ದೇವನಹಳ್ಳಿ: ಮಳೆಯ ಅಭಾವ ಹಾಗೂ ಬೆಲೆ ಏರಿಕೆಯ ನಡುವೆಯೂ ಗೌರಿ ಗಣೇಶ ಹಬ್ಬಕ್ಕೆ ಖರೀದಿ ಬರಾಟೆ ಜೋರಾಗಿದ್ದು, ಮಾರುಕಟೆಯಲ್ಲಿ ಜನರು ಹೂ, ಹಣ್ಣು ತರಕಾರಿಗಳನ್ನು ಕೊಳ್ಳುತ್ತಿದ್ದಾರೆ. ಬರಗಾಲ ಇದ್ದರೂ ಜಿಲ್ಲೆಯಲ್ಲಿ ಮಾತ್ರ ಹಬ್ಬದ ಸಂಭ್ರಮಕ್ಕೆ ಯಾವುದೇ ಅಡ್ಡಿ ಇಲ್ಲದೆ ಖರೀದಿ ಭರಾಟೆ ಜೋರಾಗಿ ಸಾಗಿದೆ.
ಹಲವು ದಿನಗಳ ಹಿಂದೆ ಉಂಟಾದ ಮಹಾ ಮಳೆಗೆ ಇಡೀ ಉತ್ತರ ತತ್ತರಿಸಿದರೆ, ಇತ್ತ ಬಯಲು ಸೀಮೆ ಜಿಲ್ಲೆಗಳಲ್ಲಿ ಮಳೆ ಕಾಣದೆ ಹನಿ ನೀರಿಗಾಗಿ ಪರದಾಡುವಂತಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಗಣೇಶ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟುತ್ತಿದೆ. ಸತತ 6-7ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆ, ಮಳೆ ಕೊರತೆಯಿಂದ ಕೃಷಿ ಉತ್ಪಾದನೆಯಲ್ಲಿಯೂ ಕುಂಠಿತವಾಗಿ ಪ್ರಸಕ್ತ ವರ್ಷವೂ ಸಹ ಜಿಲ್ಲೆಯಲ್ಲಿ ಬರಗಾಲ ಎದುರಾಗಿದೆ.
ಮಣ್ಣನ ಮೂರ್ತಿಗೆ ಬೇಡಿಕೆ: ಪ್ಲಾಸ್ಟರ್-ಆಫ್-ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿ ನಿಷೇಧ ಮಾಡಲಾಗಿದ್ದು, ಮಣ್ಣಿನ ಗಣೇಶ ಮೂರ್ತಿಗೆ ಬೇಡಿಕೆ ಹೆಚ್ಚಾಗಿದ್ದು, ಕನಿಷ್ಠ 30ರೂ. ಯಿಂದ 25 ಸಾವಿರದ ವರೆಗೆ ಮೂರ್ತಿಗಳ ಮೂರ್ತಿಗಳು ಮಾರಾಟವಾಗುತ್ತಿವೆ. ಪ್ರತಿ ಹಳ್ಳಿ ಮತ್ತು ನಗರದ ಪ್ರತಿ ಬೀದಿ ಬೀದಿಗಳಲ್ಲಿ ವ್ಯಾಪಾರ ಜೋರಾಗಿದೆ.
ಹೂ, ತರಕಾರಿ ದುಬಾರಿ: ಸುತ್ತಲಿನ ಹಳ್ಳಿ ರೈತರು ಮಾವಿನಸೊಪ್ಪು, ಬಾಳೆದಿಂಡು, ಹೂ, ಹಣ್ಣುಗಳನ್ನು ತಂದು ಹಳೇ ಬಸ್ ನಿಲ್ದಾಣ, ಬಜಾರ್ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.ವ್ಯಾಪಾರಿಗಳು ದುಬಾರಿ ಬೆಲೆಗೆ ಪೂಜಾ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದರು, ಜನ ಬೆಲೆ ಏರಿಕೆ ಬಗ್ಗೆ ಕಿವಿಗೊಡದೆ ಖರೀದಿಸುತ್ತಿದ್ದಾರೆ. ಮಳೆ ಕೊರತೆಯಿಂದ ಹೂ-ಹಣ್ಣುಗಳು ಬೆಲೆ ಗಗನಕ್ಕೆ ಏರಿದೆ.
ಆದರೂ ಹಬ್ಬ ಆಚರಿಸಬೇಕಾಗಿರುವುದರಿಂದ ಗ್ರಾಹಕರು ಅನಿವಾರ್ಯವಾಗಿ ಖರೀದಿಸುತ್ತಿದ್ದಾರೆ. ಪೂರ್ವಜರ ಕಾಲದಿಂದಲೂ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದೇವೆ. ವಸ್ತುಗಳ ಬೆಲೆ ಏರಿಕೆಯಾಗಿವೆ ಎಂಬ ಕಾರಣಕ್ಕೆ ಹಬ್ಬ ಆಚರಣೆ ಮಾಡದಿರಲು ಸಾಧ್ಯವಿಲ್ಲ, ನಮ್ಮ ಆರ್ಥಿಕ ಶಕ್ತಿಯನುಗುಣವಾಗಿ ಆಚರಿಸುತ್ತಿದ್ದೇವೆಂದು ಸಾರ್ವಜನಿಕರು ಹೇಳುತ್ತಾರೆ.
ಹೂ, ಹಣ್ಣು ಗಳ ದರ (ಕೆ.ಜಿ ದರ): ಕನಕಂಬರ 1200 ರೂ, ಮಲ್ಲಿಗೆ-ಕಾಕಡ 800 ರೂ, ಕರಿಷ್ಮ ಗುಲಾಬಿ 160-200 ರೂ, ಸೇವಂತಿಗೆ 200 ರೂ, ಚೆಂಡು ಹೂ 40 ರೂ, ಸಂಪಿಗೆ 300 ರೂ, ಬಟನ್ಸ್ 160ರೂ, ಯಾಲಕ್ಕಿ ಬಾಳೆಹಣ್ಣು 40ರೂ, ಪಚ್ಚಬಾಳೆ 45ರೂ, ಸೀಬೆಹಣ್ಣು 80 ರೂ, ಸಪೋಟ 54 ರೂ, ಅನಾನಸ್ 60 ರೂ, ಕಿತ್ತಲೆ ಹಣ್ಣು 72 ರೂ, ಮೊಸಂಬಿ 69 ರೂ, ಸೇಬು 160-180ರೂ,
ಗಣೇಶ ಮೂರ್ತಿ ವ್ಯಾಪಾರ ಕಳೆದ ವರ್ಷಕ್ಕೆ ಹೊಲಿಸಿದರೆ ಕಡಿಮೆಯಾಗಿದೆ. ಪ್ಲಾಸ್ಟರ್‌ಆಫ್‌ಪ್ಯಾರೀಸ್ ಮೂರ್ತಿ ನಿಷೇಧ ಮಾಡಿರುವುದರಿಂದ ಜನರು ಮಣ್ಣಿನ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ.
-ಗೋಪಾಲ್, ಮೂರ್ತಿ ಮಾರಾಟಗಾರ