Advertisement

ಗೌರಿ ಲಂಕೇಶ್‌ ಪತ್ರಿಕೆ ಕಚೇರಿ ಬಳಿ ನೀರವ ಮೌನ

11:43 AM Sep 07, 2017 | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಸಾರಥ್ಯದಲ್ಲಿ ಪ್ರಕಟವಾಗುತ್ತಿದ್ದ “ಗೌರಿ ಲಂಕೇಶ್‌’ ಪತ್ರಿಕೆಯ ಬಸವನಗುಡಿಯ ಗಾಂಧಿ ಬಜಾರ್‌ ಕಚೇರಿ ಬಳಿ ನೀರವ ಮೌನ ಆವರಿಸಿತ್ತು. ನಿತ್ಯ ಬೆಳಗ್ಗೆ ಕಚೇರಿಗೆ ಬರುತ್ತಿದ್ದ ಗೌರಿ ಲಂಕೇಶ್‌ ಬುಧವಾರ ಬರಲೇ ಇಲ್ಲ. ಅವರು ಇನ್ನೆಂದೂ ಬಾರದ ಲೋಕಕ್ಕೆ ಪಯಣಿಸಿದ್ದರು. ಕಚೇರಿಯ ಗೇಟಿನ ಮುಂದೆ ಗೌರಿ ಲಂಕೇಶ್‌ ಅವರ ಶ್ರದ್ಧಾಂಜಲಿ ಪೋಸ್ಟರ್‌ ಹಾಕಲಾಗಿತ್ತು. ಕಚೇರಿ ಆವರಣದಲ್ಲಿ ಸೂತಕದ ಛಾಯೆ ಆವರಿಸಿತ್ತು. 

Advertisement

ತಂದೆ ನಡೆಸುತ್ತಿದ್ದ ಪತ್ರಿಕೆಯನ್ನೇ ಮುಂದುವರಿಸಿಕೊಂಡು ಬಂದಿದ್ದ ಗೌರಿ, ತಮ್ಮ ಭಾವನೆ, ಸಂವೇದನೆ, ಚಲನಶೀಲತೆ, ಕ್ರಿಯಾಶೀಲತೆ ಮತ್ತು ಚಿಂತನೆಯ ಆಯಾಮಗಳನ್ನೆಲ್ಲವನ್ನೂ ಪತ್ರಿಕೆಯ ಮೂಲಕವೇ ಹೊರತರುತ್ತಿದ್ದರು. ಅಷ್ಟು ಮಾತ್ರವಲ್ಲದೇ, ಬಲಪಂಥೀಯ ವಾದವನ್ನು ಲಂಕೇಶ್‌ ಪತ್ರಿಕೆಯ ಮೂಲಕ ಕಟುವಾಗಿ ಟೀಕಿಸುತ್ತಿದ್ದರು.

ಹಾಗೆಯೇ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗುವ “ಗೈಡ್‌’ ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಕಚೇರಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅವರು, ತಂದೆ ಪಿ.ಲಂಕೇಶರ ನಿಧನದ ನಂತರ ಅದೇ ಜಾಗದಲ್ಲಿ ತಮ್ಮ ಪತ್ರಿಕೆಯನ್ನು ಮುಂದುವರಿಸಿದ್ದರು. ಅವರ ಮನೆಯ ನಂತರದ ವಾಸ ಸ್ಥಾನ ಕಚೇರಿಯೇ ಆಗಿತ್ತು.

ಪತ್ರಿಕೆಗೆ ಈ ವಾರಕ್ಕೆ ಬೇಕಾದ ಅಂಕಣ ಸೇರಿದಂತೆ ವಿವಿಧ ಮಾಹಿತಿ ಸಂಗ್ರಹಿಸುವ ನಿಮಿತ್ತ ಮಂಗಳವಾರವೂ ಕಚೇರಿಗೆ ಬಂದಿದ್ದರು. ಕಚೇರಿ ಕೆಲಸ ಮುಗಿಸಿ ರಾತ್ರಿ 7 ಗಂಟೆ ಸುಮಾರಿಗೆ ಮನೆಗೆ ಹೊರಟಿದ್ದರು ಎಂದು ಅಲ್ಲೇ ಇದ್ದ ಸಿಬ್ಬಂದಿ ಮಾಹಿತಿ ನೀಡಿದರು.

ಮನೆಗೆ ತಲುಪುತ್ತಿದ್ದಂತೆ ದುಷ್ಕರ್ಮಿಗಳು ಅವರನ್ನು ಹತ್ಯೆಗೈದ ವಿಷಯ ತಿಳಿದು, ಕಚೇರಿ ಸಿಬ್ಬಂದಿ ಅಲ್ಲಿಗೆ ಹೋಗಿದ್ದಾರೆ. ಮಂಗಳವಾರ ಸಂಜೆ ಕಚೇರಿಗೆ ಬಾಗಿಲು ಹಾಕಿದ್ದು, ಬುಧವಾರವೂ ತೆರೆದಿಲ್ಲ. ಕಚೇರಿಯ ಭದ್ರತೆಗಾಗಿ ಮಹಿಳಾ ಪೊಲೀಸ್‌ ಸಿಬ್ಬಂದಿ ಒಬ್ಬರನ್ನು ನೇಮಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next