ಮುಂಬೈ: ಟೀಂ ಇಂಡಿಯಾದ ಹೊಸ ಕೋಚ್ ನೇಮಕ ಪ್ರಕ್ರಿಯೆ ಆರಂಭವಾಗಿದೆ. ರಾಹುಲ್ ದ್ರಾವಿಡ್ ಅವರ ಅಧಿಕಾರವಧಿ ಈ ಟಿ20 ವಿಶ್ವಕಪ್ ಗೆ ಮುಗಿಯುವ ಕಾರಣದಿಂದ ಹೊಸ ಕೋಚ್ ಆಯ್ಕೆ ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಟೀಂ ಇಂಡಿಯಾದ ಮುಂದಿನ ಕೋಚ್ ಆಗಲಿದ್ದಾರೆ. ಇಂದು ಮುಂಬೈನಲ್ಲಿ ಈ ಬಗ್ಗೆ ಸಂದರ್ಶನ ನಡೆದಿದ್ದು, ಗಂಭೀರ್ ಆಯ್ಕೆ ಬಗ್ಗೆ ಇನ್ನಷ್ಟೇ ಅಧಿಕೃತ ಆದೇಶ ಹೊರಬೀಳಲಿದೆ.
ಆದರೆ ಗಂಭೀರ್ ಅವರು ಕೋಚ್ ಹುದ್ದೆ ಒಪ್ಪಿಕೊಳ್ಳಲು ಬಿಸಿಸಿಐ ಮುಂದೆ ಹಲವು ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವುಗಳನ್ನು ಒಪ್ಪಿಕೊಂಡರೆ ಮಾತ್ರ ತಾನು ಕೋಚ್ ಹುದ್ದೆ ಒಪ್ಪಿಕೊಳ್ಳಲು ಸಿದ್ದ ಎಂದಿದ್ದಾರೆ ಎಂದು ವರದಿಯಾಗಿದೆ.
ಗೌತಮ್ ಗಂಭೀರ್ ಅವರು ಸೀಮಿತ ಮಾದರಿ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ಗೆ ಪ್ರತ್ಯೇಕ ತಂಡಗಳನ್ನು ಬಯಸಿದ್ದಾರೆ ಎನ್ನಲಾಗಿದೆ. ಎರಡು ಪ್ರತ್ಯೇಕ ತಂಡಗಳ ಬೇಡಿಕೆಗೆ ಬಿಸಿಸಿಐ ಒಪ್ಪಿದೆ ಎಂದು ಮೂಲಗಳು ತಿಳಿಸಿದೆ.
ಭಾರತದ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಮೂಲ ಒಪ್ಪಂದವು ನವೆಂಬರ್ ನಲ್ಲಿ 2021 ರ ವಿಶ್ವಕಪ್ ಗೆ ಆರಂಭವಾಗಿ 2023 ರ ಏಕದಿನ ವಿಶ್ವಕಪ್ ನೊಂದಿಗೆ ಕೊನೆಗೊಂಡಿತು. ಬಳಿಕ ಅವರು ಒಪ್ಪಂದವನ್ನು ಈ ವರ್ಷದ ಟಿ 20 ವಿಶ್ವಕಪ್ ವರೆಗೆ ವಿಸ್ತರಿಸಲಾಯಿತು.
ಕೋಚ್ ಆಯ್ಕೆಯ ಬಗ್ಗೆ ಈ ಹಿಂದೆ ಮಾತನಾಡಿದ್ದ ಗೌತಮ್ ಗಂಭೀರ್, “ನಾನು ಭಾರತೀಯ ತಂಡಕ್ಕೆ ಕೋಚ್ ಮಾಡಲು ಇಷ್ಟಪಡುತ್ತೇನೆ. ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವವಿಲ್ಲ. ನೀವು 140 ಕೋಟಿ ಭಾರತೀಯರನ್ನು ಮತ್ತು ಜಗತ್ತಿನಾದ್ಯಂತ ಇರುವವರನ್ನು ಪ್ರತಿನಿಧಿಸುತ್ತಿದ್ದೀರಿ” ಎಂದು ಹೇಳಿದ್ದರು.