುದರ ವಿರುದ್ಧ ಜನರೂ ಬೇಸರೊಂಡಿದ್ದಾರೆ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.