ಹೊಸದಿಲ್ಲಿ: ಏಳು ವರ್ಷಗಳ ಹಿಂದೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರ ಆಡಿದ್ದ ಗೌತಮ್ ಗಂಭೀರ್ ಈ ಐಪಿಎಲ್ ಹರಾಜಿನಲ್ಲಿ ಮರಳಿ ಮಾತೃತಂಡವನ್ನು ಸೇರಿಕೊಂಡಿದ್ದರು. ಈಗ ದಿಲ್ಲಿ ಫ್ರಾಂಚೈಸಿ ಅನುಭವಿ ಆಟಗಾರ ಗಂಭೀರ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಿದೆ.
ಕಳೆದ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಫ್ರಾಂಚೈಸಿ ಗೌತಮ್ ಗಂಬೀರ್ ಅವರನ್ನು ತಂಡದ ನಾಯಕನನ್ನಾಗಿ ನೇಮಿಸುವ ಯೋಜನೆಯೊಂದಿಗೆ 2.8 ಕೋ.ರೂ.ಗೆ ಖರೀದಿಸಿತ್ತು. ಈಗ ಗಂಭೀರ್ ನಾಯಕತ್ವವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
“ಕಳೆದ ಐಪಿಎಲ್‌ನಲ್ಲಿ ಗೌತಮ್ ಗಂಭೀರ್ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗಿ ಗುರುತಿಸಿಕೊಂಡಿದ್ದರು. ನಾಯಕನಾಗುವ ಅರ್ಹತೆ ಗಂಭೀರ್‌ಗೆ ಇದೆ. ಗಂಭೀರ್ ಮತ್ತು ರಿಕಿ ಪಾಂಟಿಂಗ್ ಇಬ್ಬರೂ ಪರಸ್ಪರ ಮಾತನಾಡಿಕೊಂಡಿದ್ದಾರೆ. ಇಬ್ಬರ ಆಶಯವೂ ಒಂದೇ ಎಂಬುದನ್ನು ತಿಳಿಸಲು ಹರ್ಷಿಸುತ್ತಿದ್ದೇವೆ’ ಎಂದು ದಿಲ್ಲಿ ಫ್ರಾಂಚೈಸಿ ಮುಖ್ಯಸ್ಥ ಹೇಮಂತ್ ದುವಾ ಹೇಳಿದ್ದಾರೆ.
ಗಂಭೀರ್ ಕಳೆದ ವರ್ಷದ ತನಕ ಕೋಲ್ಕತಾ ನೈಟ್‌ರೈಡರ್ ತಂಡದ ನಾಯಕನಾಗಿ ಕರ್ತವ್ಯ ನಿಭಾಯಿಸಿದ್ದರು. “ಅವರ ನಾಯಕತ್ವ ಹಾಗೂ ಬ್ಯಾಟಿಂಗ್ ಸಾಧನೆಗಳನ್ನು ಪರಿಗಣಿಸಿಯೇ ಡೆಲ್ಲಿ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಅವರು ಕೊಂಚ ಸಿಡುಕಿನ ಸ್ವಭಾವದವರಾಗಿದ್ದರೂ ಅವರಿಂದ ತಂಡಕ್ಕೆ ಬಹಳಷ್ಟು ಉಪಯೋಗವಿದೆ’ ಎಂದು ದುವಾ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್, “ಡೇರ್ ಡೆವಿಲ್ಸ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿರುವುದಕ್ಕೆ ಖುಷಿಯಾಗಿದೆ. ಏಳು ವರ್ಷಗಳ ನಡುವೆ ನಾನು ಮರಳಿ ಡೆಲ್ಲಿ ತಂಡವನ್ನು ಸೇರಿಕೊಳ್ಳಲು ಬಯಸಿದ್ದೆ. ಆ ಆಸೆಯೀಗ ನೆರವೇರಿದೆ. ಜವಾಬ್ದಾರಿಯನ್ನು ಸ್ಫೂರ್ತಿದಾಯಕವಾಗಿ ನಿಭಾಯಿಸುತ್ತೇನೆ’ ಎಂದಿದ್ದಾರೆ.