Advertisement

ಗೌರಿ ಲಂಕೇಶ್‌ ಹತ್ಯೆ: ಜಿಲ್ಲಾದ್ಯಂತ ಪ್ರತಿಭಟನೆ 

12:14 PM Sep 07, 2017 | |

ಪತ್ರಕರ್ತೆ, ಚಿಂತಕಿ, ಶೋಷಿತರ ಪರ ಧ್ವನಿಯಾಗಿದ್ದ ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ಜಿಲ್ಲಾದ್ಯಂತ ಪ್ರತಿಭಟನೆಗಳು ನಡೆದವು. ಈ ವೇಳೆ ಹತ್ಯೆಗೈದಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದವು.
 
ಮೈಸೂರು: ಪತ್ರಕರ್ತೆ ಗೌರಿಲಂಕೇಶ್‌ ಹತ್ಯೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಹಂತಕರನ್ನು ಬಂಧಿಸುವ ಮೂಲಕ ರಾಜ್ಯದಲ್ಲಿ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಪತ್ರಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಬುಧವಾರ ನಗರದ ವಿವಿಧೆಡೆ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾ ಪತ್ರಕರ್ತರ ಸಂಘ: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪತ್ರಕರ್ತರು, ಸಾಂಕೇತಿಕ ಪ್ರತಿಭಟನೆ ನಡೆಸುವ ಮೂಲಕ ಗೌರಿ ಲಂಕೇಶ್‌ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು. ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕಪ್ಪು$ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿ ಮೌನ ಪ್ರತಿಭಟನೆ ನಡೆಸಿದರು.

 ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್‌, ಜಿಲ್ಲಾ ಪತ್ರಕರ್ತರ ಸಂಘ‌ದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಕಾರ್ಯದರ್ಶಿ ಕೆ.ಜೆ.ಲೋಕೇಶ್‌ ಬಾಬು, ಪತ್ರಕರ್ತರಾದ ಕೆ.ಶಿವಕುಮಾರ್‌, ಬಿ.ಎಸ್‌.ಪ್ರಭುರಾಜನ್‌, ಎಸ್‌.ಟಿ.ರವಿಕುಮಾರ್‌, ಬಿ.ರಾಘವೇಂದ್ರ, ಕೆ.ದೀಪಕ್‌, ಪಿ.ರಂಗಸ್ವಾಮಿ ಮತ್ತಿತರರಿದ್ದರು.

ವಿವಿಧ ಸಂಘಟನೆಗಳ ಆಕ್ರೋಶ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ನಗರದ ಗಾಂಧಿಚೌಕದ ಮುಂಭಾಗ ಜಮಾಯಿಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮೌನ ಪ್ರತಿಭಟನೆ ನಡೆಸುವ ಮೂಲಕ ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ರಾಜ್ಯದಲ್ಲಿ ಹತ್ಯಾ ಸರಣಿ ಮುಂದುವರಿಯುತ್ತಿದ್ದು, ವೈಚಾರಿಕ ಭಿನ್ನಾಭಿಪ್ರಾಯಗಳನ್ನು ವ್ಯಕ್ತಿಗಳ ಹತ್ಯೆಯ ಮೂಲಕ ಹತ್ತಿಕ್ಕುವ ಆತಂಕಕಾರಿ ಬೆಳವಣಿಗೆ ಆತಂಕ ಮೂಡಿಸಿದೆ. ಪ್ರಗತಿಪರ ಚಿಂತಕ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ನಡೆದು 2 ವರ್ಷ ಕಳೆದರೂ ಹಂತಕರನ್ನು ಇನ್ನೂ ಬಂಧಿಸಿಲ್ಲ. ಇದೀಗ ಮತ್ತೂಂದು ಹತ್ಯೆ ನಡೆದಿದೆ.

Advertisement

ಸರ್ಕಾರ ಈಗಲಾದರೂ ಎಚ್ಚೆತ್ತು ಪತ್ರಕರ್ತೆ ಗೌರಿ ಲಂಕೇಶ್‌ರ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆ ಮೂಲಕ ಪ್ರಕರಣದ ಸಮಗ್ರ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಸಾಹಿತಿ ಸಿ.ಪಿ.ಕೃಷ್ಣಕುಮಾರ್‌, ಬನ್ನೂರು ಎ.ರಾಜು, ಮೈಮ್‌ ರಮೇಶ್‌, ಕೆ. ಮುದ್ದುಕೃಷ್ಣ ಸೇರಿದಂತೆ ನೂರಾರು ಮಂದಿಯಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next