Advertisement

ಗೌರಿ ಹತ್ಯೆ ತನಿಖೆ ಎಸ್‌ಐಟಿಗೆ: ಸಿಎಂ ಸಿದ್ದರಾಮಯ್ಯ ಆದೇಶ

06:05 AM Sep 07, 2017 | |

ಬೆಂಗಳೂರು: ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್‌ ಹಂತಕರ ಪತ್ತೆ ಹಚ್ಚಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು, ಐಜಿಪಿ ಬಿ.ಕೆ.ಸಿಂಗ್‌ ನೇತೃತ್ವದಲ್ಲಿ 19 ಅಧಿಕಾರಿಗಳ ತಂಡ ಹತ್ಯೆ ಪ್ರಕರಣದ ತನಿಖೆ ನಡೆಸಲಿದೆ.

Advertisement

ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ನಂತರ ಸಚಿವ ರಾಮಲಿಂಗಾ ರೆಡ್ಡಿ ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಿಐಡಿ ತನಿಖೆ ಬದಲು ದಕ್ಷ ಅಧಿಕಾರಿಗಳು ಇರುವ ಎಸ್‌ಐಟಿ ರಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಎಸ್‌ಐಟಿ ಇದೊಂದೇ ಪ್ರಕರಣದ ಬಗ್ಗೆ ವಿಶೇಷ ತನಿಖೆ ನಡೆಸಲಿದ್ದು, ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ತನಿಖಾ ತಂಡಕ್ಕೆ ಅಗತ್ಯವಿರುವಷ್ಟು ಅಧಿಕಾರಿಗಳನ್ನು ಪಡೆಯಲು ತನಿಖಾ ತಂಡದ ಮುಖ್ಯಸ್ಥರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.

ಸಿಸಿ ಟಿವಿಯಲ್ಲಿ  ಸೆರೆ: ಗೌರಿ ಲಂಕೇಶ್‌ ಅವರನ್ನು ಹತ್ಯೆ ಮಾಡಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಅವರ ಮನೆಯಲ್ಲಿ ನಾಲ್ಕು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಒಂದು ಕಾರು ನಿಲುಗಡೆ ಪ್ರದೇಶದಲ್ಲಿ, ಮತ್ತೂಂದು ಮನೆಯ ಬಾಗಿಲು ಬಳಿ, ಸೆಲ್ಲಾರ ಮತ್ತು ಮನೆಯ ಹಿಂದುಗಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಗೌರಿ ಮನೆಯ ಕಾಂಪೌಂಡ್‌ ಗೇಟ್‌ ತೆಗೆದು ಒಳಗೆ ಹೋದಾಗ ಹೆಲ್ಮೆಟ್‌ ಹಾಕಿಕೊಂಡಿರುವ ಒಬ್ಬ ವ್ಯಕ್ತಿ ಶೂಟ್‌ ಮಾಡಿದ್ದಾನೆ. ಅದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಂತಕ ಹತ್ತಿರದಿಂದ ಶೂಟ್‌ ಮಾಡಿದ್ದಾನೆ. ಗುಂಡು ತಗುಲಿದ ನಂತರ ಅವರು ನಾಲ್ಕೈದು ಹೆಜ್ಜೆ ಮುಂದೆ ಹೋಗಿ ಬಿದ್ದಿದ್ದಾರೆ. ನಾನೂ ಸಿಸಿ ಕ್ಯಾಮರಾ ಫ‌ೂಟೇಜ್‌ ನೋಡಿದ್ದೇನೆ. ಅದರಲ್ಲಿ ಹಂತಕನ ಸ್ಪಷ್ಟ ಚಿತ್ರಣ ಕಾಣುವುದಿಲ್ಲ. ಸರಿಯಾಗಿ ಪರಿಶೀಲಿಸಿ ನೋಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಎಡಪಂಥೀಯ ಚಳವಳಿಗೆ ನಷ್ಟ: ಲಂಕೇಶ್‌ ಕಾಲದಿಂದಲೂ ಗೌರಿ ನನಗೆ ಪರಿಚಿತಳಾಗಿದ್ದಳು. ಇತ್ತೀಚೆಗೆ ಲಂಕೇಶ್‌ ಪತ್ರಿಕೆ ವಿಶೇಷ ಸಂಚಿಕೆಗೆ ಜಾಹೀರಾತು ಕೇಳಲು ಭೇಟಿ ಮಾಡಿದ್ದರು. ಗೌರಿ ಲಂಕೇಶ್‌ ಅವರ ಹತ್ಯೆ ಎಡಪಂಥೀಯ ಚಳವಳಿಗಳಿಗೆ ಭರಿಸಲಾಗದ ನಷ್ಟ ಉಂಟು ಮಾಡಿದೆ. ಇದೊಂದು ವ್ಯವಸ್ಥಿತ ಸಂಚು. ಈ ಷಡ್ಯಂತ್ರವನ್ನು ಯಾರು ಮಾಡಿದ್ದಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಹೇಡಿಗಳು ಮಾತ್ರ ಈ ರೀತಿ ಕೆಲಸ ಮಾಡಲು ಸಾಧ್ಯ ಎಂದರು.

Advertisement

ಕಲುºರ್ಗಿ ಹತ್ಯೆಗೆ ಸಾಮ್ಯತೆ, ಸ್ಪಷ್ಟತೆಯಿಲ್ಲ : ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆಗೂ ಗೌರಿ ಲಂಕೇಶ್‌ ಹತ್ಯೆಗೂ ಸಾಮ್ಯತೆ ಇದೆ ಎಂದು ಈಗಲೇ ಹೇಳಲು ಆಗುವುದಿಲ್ಲ. ಮಹಾರಾಷ್ಟ್ರದ ವಿಚಾರವಾದಿಗಳಾದ ದಾಬೋಲ್ಕರ್‌ ಹಾಗೂ ಪನ್ಸಾರೆ ಅವರ ಹತ್ಯೆಗೂ ಕಲಬುರ್ಗಿ ಹತ್ಯೆಗೂ ಸಾಮ್ಯತೆ ಇದ್ದು, ಆ ಬಗ್ಗೆ ಮಹಾರಾಷ್ಟ್ರ ಪೊಲಿಸರು ಹಾಗೂ ಸಿಬಿಐ ತಂಡದೊಂದಿಗೆ ಸಿಐಡಿ ತನಿಖೆ ನಡೆಸುತ್ತಿದೆ. ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ಸಾಕಷ್ಟು ಬೆಳವಣಿಗೆಯಾಗಿದೆ. ಮಹಾರಾಷ್ಟ್ರ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಕಲಬುರ್ಗಿ ಹತ್ಯೆಯ ತನಿಖೆ ವಿಳಂಬವಾಗಿದೆ ಎನ್ನುವುದನ್ನು ಒಪ್ಪಿಕೊಂಡ ಮುಖ್ಯಮಂತ್ರಿಗಳು, ಆದಷ್ಟು ಶೀಘ್ರ ತನಿಖೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ: ಕಲಬುರ್ಗಿ ಹತ್ಯೆ ಹಾಗೂ ಗೌರಿ ಲಂಕೇಶ್‌ ಹತ್ಯೆಯಿಂದ ರಾಜ್ಯದಲ್ಲಿ  ನಡೆಯುತ್ತಿರುವ ಪ್ರತಿಭಟನೆಗಳಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಸಮರ್ಥಿಸಿಕೊಂಡರು.

ಪ್ರಗತಿಪರರಿಗೆ ಭದ್ರತೆ: ಗೌರಿ ಲಂಕೇಶ್‌ ಹತ್ಯೆಯಿಂದ ವಿಚಾರವಾದಿಗಳು ಹಾಗೂ ಪ್ರಗತಿಪರ ಚಿಂತಕರಿಗೆ ರಕ್ಷಣೆ ನೀಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸಾಮಾಜಿಕ ಜಾಲ ತಾಣಗಳಲ್ಲಿ ವಿಚಾರ ವಿನಿಮಯ ಮಾಡುವುದರ ಮೇಲೆಯೂ ನಿಗಾ ಇಡುವಂತೆ ಪೊಲಿಸರಿಗೆ ಸೂಚಿಸಿರುವುದಾಗಿ ಸಿಎಂ ತಿಳಿಸಿದರು.

ಸಿಬಿಐಗೆ ವಹಿಸಲು ನಾವು ಮುಕ್ತ
ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ವಿಶೇಷ ತಂಡ ರಚನೆ ಮಾಡಿದ್ದೇವೆ. ಆದಷ್ಟು ಶೀಘ್ರಗತಿಯಲ್ಲಿ ತನಿಖೆ ನಡೆಸಲಿವೆ. ಕಲಬುರ್ಗಿ ಹತ್ಯೆಯನ್ನು ಸಿಬಿಐಗೆ ವಹಿಸುವಂತೆ ಯಾರೂ ಕೇಳಿಕೊಂಡಿಲ್ಲ. ಗೌರಿ ಲಂಕೇಶ್‌ ಹತ್ಯೆಯನ್ನು ಸಿಬಿಐಗೆ ವಹಿಸಿಕೊಡಲು ರಾಜ್ಯ ಸರ್ಕಾರ ಮುಕ್ತವಾಗಿದೆ. ಅವರ ಕುಟುಂಬದವರು ಮನವಿ ಮಾಡಿಕೊಂಡರೆ ಸರ್ಕಾರ ಪರಿಗಣಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕಾಂಗ್ರೆಸ್‌ ವರ್ಸಸ್‌ ಬಿಜೆಪಿ
ನವದೆಹಲಿ:
ಕರ್ನಾಟಕದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಬುಧವಾರ ಮಾಡಿದ ಆರೋಪ ಬಿಜೆಪಿ ನಾಯಕರ ಜತೆಗೆ ವಾಗ್ವಾದಕ್ಕೆ ಕಾರಣವಾಗಿದೆ. ಇದರ ಜತೆಗೆ ಬೆಳವಣಿಗೆ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಪ್ರತ್ಯೇಕವಾಗಿ ದೂರವಾಣಿಯಲ್ಲಿ ಮಾತನಾಡಿ, ಖುದ್ದಾಗಿ ಮಾಹಿತಿ ಪಡೆದುಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮಾತನಾಡಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತಗಳಿಗೆ ವಿರುದ್ಧವಾಗಿ ಮಾತನಾಡಿದರೆ ಅವರ ಮೇಲೆ ಒತ್ತಡ ಹೇರಲಾಗುತ್ತದೆ, ದಾಳಿ ಮಾಡಲಾಗುತ್ತದೆ. ಮಾತ್ರವಲ್ಲದೆ ಥಳಿಸಿ ಹತ್ಯೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇಂಥ ಘಟನೆಯನ್ನು ಖಂಡಿಸಬೇಕು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಪ್ರಕರಣದ ಬಗ್ಗೆ ಮೌನವಾಗಿದ್ದಾರಲ್ಲ ಎಂದು ಪತ್ರಕರ್ತರು ಕೇಳಿದಾಗ “ಅವರ ಸಿದ್ಧಾಂತವೇ ಮಾತುಗಳನ್ನು ಮೌನವಾಗಿಸುವುದು. ಪ್ರಧಾನಿ ನರೇಂದ್ರ ಮೋದಿ ಒಬ್ಬ ಕೌಶಲವುಳ್ಳ ಹಿಂದುತ್ವ ರಾಜಕಾರಣಿ’ ಎಂದು ಟೀಕಿಸಿದ್ದಾರೆ ರಾಹುಲ್‌.

ಆರೋಪ ನಿರಾಧಾರ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮಾಡಿರುವ ಆರೋಪ ತಳ್ಳಿಹಾಕಿರುವ ಕೇಂದ್ರ ಸಚಿವ ನಿಥಿನ್‌ ಗಡ್ಕರಿ, “ಇದೊಂದು ನಿರಾಧಾರ ಆರೋಪ. ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಗೂ ಬಿಜೆಪಿಗೂ ಸಂಬಂಧವೇ ಇಲ್ಲ,’ ಎಂದಿದ್ದಾರೆ. ಅಲ್ಲದೆ “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಅಲ್ಲಿನ ಕಾಂಗ್ರೆಸ್‌ ಸರ್ಕಾರದ ಕೆಲಸವೇ ಹೊರತು ಕೇಂದ್ರ ಅದಕ್ಕೆ ಹೊಣೆಯಲ್ಲ,’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ ಕೇಂದ್ರ ಸಚಿವ ಅನಂತಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. “ಎಂ.ಎಂ.ಕಲಬುರ್ಗಿ ಅವರೂ ಸೇರಿದಂತೆ ಕಳೆದ ಎರಡೂವರೆ ವರ್ಷದಲ್ಲಿ 19 ರಾಜಕೀಯ ಪ್ರೇರಿತ ಹತ್ಯೆಗಳಿಗೆ ಕರ್ನಾಟಕ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫ‌ಲವಾಗಿರುವುದೇ ಇದಕ್ಕೆ ಕಾರಣ,’ ಎಂದು ಆರೋಪಿಸಿದ್ದಾರೆ.

ಸೋನಿಯಾ ಖಂಡನೆ: ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆ ಖಂಡನೀಯ. ಪತ್ರಕರ್ತರ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್‌ ಬೆಂಬಲ ನೀಡುತ್ತದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.ಈ ಪ್ರಕರಣ ದೇಶದಲ್ಲಿ ಅಸಹಿಷ್ಣುತೆ ಉಲ್ಬಣಿಸುವ ಸೂಚನೆ ನೀಡಿದೆ. ನಮ್ಮ ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಧರ್ಮಾಂಧತೆ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದಿರುವ ಅವರು, ಕರ್ನಾಟಕದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗೆ ಸೂಚನೆ ನೀಡಿದ್ದಾಗಿ ತಿಳಿಸಿದರು. ವಿಚಾರವಾದಿಗಳು, ಚಿಂತಕರು ಮತ್ತು ಪತ್ರಕರ್ತರ ನಿರಂತರ ಹತ್ಯೆಗಳು ಭಯದ ವಾತಾವರಣ ಸೃಷ್ಟಿಸಿದ್ದು, ಸೌದ್ಧಾಂತಿಕ ಭಿನ್ನತೆ ಹೊಂದಿರುವವರ ಪ್ರಾಣಕ್ಕೆ ಕುತ್ತು ಬಂದಿದೆ. ಇಂಥ ಬೆಳವಣಿಗೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ವರದಿ ನೀಡಲು ಕರ್ನಾಟಕಕ್ಕೆ ಸೂಚನೆ
ನವದೆಹಲಿ:
ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ ಹತ್ಯೆಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಕರ್ನಾಟಕ ಸರ್ಕಾರವನ್ನು ಕೇಳಿದೆ. ಹತ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಸಂಪೂರ್ಣ ವರದಿ ಪಡೆಯುವಂತೆ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ಅವರಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಕರ್ತೆಯ ಹತ್ಯೆ ನಡೆದ ಬಗೆ, ಹತ್ಯೆ ನಂತರದ ಬೆಳವಣಿಗೆಗಳು ಹಾಗೂ ಹಂತರಕ ಬಂಧನಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಕರ್ನಾಟಕ ಸರ್ಕಾರವನ್ನು ಕೇಂದ್ರ ಗೃಹ ಕಾರ್ಯದರ್ಶಿ ಕೋರಿದ್ದಾರೆ.

ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವಾತಾವರಣ ಇದ್ದಾಗ ಮಾತ್ರ ಸ್ವಾತಂತ್ರ್ಯ ಉಳಿಯುತ್ತದೆ. ಆದರೆ ಗೌರಿ ಲಂಕೇಶ್‌ ಹತ್ಯೆ ಮೂಲಕ ವ್ಯವಸ್ಥೆ ವಿರುದ್ಧ ಕೇಳಿಬಂದಿದ್ದ ಮತ್ತೂಂದು ಧ್ವನಿ ಮೌನವಾಗಿದೆ.
– ಪಿ.ಚಿದಂಬರಂ, ಕಾಂಗ್ರೆಸ್‌ ಹಿರಿಯ ಮುಖಂಡ

ಪ್ರಧಾನಿ ಬಗ್ಗೆ ಕಾಂಗ್ರೆಸ್‌ ಉಪಾಧ್ಯಕ್ಷರು ನೀಡಿರುವ ಹೇಳಿಕೆ “ಅನಿರೀಕ್ಷಿತ’. ಪಕ್ಷ ಯಾವುದೇ ಇರಲಿ, ದೇಶದ ಪ್ರಧಾನಿ ಆದವರಿಗೆ ಗೌರವ ನೀಡುವುದು ಹೇಗೆಂಬುದನ್ನು ರಾಹುಲ್‌ ಮೊದಲು ಕಲಿಯಲಿ.
– ನಿತಿನ್‌ ಗಡ್ಕರಿ, ಕೇಂದ್ರ ಸಚಿವ

ದೇಶದಲ್ಲಿ ಒಂದೇ ಧ್ವನಿ ಇರಬೇಕು, ಅದು ಅವರದ್ದೇ (ಬಿಜೆಪಿ) ಆಗಿರಬೇಕು. ಅವರ ವಿರುದ್ಧದ ಧ್ವನಿಗಳನ್ನು “ಮೌನ’ವಾಗಿಸುವುದೇ ಸಿದ್ಧಾಂತವಾಗಿರುವ ಕಾರಣ ಪ್ರಧಾನಿ ಮೌನವಾಗಿದ್ದಾರೆ.
– ರಾಹುಲ್‌ ಗಾಂಧಿ, ಕಾಗ್ರೆಸ್‌ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next