Advertisement

ಗೌರಿ ಹತ್ಯೆ ಪ್ರಕರಣ: ಎಸ್‌ಐಟಿಗೆ ಭರಪೂರ ಮಾಹಿತಿ

10:38 AM Oct 16, 2017 | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೈದ ಶಂಕಿತರ ರೇಖಾಚಿತ್ರವನ್ನು ವಿಶೇಷ ತನಿಖಾ ತಂಡ ಬಿಡುಗಡೆ ಮಾಡಿದ ಒಂದೇ ದಿನದಲ್ಲಿ ಸುಮಾರು 50ಕ್ಕೂ ಹೆಚ್ಚು ದೂರವಾಣಿ ಕರೆ ಹಾಗೂ ವ್ಯಾಟ್ಸ್‌ ಆ್ಯಪ್‌ ಸಂದೇಶಗಳು ಬಂದಿವೆ. ಈ ಮೂಲಕ ಪ್ರಕರ
ಣದ ತನಿಖೆ ಮತ್ತಷ್ಟು ಚುರುಕು ಪಡೆದುಕೊಂಡಿದೆ. ಕಳೆದ 40 ದಿನಗಳಿಂದ ಗೌರಿ ಹಂತಕರ ಪತ್ತೆಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಶಂಕಿತರ 3 ರೇಖಾಚಿತ್ರಗಳನ್ನು ಶನಿವಾರ ಬಿಡುಗಡೆಗೊಳಿಸಿದ ಬೆನ್ನಲ್ಲೇ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳು, ಕೇರಳ ಮತ್ತಿತರ ನೆರೆ ರಾಜ್ಯಗಳಿಂದ ಹಲವರು ಕರೆ ಮಾಡಿ, ಹಂತಕರನ್ನು ತಾವು ನೋಡಿರುವುದಾಗಿ ತಿಳಿಸಿದ್ದಾರೆ.

Advertisement

ಪ್ರಾಥಮಿಕ ತನಿಖೆ ವೇಳೆ ಮಾಹಿತಿ ನೀಡಿದ್ದ  ರ್ವಜನಿಕರಿಗಿಂತ, ಇದೀಗ ಹೆಚ್ಚು ಮಂದಿ ಮಾಹಿತಿ ನೀಡಲು ಮುಂದೆ ಬಂದಿದ್ದಾರೆ. ಬಹುತೇಕರು ಒಬ್ಬರ ಹಾಗೆಯೇ ಹೋಲುವ ರೇಖಾ ಚಿತ್ರದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡುತ್ತಿದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಎಸ್‌ಐಟಿ ತನಿಖಾ ಧಿಕಾರಿ “ಉದಯವಾಣಿ’ಗೆ ತಿಳಿಸಿದರು.

ಬೆಂಗಳೂರಿಗರಿಂದಲೂ ಮಾಹಿತಿ!: ಅಚ್ಚರಿಯ  ಸಂಗತಿಯೆಂದರೆ ಎಸ್‌ಐಟಿಗೆ ಇದುವರೆಗೂ ಬಂದಿರುವ ಕರೆಗಳು ಹಾಗೂ ವಾಟ್ಸ್‌ಆ್ಯಪ್‌ ಸಂದೇಶಗಳಲ್ಲಿ ಬೆಂಗಳೂರಿನಿಂದಲೂ ಕೆಲವರು ಮಾಹಿತಿ ನೀಡಿದ್ದಾರೆ. ಕೇವಲ ರೇಖಾಚಿತ್ರ ಹೋಲುವ ವ್ಯಕ್ತಿಯನ್ನು ನೋಡಿದ್ದೇವೆ, ಬೈಕ್‌ನಲ್ಲಿ ತೆರಳುತ್ತಿದ್ದ ಎಂದು ತಿಳಿಸಿದ್ದಾರೆ. ತನಿಖಾ ದೃಷ್ಟಿಯಿಂದ ಈ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲವೆಂದು ಅಧಿಕಾರಿ ತಿಳಿಸಿದರು. 

ಕೇರಳದಲ್ಲಿದ್ದಾನೆಯೇ ಹಂತಕ?: ರೇಖಾಚಿತ್ರ ಬಿಡುಗಡೆಗೊಳಿಸಿದ ಕೆಲವೇ ಗಂಟೆಗಳಲ್ಲಿ ಕೇರಳದಿಂದ ಕರೆಮಾಡಿರುವ ವ್ಯಕ್ತಿಯೊಬ್ಬ, ತಾವು ಬಿಡುಗಡೆ ಮಾಡಿರುವ ರೇಖಾಚಿತ್ರವನ್ನು ಹೋಲುವ ವ್ಯಕ್ತಿ ಇಲ್ಲಿಯೇ ವಾಸಿಸುತ್ತಿದ್ದಾನೆ. ಹಲವು ದಿನಗಳಿಂದ ಆತನನ್ನು ನೋಡಿದ್ದೇನೆ. ಆತನ ಚಲನವಲನಗಳು ಅನುಮಾನದಿಂದ ಕೂಡಿವೆ ಎಂದು ಮಾಹಿತಿ ನೀಡಿದ್ದಾರೆ. ಅದೇ ರೀತಿ ತಮಿಳುನಾಡಿನಿಂದಲೂ ಕೆಲವರು ಕರೆ ಮಾಡಿ ಮಾಹಿತಿ ನೀಡಿದ್ದಾರೆಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು. ಮಂಡ್ಯದಿಂದ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಗೌರಿ ಲಂಕೇಶ್‌ ಹತ್ಯೆ ನಡೆದ ಕೆಲವು ದಿನಗಳ ಬಳಿಕ ರೇಖಾಚಿತ್ರದಲ್ಲಿರುವ ವ್ಯಕ್ತಿ ಜಿಲ್ಲೆಯಲ್ಲಿ ಬೈಕ್‌ನಲ್ಲಿ
ಓಡಾಡುತ್ತಿದ್ದ. ನಾನು ಅವನನ್ನು ಹತ್ತಿರದಿಂದ ನೋಡಿದ್ದೇನೆ. ರೇಖಾ ಚಿತ್ರ ಬಿಡುಗಡೆಯಾದ ಬಳಿಕ ಆತನನ್ನು ನೋಡಿದ ನೆನಪಾಯಿತು. ಇತ್ತೀಚೆಗೆ ಆತನು ಕಾಣಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ವಾಟ್ಸ್‌ಆ್ಯಪ್‌ ಸಂದೇಶಗಳೇ ಹೆಚ್ಚು!: ಶಂಕಿತ ಆರೋಪಿಗಳ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ ಬಳಿಕ ಮಾಹಿತಿ ನೀಡಲು ಸಾರ್ವಜನಿಕರು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದೇ ಭಾವಿಸಬಹುದು. ಬಹುತೇಕ ಸಾರ್ವಜನಿಕರು ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಕಳುಹಿಸಿ ಕೊಡುತ್ತಿದ್ದಾರೆ. ಬೆಂಗಳೂರು, ಮೈಸೂರು, ಉತ್ತರ ಕರ್ನಾಟಕದ ಜಿಲ್ಲೆಗಳಿಂದಲೂ ಸಂದೇಶ ನೀಡುತ್ತಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಬೈಕ್‌ನಲ್ಲಿ ಹೋಗುವಾಗ, ಕೆಲವೊಮ್ಮೆ ರಸ್ತೆಯಲ್ಲೂ ಓಡಾಡುತ್ತಿದ್ದಾಗ ತಾವು ಹಂತಕರನ್ನು ನೋಡಿದ್ದೇವೆ ಎಂದು ಸಂದೇಶ ಕಳುಹಿಸಿಕೊಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಹೆದರಿಕೆ ಬೇಡ ಮಾಹಿತಿ ನೀಡಿ!: ದೂರವಾಣಿ ಕರೆಗಳನ್ನು ಮಾಡುವವರು ಮಾಹಿತಿಯನ್ನೇನೋ ನೀಡುತ್ತಾರೆ. ಆದರೆ, ಹೆಸರು, ವಿಳಾಸ ಹೇಳಲು ಹಿಂಜರಿಯುತ್ತಾರೆ. ಹೀಗಾಗಿ ನಾವು ಕೂಡ ಅವರ ವಿಳಾಸ ಕೇಳಲು ಹೋಗುತ್ತಿಲ್ಲ. ದೂರವಾಣಿ ಕರೆ ಬಂದ ಸಿಡಿಆರ್‌ ಪರಿಶೀಲಿಸಿ ಇಂತಹ ಸ್ಥಳಗಳಿಂದಲೇ ಕರೆ ಮಾಡಿದ್ದಾರೆ ಎಂದು ಗ್ರಹಿಸುತ್ತೇವೆ. ಹಾಗೆಯೇ ಅವರು ಹೇಳುವ ವಿಳಾಸ ನೋಟ್‌ ಮಾಡಿಟ್ಟು ಕೊಳ್ಳುತ್ತಿದ್ದೇವೆ. ಕೆಲವರು ತಾವೇ ತಮ್ಮ ವಿವರನ್ನು ಹೇಳುತ್ತಾರೆ. ಅವರ ವಿಳಾಸವನ್ನು ಬಹಿರಂಗಪಡಿಸುವುದಿಲ್ಲ ಎಂದು ಅಧಿಕಾರಿ ತಿಳಿಸಿದರು.

ರೇಖಾಚಿತ್ರಗಳನ್ನು ಬಿಡುಗಡೆಗೊಳಿಸಿದ ಬಳಿಕ ಸಾಕಷ್ಟು ಮಂದಿ ಮಾಹಿತಿ ನೀಡುತ್ತಿದ್ದಾರೆ. ಆದರೆ, ಎಲ್ಲ ಮಾಹಿತಿಯನ್ನು ನಂಬಲು ಆಗುವುದಿಲ್ಲ. ಹೀಗಾಗಿ, ನಮ್ಮ ತನಿಖಾ ಆಯಾಮದ ದೃಷ್ಟಿಯಲ್ಲಿ ಮಾಹಿತಿಗಳ ಸತ್ಯಾಸತ್ಯತೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಗೌರಿಲಂಕೇಶ್‌ ಹತ್ಯೆಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರತ್ಯಕ್ಷ ದರ್ಶಿಗಳನ್ನು ಮುಂದಿಟ್ಟುಕೊಂಡು ಶಂಕಿತರ ರೇಖಾಚಿತ್ರಗಳನ್ನು ರಚಿಸಿ ಬಿಡುಗಡೆ ಮಾಡಲಾಗಿತ್ತು. ರೇಖಾ ಚಿತ್ರಗಳನ್ನು ನೋಡಿದ ಹಲವರು ಶಂಕಿತರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈ ಮಾಹಿತಿಗಳನ್ನೂ ಸಹ ತನಿಖೆಗೆ ಪರಿಗಣಿಸಿ ಎಸ್‌ಐಟಿ ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮಕೈಗೊಳ್ಳಲಿದೆ.
●ರಾಮಲಿಂಗಾರೆಡ್ಡಿ, ಗೃಹ ಸಚಿವ

●ಮಂಜುನಾಥ್‌ ಲಘುಮೇನಹಳ್ಳಿ
 

Advertisement

Udayavani is now on Telegram. Click here to join our channel and stay updated with the latest news.

Next