Advertisement

ಗೌರಿ ಹತ್ಯೆ: 3 ಬಾರಿ ದ.ಕ.ಕ್ಕೆ ಬಂದ ಎಸ್‌ಐಟಿ

11:46 AM Oct 07, 2017 | Team Udayavani |

ಮಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣ ಕುರಿ ತಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಎಸ್‌ಐಟಿ ಸನಾತನ ಸಂಸ್ಥೆಯ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಇದರ ಜಾಡು ಹಿಡಿದು ಪೊಲೀಸರು ಮೂರು ಬಾರಿ ದಕ್ಷಿಣ ಕನ್ನಡ ಜಿಲ್ಲೆಗೂ ಬಂದು ಹೋಗಿದ್ದಾರೆ. ಹೀಗಾಗಿ ಇಡೀ ರಾಜ್ಯವನ್ನು ಬೆಚ್ಚಿ ಬೀಳಿ ಸಿದ್ದ ಗೌರಿ ಲಂಕೇಶ್‌ ಹತ್ಯೆ ಪ್ರಕ ರಣದ ಹಿಂದೆ ದಕ್ಷಿಣ ಕನ್ನಡದ ನಂಟು ಇದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. 

Advertisement

ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡದ ಪೊಲೀಸರು ಜಿಲ್ಲೆಯ ಪುತ್ತೂರು ತಾಲೂಕು ಕಡಬ ಪೊಲೀಸ್‌ ಠಾಣೆಗೆ ಇತ್ತೀಚೆಗೆ 3 ಬಾರಿ ಬಂದು ಮಾಹಿತಿ ಕಲೆ ಹಾಕಿದ್ದಾರೆ.  ಗಮನಾರ್ಹ ಸಂಗತಿ ಎಂದರೆ ಪ್ರಸ್ತುತ ಭೂಗತ ರಾಗಿರುವ ಮಾಲೆಗಾಂವ್‌ ಸ್ಫೋಟ ಪ್ರಕರಣದ ಶಂಕಿತ ಐವರು ಆರೋಪಿ ಗಳ ಪಟ್ಟಿಯಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಕಡಬ ಸಮೀಪದ ನೂಜಿ ಬಾಳ್ತಿಲದ ಜಯ ಪ್ರಕಾಶ್‌ ಯಾನೆ ಅಣ್ಣ ಎಂಬ ವ್ಯಕ್ತಿಯ ಹೆಸರು ಇತ್ತು. ಆಗ ಕೂಡ ಪೊಲೀಸರು ಕಡಬಕ್ಕೆ ಬಂದು ಈತನ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಆದರೆ ಆತ ಎಲ್ಲಿದ್ದಾನೆಂದು ತಿಳಿದಿಲ್ಲ. ಈಗ ಗೌರಿ ಹತ್ಯೆ ಪ್ರಕರಣದಲ್ಲಿಯೂ ಜಯ ಪ್ರಕಾಶ್‌ ಕೈವಾಡ ಇರುವ ಬಗ್ಗೆ ಪೊಲೀಸರಿಗೆ ಅನುಮಾನ ಇದ್ದು, ಈ ಕಾರಣಕ್ಕೆ ಎಸ್‌ಐಟಿ ಅಧಿಕಾರಿ ಗಳು ಬರೋಬ್ಬರಿ ಮೂರು ಬಾರಿ ಕಡಬ ಪೊಲೀಸ್‌ ಠಾಣೆಗೆ ಬಂದು ಹೋಗಿದ್ದಾರೆ. ಆ ಮೂಲಕ ನಾಪತ್ತೆಯಾಗಿರುವ ಜಯ ಪ್ರಕಾಶ್‌ ವ್ಯಕ್ತಿಯ ಬಗ್ಗೆ ಸುಳಿವು ಪಡೆಯಲು ಪ್ರಯತ್ನಿಸಿದ್ದಾರೆ. 

ಜಯಪ್ರಕಾಶ್‌ ಸಹಿತ ಐವರ ಮೇಲೆ ಶಂಕೆ 
ನಾಪತ್ತೆಯಾಗಿರುವ ಕೋಲ್ಹಾಪುರದ ಪ್ರವೀಣ್‌ ಲಿಮ್ಕರ್‌ (34), ದಕ್ಷಿಣ ಕನ್ನಡ ಜಿಲ್ಲೆ ಕಡಬದ ಜಯ ಪ್ರಕಾಶ್‌ ಯಾನೆ ಅಣ್ಣ (45), ಪೂನಾದ ಸಾರಂಗ್‌ ಆಕೋಲ್ಕರ್‌ (38), ಸಾಂಗ್ಲಿಯ ರುದ್ರಾ ಪಾಟಿಲ್‌ (37), ಸತಾರಾದ ವಿನಯ್‌ ಪವಾರ್‌ (32) ಅವರು 2009ರಲ್ಲಿ ಗೋವಾದ ಮಾಲೆಗಾಂವ್‌ನಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದ ಶಂಕಿತ ಆರೋಪಿಗಳಾಗಿದ್ದು, ಈ ಐವರ ತಂಡವೇ ಗೌರಿ ಹತ್ಯೆಯಲ್ಲೂ ಭಾಗಿಯಾಗಿರ ಬೇಕೆಂಬ ಶಂಕೆಯನ್ನು ಎಸ್‌ಐಟಿ ವ್ಯಕ್ತಪಡಿಸುತ್ತಿದೆ.

ರುದ್ರಾ ಪಾಟಿಲ್‌, ಸಾರಂಗ್‌ ಆಕೋಲ್ಕರ್‌ ಮತ್ತು ವಿನಯ್‌ ಪವಾರ್‌ ಅವರು 2013ರ ಆಗಸ್ಟ್‌ 20ರಂದು ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ನಡೆದ ವಿಚಾರವಾದಿ ನರೇಂದ್ರ ದಾಬೋಲ್ಕರ್‌ ಕೊಲೆ ಪ್ರಕರಣದಲ್ಲಿ ಭಾಗಿ ಯಾಗಿದ್ದರು ಎಂಬುದಾಗಿ ಸಿಬಿಐ ತನಿಖೆ ತಿಳಿಸಿತ್ತು. 2015ರ ಫೆ. 16ರಂದು ಪೂನಾದಲ್ಲಿ ನಡೆದ ವಿಚಾರವಾದಿ ಗೋವಿಂದ ಪನ್ಸಾರೆ ಹತ್ಯೆ ಮತ್ತು 2015ರ ಆಗಸ್ಟ್‌ 30ರಂದು ಧಾರವಾಡದಲ್ಲಿ ನಡೆದ ಕನ್ನಡ ವಿದ್ವಾಂಸ ಹಾಗೂ ಸಂಶೋಧಕ ಎಂ.ಎಂ. ಕಲಬುರಗಿ ಕೊಲೆ ಪ್ರಕರಣ ಗಳಲ್ಲಿಯೂ ಈ ಮೂವರು ಪಾಲ್ಗೊಂಡಿರಬೇಕೆಂದು ಈ ಪ್ರಕರಣಗಳ ತನಿಖೆ ನಡೆಸಿದ ಮಹಾರಾಷ್ಟ್ರ ಎಸ್‌ಐಟಿ ಮತ್ತು ಕರ್ನಾಟಕದ ಎಸ್‌ಐಟಿ ತಂಡಗಳು ಶಂಕೆ ವ್ಯಕ್ತಪಡಿಸಿದ್ದವು. 

ಸನಾತನ ಸಂಸ್ಥೆಯ ಕಾರ್ಯಕರ್ತ ರಾಗಿದ್ದ ಲಿಮ್ಕರ್‌, ಅಣ್ಣ, ಅಕೋಲ್ಕರ್‌ ಮತ್ತು ಪಾಟೀಲ್‌ ಅವರು 2009ರ ಅ. 9ರಂದು ನಡೆದ ಮಾಲೆ ಗಾಂವ್‌ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಶಂಕಿಸ ಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು ಈ ನಾಲ್ವರು ಶಂಕಿತರನ್ನು “ಮೋಸ್ಟ್‌ ವಾಂಟೆಡ್‌’ ವ್ಯಕ್ತಿಗಳೆಂದು ಗುರುತಿಸಿ ಅವರ ಪತ್ತೆಗಾಗಿ ರೆಡ್‌ ಕಾರ್ನರ್‌ ನೋಟಿಸು ಜಾರಿ ಮಾಡಿತ್ತು.

Advertisement

ಜಯಪ್ರಕಾಶ್‌ ಯಾನೆ ಅಣ್ಣ ಈ ಹಿಂದೆ ಸನಾತನ ಸಂಸ್ಥೆಯ ವಾಹನ ಚಾಲಕನಾಗಿ ದ.ಕ.ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು. ಎಸ್‌ಐಟಿ ತಂಡ ಕಡಬ ಠಾಣೆಯಲ್ಲಿ ಮಾಹಿತಿ ಕಲೆ ಹಾಕಿದ ಸಂದರ್ಭ ಜಯ ಪ್ರಕಾಶ್‌ ಮನೆಯ ಸದಸ್ಯರ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೆಲವು ವರ್ಷ ಗಳಿಂದ ಜಯ ಪ್ರಕಾಶ್‌ ಸಂಪರ್ಕ ಇಲ್ಲ ಎಂದು ಮನೆ ಮಂದಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  

ಮಾಹಿತಿ ಇಲ್ಲ : ಐಜಿಪಿ ಹೇಮಂತ್‌
ಈ ಬಗ್ಗೆ ಉದಯವಾಣಿಯು ಪಶ್ಚಿಮ ವಲಯದ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರ ಪ್ರತಿಕ್ರಿಯೆಯನ್ನು ಬಯಸಿದಾಗ ಎಸ್‌ಐಟಿ ತಂಡ ಬಂದು ಹೋದ ಬಗ್ಗೆ ತಮಗೇನೂ ಮಾಹಿತಿ ಇಲ್ಲ. ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಯನ್ನು ಎಸ್‌ಐಟಿಯವರೇ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮಾಲೆಗಾಂವ್‌ ಸ್ಫೋಟ: ತನಿಖೆಗೆ ಬಂದಿದ್ದರು
ಮಾಲೆಗಾಂವ್‌ ಸ್ಫೋಟ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಪೊಲೀಸರು ಕಡಬಕ್ಕೆ ಬಂದು ವಿಚಾರಣೆ ನಡೆಸಿದ್ದರು. ಜಯಪ್ರಕಾಶ್‌ ನಾಪತ್ತೆ ಯಾಗಿದ್ದ ಕಾರಣ ಒಂದು ಪೋಸ್ಟರ್‌ನಲ್ಲಿ ಆತನ ಫೋಟೋ ಮತ್ತು ವಿವರ ಗಳನ್ನು ಬರೆದು ಗ್ರಾಮ ಪಂಚಾಯತ್‌ ಕಚೇರಿಯಲ್ಲಿ ಅಂಟಿಸಿ ಹೋಗಿದ್ದರು. 

ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next