ಮುಂಬೈ: ಮಾಜಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ, ಎರಡು ಬಾರಿಯ ಐಪಿಎಲ್ ಚಾಂಪಿಯನ್ ಗೌತಮ್ ಗಂಭೀರ್ ಅವರು ಈ ಬಾರಿಯ ನೂತನ ಐಪಿಎಲ್ ತಂಡ ಲಕ್ನೋ ಫ್ರಾಂಚೈಸಿಗೆ ಮೆಂಟರ್ ಆಗಿ ಸೇರ್ಪಡೆಯಾಗಿದ್ದಾರೆ.
ಲಕ್ನೋ ತಂಡದ ಮಾಲಕ ಸಂಜೀವ್ ಗೋಯೆಂಕಾ ಅವರು ಸ್ವತಃ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ ಎಂದು ಕ್ರೀಡಾ ವೆಬ್ ಸೈಟ್ ಕ್ರಿಕ್ ಬಜ್ ವರದಿ ಮಾಡಿದೆ.
ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಐಪಿಎಲ್ ಆಡಿದ್ದ ಗೌತಮ್ ಗಂಭೀರ್ ಇದೀಗ ಲಕ್ನೋ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಶುಕ್ರವಾರವಷ್ಟೇ ಲಕ್ನೋ ಫ್ರಾಂಚೈಸಿಯು ಆ್ಯಂಡಿ ಫ್ಲವರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿತ್ತು.
ಇದನ್ನೂ ಓದಿ:ರೋಹಿತ್ ಶರ್ಮಾ ಗಾಯಾಳು: ಟೆಸ್ಟ್ ಉಪನಾಯಕ ಸ್ಥಾನಕ್ಕೆ ಕೆ.ಎಲ್.ರಾಹುಲ್ ನೇಮಕ
ಗಂಭೀರ್ ಅವರೊಂದಿಗೆ ಕೆಕೆಆರ್ ತಂಡದಲ್ಲಿ ಆಡಿದ್ದ ವಿಜಯ್ ದಹಿಯಾ ಕೂಡಾ ಲಕ್ನೋ ಫ್ರಾಂಚೈಸಿ ಸೇರುವ ಸಾಧ್ಯತೆಯಿದೆ. ಸದ್ಯ ಉತ್ತರ ಪ್ರದೇಶ ತಂಡದ ಕೋಚ್ ಆಗಿರುವ ದಹಿಯಾ ಅವರು ಸಹಾಯಕ ತರಬೇತುದಾರರಾಗಿ ಸೇರಲಿದ್ದಾರೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ.
ತನ್ನ ನಾಯಕತ್ವದಲ್ಲಿ ಗೌತಮ್ ಗಂಭೀರ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ 10 ಸೀಸನ್ ಆಡಿದ್ದ ಗಂಭೀರ್ ಒಟ್ಟು 154 ಪಂದ್ಯಗಳನ್ನಾಡಿದ್ದಾರೆ.