Advertisement

ಗೌರಿ ಲಂಕೇಶ್‌, ಕಲಬುರ್ಗಿ ಹತ್ಯೆ: ಇಬ್ಬರು ಆರೋಪಿಗಳಿಗೆ 6 ವರ್ಷ ಬಳಿಕ ಜಾಮೀನು

01:46 PM Jul 24, 2024 | Team Udayavani |

ಬೆಂಗಳೂರು: ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ವಾಸುದೇವ್‌ ಭಗವಾನ್‌ ಸೂರ್ಯವಂಶಿ ಮತ್ತು ಅಮಿತ್‌ ಬಡ್ಡಿ ಅವರಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

Advertisement

ಜಾಮೀನು ಕೋರಿ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರ ಆರೋಪಿಗಳ ವಾದ ಮಂಡಿಸಿದ ಹಿರಿಯ ವಕೀಲ ಎಂ. ಅರುಣ್‌ ಶ್ಯಾಮ್‌ ಅವರು, ಕಲಬುರ್ಗಿ ಕೊಲೆಗೆ ಬಳಸಲಾದ ವಾಹನ ಕಳವು ಮಾಡಲಾದ ಆರೋಪ ಮಾತ್ರ ಅರ್ಜಿದಾರರ ಮೇಲಿದೆ. ಈ ಸಂಬಂಧ ಆರೋಪಿಗಳು 6 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲೂ ಆರೋಪಿಗಳ ಪಾತ್ರದ ಬಗ್ಗೆ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಆರಂಭಿಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಈವರೆಗೂ ಆ ಕೆಲಸವಾಗಿಲ್ಲ. ಕಲಬುರ್ಗಿ ಅವರ ಪ್ರಕರಣದಲ್ಲಿ 138 ಸಾಕ್ಷ್ಯಗಳ ಪೈಕಿ ಕೇವಲ 10 ಸಾಕ್ಷ್ಯಗಳ ವಿಚಾರಣೆ ಮಾತ್ರ ಈಗ ಮುಗಿದಿದೆ. ಉಳಿದ ಸಾಕ್ಷಿಗಳ ವಿಚಾರಣೆ ಸದ್ಯಕ್ಕೆ ಮುಗಿಯುವ ಸಾಧ್ಯತೆ ಇಲ್ಲ. ಹೀಗಾಗಿ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ಪರ ವಕೀಲರು, ಇಬ್ಬರೂ ಆರೋಪಿಗಳ ವಿರುದ್ಧ ಗಂಭೀರ ಆರೋಪವಿದ್ದು, ಜಾಮೀನು ಮಂಜೂರು ಮಾಡಿದಲ್ಲಿ ಇಬ್ಬರ ವಿಚಾರಣೆಗೆ ಅಡ್ಡಿಯಾಗಲಿದೆ. ಮೇಲ್ನೋಟಕ್ಕೆ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳು ಇವೆ. ಇದೊಂದು ಅತ್ಯಂತ ಹೀನಾಯ ಕೃತ್ಯವಾಗಿದ್ದು, ಜಾಮೀನು ಮಂಜೂರು ಮಾಡಿದಲ್ಲಿ ವಿಚಾರಣೆಗೆ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next