ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮತ್ತೂಬ್ಬ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೋಹನ್ ನಾಯಕ್ ಎಂಬಾತನನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ 7ಮಂದಿಯ ಬಂಧನವಾದಂತಾಗಿದೆ.
ಈಗಾಗಲೇ ಬಂಧನವಾಗಿರುವ ನವೀನ್ ಕುಮಾರ್, ಪ್ರವೀಣ್ ಕುಮಾರ್, ಅಮೋಲ್ ಕಾಳೆ, ಅಮಿತ್ ದೇಗ್ವೇಕರ್, ಮನೋಹರ್ ಯಡವೆ ಹಾಗೂ ಶೂಟರ್ ಪರಶುರಾಮ್ ವಾಗೊ¾àರೆಗೆ ಬೆಂಗಳೂರಿನಲ್ಲಿ ನೆಲೆಸಲು ಸಹಾಯ ಮಾಡಿದ ಆರೋಪದ ಮೇಲೆ ಮೋಹನ್ ನಾಯಕ್‌ನನ್ನು ಬಂಧಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಗೌರಿ ಹತ್ಯೆಗೂ 3 ತಿಂಗಳ ಮೊದಲು 6 ಆರೋಪಿಗಳಿಗೆ ಕುಂಬಳಗೊಡು ಠಾಣಾ ವ್ಯಾಪ್ತಿಯಲ್ಲಿರುವ ಬಿಡದಿ ಬಳಿ ತನ್ನ ಸ್ವಂತ ಮನೆಯಲ್ಲಿಯೇ ಮೋಹನ್ ನಾಯಕ್ ಹಂತಕರಿಗೆ ಆಶ್ರಯ ನೀಡಿದ್ದ. ಇದೇ ಮನೆಯಲ್ಲಿ ಗೌರಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಹೇಗೆ ಹತ್ಯೆ ಮಾಡಬೇಕು, ನಂತರ ಯಾವ ಮಾರ್ಗದಲ್ಲಿ ಪರಾರಿಯಾಗಬೇಕು ಎಂದೆಲ್ಲಾ ಚರ್ಚೆ ನಡೆಸಲಾಗಿತ್ತು. ಅನಂತರ ಪೊಲೀಸರ ದಿಕ್ಕು ತಪ್ಪಿಸಲು ಸಿಗ್ಗೇಹಳ್ಳಿ ಗೇಟ್ ಬಳಿಯ ಸರ್ಕಾರಿ ಶಾಲೆಯ ಹಿಂಭಾಗದ ಪೊಲೀಸಪ್ಪನ ಬಿಲ್ಡಿಂಗ್ ಹಾಗೂ ಮಾಗಡಿ ಮುಖ್ಯ ರಸ್ತೆಯ ಸಾಯಿಲಕ್ಷಿ$¾à ಲೇಔಟ್‌ನಲ್ಲೂ ಮೋಹನ್ ನಾಯಕ್ ಕೊಠಡಿಗಳನ್ನು ಬಾಡಿಗೆಗೆ ಪಡೆದಿದ್ದ ಎಂದು ಮೂಲಗಳು ತಿಳಿಸಿವೆ.
ಶ್ರೀರಾಮಸೇನೆ ಹಾಗೂ ಗೋವಾ ಮೂಲದ ಹಿಂದೂ ಪರ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಮೋಹನ್, ಗೋವಾ,ಮಂಗಳೂರಿನಲ್ಲಿ ನಡೆಯುತ್ತಿದ್ದ ಸಂಘಟನೆಗಳ ಧರ್ಮ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದ. ಹಿಂದೂಸಂಘಟನೆಯ ನಿಷ್ಠಕಾರ್ಯಕರ್ತನಾಗಿದ್ದರಿಂದ ಪ್ರಕರಣದ ಮತ್ತೂಬ್ಬ ಆರೋಪಿ ಪ್ರವೀಣ್ ಕುಮಾರ್, ಧರ್ಮಸಭೆಯೊಂದರಲ್ಲಿ ಮೋಹನ್‌ಗೆ ಮಹಾರಾಷ್ಟ್ರದ ಅಮೋಲ್ ಕಾಳೆಯನ್ನು ಪರಿಚಯಿಸಿಕೊಟ್ಟಿದ್ದ. ಅನಂತರ ಇಬ್ಬರು ಆಗಾಗ್ಗೆ ಕರ್ನಾಟಕ, ಗೋವಾ, ಮಹಾರಾಷ್ಟ್ರಗಳಲ್ಲಿ ನಡೆಯುತ್ತಿದ್ದ ಧರ್ಮ ಸಭೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
ಅಮೋಲ್ ಕಾಳೆ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗೆ ಬಂದಾಗ ಮೋಹನ್ ನಾಯಕ್ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸುತ್ತಿದ್ದ. ಪರಶುರಾಮ್ ವಾಗೊ¾àರೆ ಹಾಗೂ ಇತರೆ ಆರೋಪಿಗಳು ಬೆಂಗಳೂರಿನಲ್ಲಿ ಸಂಚರಿಸಲು ಬೈಕ್ ಹಾಗೂ ಕಾರನ್ನೂ ಕೊಟ್ಟಿದ್ದ ಎಂಬ ಸ್ಫೋಟಕ ಮಾಹಿತಿಯೂ ಲಭ್ಯವಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.