Advertisement

ಗೌರಿ ಲಂಕೇಶ್‌ ಹೆಸರಲ್ಲಿ ಪತ್ರಿಕೋದ್ಯಮ ಪ್ರಶಸ್ತಿ ನೀಡಲು ಒತ್ತಾಯ

04:27 PM Sep 16, 2017 | |

ಶಿವಮೊಗ್ಗ: ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ಪ್ರಸ್‌ ಟ್ರಸ್ಟ್‌ ನೇತೃತ್ವದಲ್ಲಿ ಗೌರಿಲಂಕೇಶ್‌ ಹತ್ಯೆ ವಿರೋಧಿ ಒಕ್ಕೂಟದ ವತಿಯಿಂದ ನಗರದಲ್ಲಿ ಗುರುವಾರ ಪ್ರತಿರೋಧ ಸಮಾವೇಶ ಹಾಗೂ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. 

Advertisement

ಪ್ರತಿರೋಧ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಗೌರಿ ಲಂಕೇಶ್‌ ಅವರ ಹೆಸರಿನಲ್ಲಿ ಗೌರಿ ಲಂಕೇಶ್‌ ನಿರ್ಭೀತ ಪತ್ರಿಕೋದ್ಯಮ ಪ್ರಶಸ್ತಿ ನೀಡುವುದು ಸೇರಿದಂತೆ ಹಲವು ಒತ್ತಾಯಗಳ ನಿರ್ಣಯ ಕೈಗೊಂಡರು.

ಗೌರಿ ಲಂಕೇಶ್‌ ಅವರ ಹೆಸರಿನಲ್ಲಿ ಅವರ ವಿಚಾರಧಾರೆಯುಳ್ಳ ಪತ್ರಕರ್ತರಿಗೆ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರತಿ ವರ್ಷ ನೀಡಬೇಕು. ಜತೆಗೆ ಪ್ರತಿ ವರ್ಷ ರಾಷ್ಟ್ರೀಯ ಮಟ್ಟದಲ್ಲಿ ಗೌರಿ ಲಂಕೇಶ್‌ ನಿರ್ಭೀತ ಪ್ರತಿಕೋದ್ಯಮ ಪ್ರಶಸ್ತಿ ಕೊಡಮಾಡಬೇಕೆಂದು ಒಕ್ಕೂಟದ ಪರವಾಗಿ ಎನ್‌. ಮಂಜುನಾಥ್‌, ಎಂ.ಗುರುಮೂರ್ತಿ, ಕೆ.ಪಿ. ಶ್ರೀಪಾಲ್‌ ನಿರ್ಣಯ ಮಂಡಿಸಿದರು.

ದೇಶದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಶ್ರಮಿಸುತ್ತಿದ್ದ ಗೌರಿ ಲಂಕೇಶ್‌ ಅವರನ್ನು ಹತ್ಯೆ ಮಾಡಿರುವುದು ಇಡೀ ದೇಶದ ಪ್ರಜ್ಞಾವಂತ ಜನರನ್ನು ಬೆಚ್ಚಿ ಬೀಳಿಸಿದೆ. ಇದೊಂದು ಮನುಷ್ಯತ್ವ ವಿರೋಧಿ ಕೃತ್ಯವಾಗಿದೆ ಎಂದು ತಿಳಿಸಲಾಗಿದೆ.

ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ಮುಖಾಂತರ ತೀವ್ರಗೊಳಿಸಿ, ಹಂತಕರನ್ನು ಹಾಗೂ ಅವರ ಹಿಂದೆ ಇರುವ ದುಷ್ಟಶಕ್ತಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು. ಹತ್ಯೆಗೆ ಕಾರಣರಾದವರನ್ನು ಪತ್ತೆ ಹಚ್ಚಲು ಎಲ್ಲಾ ಕೋನಗಳಿಂದಲೂ ಪರಿಶೀಲಿಸಬೇಕು. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ವಿಚಾರವಾದಿಗಳ ಸರಣಿ ಕೊಲೆಗಳು ನಿರ್ದಿಷ್ಟ ಸಂಘಟಿತ ಗುಂಪಿನಿಂದ ನಡೆಯುತ್ತಿರುವ ಸಾಧ್ಯತೆ ಎದ್ದು ಕಾಣುತ್ತಿದೆ. ಹಾಗಾಗಿ ಆ ನಿಟ್ಟಿನಲ್ಲಿ ಪ್ರಯತ್ನವನ್ನು ಚುರುಕುಗೊಳಿಸಬೇಕು ಆಗ್ರಹಿಸಿಲಾಗಿದೆ.

Advertisement

ಗೌರಿ ಹತ್ಯೆಯನ್ನು ಸಂಭ್ರಮಿಸುವ ದುರಂತ ಸಾಮಾಜಿಕ ಜಾಲತಾಣಗಳಲ್ಲಿ ಮತೀಯ ವಾದಿಗಳಿಂದ ನಡೆಯುತ್ತಿದೆ. ಅನೇಕ ರಾಜಕಾರಣಿಗಳು ಹತ್ಯೆಯನ್ನು ಸಮರ್ಥಿಸುವ ಮಾತುಗಳನ್ನಾಡುತ್ತಿದ್ದಾರೆ. ಇದೇ ಶಕ್ತಿಗಳು ನಾಡಿನಲ್ಲಿ ವಿಚಾರವಾದಿಗಳ ಹತ್ಯೆಗೆ ಪೂರಕವಾದ ವಾತಾವರಣವನು ಸೃಷ್ಟಿಸುತ್ತಿದ್ದಾರೆ. ಪರೋಕ್ಷವಾಗಿ ಹತ್ಯೆಗೆ ಕಾರಣರಾಗಿದ್ದಾರೆ. ಇಂತಹ ಅಮಾನವೀಯ ನಡುವಳಿಕೆಗಳನ್ನು ವೇದಿಕೆಯು ಖಂಡಿಸುತ್ತದೆ. ಇಂತಹ ಮನಸ್ಥಿತಿಯನ್ನು ಇಲ್ಲವಾಗಿಸಲು ಕಾರ್ಯಯೋಜನೆಯನ್ನು ಹಾಕಿಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next