ಮುಂಬೈ: ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಇತ್ತೀಚಿನ ದಿನಗಳಲ್ಲಿ ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ನೇರ ಹೇಳಿಕೆಗಳನ್ನು ನೀಡುವ ಗೌತಮ್ ಅದರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಾರೆ. 2011ರ ವಿಶ್ವಕಪ್ ಫೈನಲ್ ಪಂದ್ಯದ ಹೀರೋ ಆಗಿರುವ ಗೌತಮ್ ಗಂಭೀರ್ ಆ ಪಂದ್ಯದಲ್ಲಿ ತನಗೆ ಸಿಗಬೇಕಾದ ಗೌರವ ಸಿಗಲಿಲ್ಲ ಎನ್ನುವ ನೋವನ್ನು ಹಲವು ಬಾರಿ ತೋಡಿಕೊಂಡಿದ್ದಾರೆ. ಇದೀಗ ಟೀಂ ಇಂಡಿಯಾ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಗೌತಮ್ ಗಂಭೀರ್ ಅವರ ಬಗ್ಗೆ ಮಾತನಾಡಿದ್ದಾರೆ.
ಗಂಭೀರ್ ಅವರನ್ನು ಕೆಲವೊಮ್ಮೆ ಅಭಿಮಾನಿಗಳು ಮತ್ತು ಪರಿಣಿತರು ತಪ್ಪಾಗಿ ಗ್ರಹಿಸುತ್ತಾರೆ. ಆದರೆ ಅವರು ನಿಜವಾಗಿಯೂ ಅತ್ಯಂತ ನಿಸ್ವಾರ್ಥ ಕ್ರಿಕೆಟಿಗರಲ್ಲಿ ಒಬ್ಬರು ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಗೌತಮ್ ಗಂಭೀರ್ ಅವರು ಭಾರತದಲ್ಲಿ ಅತ್ಯಂತ ತಪ್ಪಾಗಿ ಅರ್ಥೈಸಿಕೊಂಡ ಕ್ರಿಕೆಟಿಗ ಎಂದು ಅಶ್ವಿನ್ ಹೇಳಿದ್ದಾರೆ.
“ಗೌತಮ್ ಗಂಭೀರ್ ಭಾರತದಲ್ಲಿ ಅತ್ಯಂತ ತಪ್ಪಾಗಿ ಅರ್ಥೈಸಲ್ಪಟ್ಟ ಕ್ರಿಕೆಟಿಗರಾಗಿದ್ದಾರೆ. ಮೈದಾನದಲ್ಲಿ ಹೋರಾಟ ಮಾಡುವ ವಿಷಯದಲ್ಲಿ ಶ್ರೇಷ್ಠ ಟೀಮ್ ಮ್ಯಾನ್, ಅವರೊಬ್ಬ ಶ್ರೇಷ್ಠ ವ್ಯಕ್ತಿ. ಅವರು ನಿಮ್ಮ ಮುಖ ತಾಗುವಂತೆ ಮಾತನಾಡಬಹುದು. ಫೈನಲ್ ಆಟ ಮಾತ್ರವಲ್ಲ, ಫೈನಲ್ ಗೆ ಬರಲು ಮೊದಲು ಅವರ ಹಲವಾರು ಆಟಗಳು ಕಾರಣವಾಗಿದ್ದವು, ಅಲ್ಲಿ ಗೌತಮ್ ಅಸಾಧಾರಣ ಹೀರೋ ಆಗಿದ್ದಾರೆ. ಅವರು ಒತ್ತಡವನ್ನು ನಮಗೆ ಬರಲು ಬಿಡಲಿಲ್ಲ. ನಿಸ್ವಾರ್ಥ ಆಟಗಾರ ಅವರು. ಅವರು ಅಂದು (ಫೈನಲ್ ನಲ್ಲಿ) 120-130 ರನ್ ಗಳಿಸಿ ನಾಟ್-ಔಟ್ ಆಗಿರಬಹುದಿತ್ತು. ಆದರೆ ಅವರು ಆಟವನ್ನು ಆದಷ್ಟು ಬೇಗ ಮುಗಿಸಲು ಬಯಸಿದ್ದರು. ನಾನು ಯಾವಾಗಲೂ ಮನುಷ್ಯನ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇನೆ. ಜನರು ಅವನಿಗೆ ಅರ್ಹತೆಗಿಂತ ಕಡಿಮೆ ಕ್ರೆಡಿಟ್ ನೀಡುತ್ತಾರೆ” ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.