ಸವಣೂರು: ಪುತ್ತೂರು ತಾ| ಪಾಲ್ತಾಡಿ ಗ್ರಾಮ ಹಾಗೂ ಸುಳ್ಯ ತಾ| ನ ಪೆರುವಾಜೆ ಗ್ರಾಮವನ್ನು ಜೋಡಿಸುವ ಗೌರಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಏಕೈಕ ಸೇತುವೆಯೊಂದು ತೀರಾ ಶಿಥಿಲಾವಸ್ಥೆಗೆ ತಲುಪಿದ್ದು, ಕುಸಿಯುವ ಹಂತಕ್ಕೆ ಬಂದಿದ್ದು, ಈ ಭಾಗದ ಜನರು ಸಂಪರ್ಕ ಕಡಿತದ ಭೀತಿ ಎದುರಿಸುತ್ತಿದ್ದಾರೆ. ಸೇತುವೆಯ ಪಿಲ್ಲರ್ ಶಿಥಿಲಾವಸ್ಥೆಗೆ ತಲುಪಿದ್ದು, ಜನರು ಭೀತಿಯಿಂದಲೇ ಸಾಗ ಬೇಕಾದ ಪರಿಸ್ಥಿತಿಯಿದೆ.
ಅಪಾಯಕಾರಿ
ಸೇತುವೆಯ ಎರಡೂ ಬದಿಯಲ್ಲೂ ಸರಿಯಾದ ತಡೆಗೋಡೆ ಇಲ್ಲದೇ ಇರುವುದರಿಂದ ಮಳೆಗಾಲದಲ್ಲಿ ವಾಹನ ಸವಾರರಿಗೆ, ಪುಟ್ಟ ಮಕ್ಕಳಿಗೆ ಅಪಾಯಕಾರಿ ಸ್ಥಿತಿಯನ್ನು ತಂದೊಡ್ಡಿದೆ. ಮಳೆಗಾಲದಲ್ಲಿ ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಸ್ವಲ್ಪ ಎಡವಟ್ಟಾದರೂ ಜೀವಕ್ಕೆ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿದೆ.
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಇಲ್ಲಿ ಸುಮಾರು 25 ವರ್ಷಗಳ ಹಿಂದೆ ಜನರ ಬೇಡಿಕೆಯಂತೆ ಇಲ್ಲಿ ಕಿರು ಸೇತುವೆಯೊಂದನ್ನು ನಿರ್ಮಿಸಲಾಗಿತ್ತು. ಗುಣಮಟ್ಟದ ಕೊರತೆ, ನೀರಿನ ಪ್ರಮಾಣ ಹೆಚ್ಚಳದಿಂದ ಈ ಸೇತುವೆ ಈಗ ಕುಸಿಯುವ ಹಂತಕ್ಕೆ ಬಂದು ತಲುಪಿದೆ.
ಇದು ಕಿರು ಸೇತುವೆಯಾದ ಕಾರಣ ಘನ ವಾಹನಗಳು ಹೋಗುವಂತಿಲ್ಲ. ಈ ಸೇತುವೆ ಕುಸಿದು ಸಂಪರ್ಕ ಕಡಿತವಾದರೆ ಪಾಲ್ತಾಡಿ ಭಾಗದಿಂದ ಸವಣೂರು, ಕಾಣಿಯೂರು, ಪೆರುವಾಜೆಗೆ ಹೋಗಲು ಪುತ್ತೂರು ಅಥವಾ ಬೆಳ್ಳಾರೆ ಮೂಲಕ ಸುತ್ತಿ ಬಳಸಿ ಹೋಗಬೇಕಾದ ಪರಿಸ್ಥಿತಿ ಬರಲಿದೆ.
ಈ ಸೇತುವೆ ದಾಟಿ ಮಕ್ಕಳು ಚೆನ್ನಾವರ ಕಿ.ಪ್ರಾ. ಶಾಲೆ, ಮುಕ್ಕೂರು ಹಿ.ಪ್ರಾ. ಶಾಲೆ, ಸವಣೂರು, ಪೆರುವಾಜೆ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಅಪಾಯ ತಂದೊಡ್ಡಬಹುದು ಎಂಬುದನ್ನು ಊಹಿಸಲು ಅಸಾಧ್ಯ.
ಈ ಬಾರಿ ನಿರ್ಮಾಣ
ಈ ಬಾರಿ ಖಂಡಿತವಾಗಿಯೂ ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದೆ. ಶಾಸಕರು ಭರವಸೆ ನೀಡಿದ್ದಾರೆ. ಶಾಸಕ ಅಂಗಾರರು ನೀಡಿದ ಭರವಸೆ ಈಡೇರುವ ಆಶಯ ನಮ್ಮದು.
–
ಧೀರಜ್ ರೈ ಚೆನ್ನಾವರ
ಅಭ್ಯುದಯ ಯುವಕ ಮಂಡಲದ ಕಾರ್ಯದರ್ಶಿ
ಪ್ರವೀಣ್ ಚೆನ್ನಾವರ