ಬೆಂಗಳೂರು: ಸಕಲ ಸರ್ಕಾರಿ ಗೌರವಗಳೊಂದಿಗೆ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಅವರ ಅಂತ್ಯಕ್ರಿಯೆ ಸಂಜೆ 4ಗಂಟೆಗೆ ಚಾಮರಾಜಪೇಟೆಯ ಲಿಂಗಾಯತ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಲಿಂಗಾಯತ ಸಂಪ್ರದಾಯದಂತೆ ಗೌರಿ ಲಂಕೇಶ್ ಅವರ ಅಂತಿಮ ವಿಧಿವಿಧಾನ ನೆರವೇರಲಿದೆ ಎಂಬ ಮಾಹಿತಿ ಸತ್ಯಕ್ಕೆ ದೂರವಾದದ್ದು. ಯಾಕೆಂದರೆ ಗೌರಿ ಲಂಕೇಶ್ ಜೀವನದುದ್ದಕ್ಕೂ ಧಾರ್ಮಿಕ ಆಚರಣೆ ಮೇಲೆ ನಂಬಿಕೆ ಇಟ್ಟಿರಲಿಲ್ಲ. ಹಾಗಾಗಿ ಕೊನೆ ಕ್ಷಣದಲ್ಲಿ ಗೌರಿ ಅವರ ನಂಬಿದ ತತ್ವಗಳಿಗೆ ಧಕ್ಕೆ ತರಲ್ಲ ಎಂದು ಸಹೋದರ ಇಂದ್ರಜಿತ್ ಲಂಕೇಶ್ ಸ್ಪಷ್ಟಪಡಿಸಿದ್ದಾರೆ.
ಗೌರಿ ಲಂಕೇಶ್ ಅಂತ್ಯಸಂಸ್ಕಾರದಲ್ಲಿ ಯಾವುದೇ ವಿಧಿ ವಿಧಾನ ಪಾಲಿಸುತ್ತಿಲ್ಲ. ಪಾರ್ಥಿವ ಶರೀರದ ಮೇಲೆ ಹೂಗಳನ್ನು ಇರಿಸಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಸಿಎಂ ಸೇರಿ ಹಲವು ಗಣ್ಯರಿಂದ ಅಂತಿಮ ನಮನ:
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಉಮಾಶ್ರೀ, ಆಂಜನೇಯ, ಡಿಕೆ ಶಿವಕುಮಾರ್, ಯುಟಿ ಖಾದರ್, ರಾಮಲಿಂಗಾ ರೆಡ್ಡಿ, ಸಂಸದ ವೀರಪ್ಪ ಮೊಯ್ಲಿ, ರಾಘವೇಂದ್ರ ರಾಜ್ ಕುಮಾರ್, ನಟ ಚೇತನ್, ಸಾರಾ ಗೋವಿಂದು, ನಟ, ನಿರ್ದೇಶಕ ಪ್ರಕಾಶ್ ರೈ ಸೇರಿದಂತೆ ಹಲವು ಗಣ್ಯರು ಗೌರಿ ಲಂಕೇಶ್ ಅಂತಿಮ ದರ್ಶನ ಪಡೆದು, ಗೌರಿ ಲಂಕೇಶ್ ಕುಟುಂಬಕ್ಕೆ ಸಾಂತ್ವನ ಹೇಳಿದರು.