Advertisement

ಗೌರಿ, ಕಲಬುರ್ಗಿ ಹಂತಕರೂ ಪತ್ತೆ ವಿಶ್ವಾಸ

09:05 AM Sep 23, 2017 | Team Udayavani |

ಬೆಂಗಳೂರು: “ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದ್ದು, ಗೌರಿ
ಹಂತಕರ ಜತೆಗೆ ಸಂಶೋಧಕ ಎಂ.ಎಂ. ಕಲಬುರ್ಗಿ ಹಂತಕರೂ ಪತ್ತೆಯಾಗುತ್ತಾರೆ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಗೌರಿ ಹತ್ಯೆಯ ಕುರಿತು ಎಡಪಂಥ ಹಾಗೂ ಬಲಪಂಥೀಯ ವಿಚಾರವಾದಿಗಳು ತಮ್ಮದೇ ಆದ ರೀತಿಯಲ್ಲಿ ಆರೋಪ ಮಾಡುತ್ತಿದ್ದಾರೆ. ಆದರೆ, ಎಸ್‌ಐಟಿ ಇದ್ಯಾವುದನ್ನೂ ಪರಿಗಣಿಸುತ್ತಿಲ್ಲ. ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎಸ್‌ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ತನಿಖೆಯಲ್ಲಿ ಸಾಕಷ್ಟು ಮಹತ್ವದ ಮಾಹಿತಿಗಳು ಲಭ್ಯವಾಗಿವೆ’ ಎಂದರು. ಎಸ್‌ಐಟಿಗೆ ಕೇಳಿದಷ್ಟು ಸಿಬ್ಬಂದಿ ನೀಡಲಾಗಿದ್ದು ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುತ್ತಿಲ್ಲ. ಆದಷ್ಟು ಬೇಗ ಗೌರಿ  ಹಂತಕರ ಪತ್ತೆಯಾಗಲಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ದಾಖಲಿ ಕೊಡಲಿ: ರಾಜ್ಯ ಸರ್ಕಾರ ಬಿಜೆಪಿ ನಾಯಕರ ಫೋನ್‌ ಕದ್ದಾಲಿಸುತ್ತಿದೆ ಎನ್ನುವುದಕ್ಕೆ ಸೂಕ್ತ ದಾಖಲೆ ನೀಡಲಿ, ಗಾಳಿ ಸುದ್ದಿಗಳನ್ನೆಲ್ಲ ತನಿಖೆ ಮಾಡಿಸಲು ಆಗುವುದಿಲ್ಲ. ಆರೋಪ ಮಾಡುವವರು ಸೂಕ್ತ ದಾಖಲೆಗಳನ್ನು ನೀಡಿದರೆ ತನಿಖೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು. 

ಯೋಗೇಶ್‌ ಮಾಸ್ಟರ್‌ ಹೇಳಿಕೆ ದಾಖಲು
ಬೆಂಗಳೂರು: ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೇಖಕ ಯೋಗೇಶ್‌ ಮಾಸ್ಟರ್‌ ಅವರಿಂದ ಎಸ್‌ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಕಾರ್ಲಟನ್‌ ಹೌಸ್‌ನಲ್ಲಿರುವ  ಎಸ್‌ಐಟಿ ಕಚೇರಿಗೆ ಶುಕ್ರವಾರ ಆಗಮಿಸಿದ ಯೋಗೇಶ್‌ ಮಾಸ್ಟರ್‌, 2 ಗಂಟೆಗೂ ಅಧಿಕ ಕಾಲ ವಿಚಾರಣೆ ಎದುರಿಸಿದರು. ಎರಡು ವರ್ಷಗಳ ಹಿಂದೆ ತಮ್ಮನ್ನು ಕೊಲೆಗೈಯಲು ಮನೆಗೆ ನುಗ್ಗಿದ್ದ ದುಷ್ಕರ್ಮಿಗಳ ಪೈಕಿ ಒಬ್ಟಾತನ ಮುಖ ಚಹರೆಗೂ, ಕಲಬುರ್ಗಿ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಬಿಡುಗಡೆ ಮಾಡಿದ ರೇಖಾ ಚಿತ್ರಕ್ಕೂ ಹೊಲಿಕೆ ಇದೆ ಎಂದು ಅವರು ಹೇಳಿಕೆ ನೀಡಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಅಲ್ಲದೆ, ಈ ಮೊದಲು ತಮ್ಮನ್ನು ಭೇಟಿಯಾಗಲು ವ್ಯಕ್ತಿಯೊಬ್ಬ ಮನೆ ಬಾಗಿಲಿಗೆ ಬಂದಿದ್ದು, ಆತನ ಹೆಗಲ ಮೇಲೆ ಬ್ಯಾಗ್‌ ಹಾಕಿಕೊಂಡಿದ್ದ. ಆ ಬ್ಯಾಗ್‌ ನಲ್ಲಿ ಮಾರಕಾಸ್ತ್ರದಂತಹ ವಸ್ತು ಕಂಡು ಬಂತು. ಆಗ ಕೂಡಲೇ ತಾವು ಠಾಣೆಗೆ ದೂರು ನೀಡಿದ್ದೆ. ಅದೇ ಮಾದರಿಯಲ್ಲೇ ಗೌರಿ ಮನೆಗೂ ದುಷ್ಕರ್ಮಿಗಳು ಬಂದಿರುವ ಸಾಧ್ಯತೆಯಿದೆ ಎಂದು ಹೇಳಿಕೆ ದಾಖಲಿಸಿದ್ದಾರೆ. ಜತೆಗೆ, ಈ ಹಿಂದೆ ಯೋಗೇಶ್‌ ಮಾಸ್ಟರ್‌ ಮೇಲೆ ನಡೆದಿದ್ದ ಹಲ್ಲೆ, ಮುಖಕ್ಕೆ ಮಸಿ ಬಳಿದ ಪ್ರಕರಣ ಸೇರಿದಂತೆ ಇತರ ವಿಚಾರಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next