ಯಲ್ಲಾಪುರ: ಕಾಮಗಾರಿ ಮುಗಿಸಬೇಕೆನ್ನುವ ತರಾತುರಿಯಲ್ಲಿ ಪಟ್ಟಣದಲ್ಲಿ ನಡೆಯುತ್ತಿರುವ ಹೆದ್ದಾರಿ ಪಕ್ಕದ ಗಟಾರ ಕಾಮಗಾರಿ ಹಲವು-ಅಧ್ವಾನಗಳನ್ನು ಸೃಷ್ಟಿಸುತ್ತಿದೆ.
ಇಲ್ಲಿ ಸಬಗೇರಿಯ ಶಿವಾಜಿಚೌಕ್ ಬಳಿ ರಾಷ್ಟ್ರೀಯ ಹೆದ್ದಾರಿ 63 ಪಕ್ಕ ಗಟಾರ ನಿರ್ಮಿಸಲಾಗುತ್ತಿದೆ. ಕಾಮಗಾರಿಯ ಅಪೂರ್ಣತೆಯಿಂದಾಗಿ ಇಲ್ಲಿ ಮತ್ತು ಹಲವೆಡೆ ನಿತ್ಯ ಓಡಾಡುವ ಪಾದಾಚಾರಿಗಳು, ಸ್ಥಳೀಯ ನಿವಾಸಿಗಳು ಅಪಾಯದಲ್ಲಿಯೇ ಓಡಾಡುವಂತಾಗಿದೆ. ಮನೆಯ ಎದುರುಗಡೆ ಚರಂಡಿ ನಿರ್ಮಿಸಲಾಗುತ್ತಿದೆ. ಚರಂಡಿ ನಿರ್ಮಿಣಕ್ಕೆ ಹೊಂಡ ತೆಗೆಯಲಾಗಿದೆ. ಮಣ್ಣನ್ನು ರಸ್ತೆಯ ಪಕ್ಕ ಹಾಕಲಾಗಿದೆ. ಕೆಲವು ಕಡೆ ಕಾಮಗಾರಿಯನ್ನು ಅರೆ ಬರೆ ನಿರ್ಮಾಣ ಮಾಡಲಾಗಿದೆ. ಸ್ಥಳೀಯ ನಿವಾಸಿಗಳು ತಮ್ಮ ಮನೆಗೆ ಹೋಗಲು ದ್ವಿಚಕ್ರ ವಾಹನ ಒಯ್ಯಲು ಸಾಧ್ಯವಾಗದ ಸ್ಥಿತಿ ಇದೆ. ಚಿಕ್ಕ ಮಕ್ಕಳು ಮನೆಯಿಂದ ಹೊರ ಹೋಗಲು, ಶಾಲೆಗೆ ಓಡಾಡಲು ಅಪಾಯದ ಸ್ಥಿತಿಯನ್ನು ಲೆಕ್ಕಿಸದೇ ಓಡಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಪ.ಪಂಗೆ ಮನವಿ ಸಲ್ಲಿಸಿದರೂ ಅದಕ್ಕೆ ಸ್ಪಂದನೆ ದೊರೆಯುತ್ತಿಲ್ಲ. ಗುತ್ತಿಗೆದಾರರು ಈ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಪಟ್ಟಣದ ರಾಷ್ಟ್ರೀಯ ಹೆದ್ದಾರಿ 63ರ ಪಕ್ಕ ಕೇಂದ್ರ ಸರಕಾರದ ಅನುದಾನದಲ್ಲಿ ಕಳೆದ ಎರಡು ವರ್ಷಗಳಿಂದ ಗಟಾರ ನಿರ್ಮಾಣ ಕಾಮಗಾರಿ ವಿವಿಧ ಕಾರಣಗಳಿಂದ ಕುಂಟುತ್ತ ಸಾಗಿದೆ. ಆದರೆ ಈಗ ಬಹುತೇಕ ಪೂರ್ಣತೆಯತ್ತ ಸಾಗುತ್ತಿದೆ. ಆದರೆ ಅಲ್ಲಲ್ಲಿ ಕಾಮಗಾರಿ ಬಾಕಿಯಿದ್ದು, ಅಪೂರ್ಣ ಸ್ಥಿತಿಯಲ್ಲಿನ ಕಾಮಗಾರಿಯಿಂದಾಗಿ ಸಾರ್ವಜನಿಕರು, ಸ್ಥಳೀಯರು ಪರದಾಡುವಂತಾಗಿದೆ.
ಹದಗೆಟ್ಟ ಮಚ್ಚಿಗಲ್ಲಿ ರಸ್ತೆ
ಯಲ್ಲಾಪುರ: ಪಟ್ಟಣದ ಕೂಡುರಸ್ತೆಯೊಂದು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಚ್ಚಿಗಲ್ಲಿಯಲ್ಲಿ ಕೂಡು ರಸ್ತೆಯೊಂದಕ್ಕೆ ಪೇವರ್ ಅಳವಡಿಸಿ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ಗುಣಮಟ್ಟವಾಗಿಲ್ಲದೇ ಇರುವುದರಿಂದ ರಸ್ತೆಗೆ ಅಳವಡಿಸಿದ ಪೇವರ್ ಎಲ್ಲ ಕಿತ್ತು ಚೆಲ್ಲಾ-ಪಿಲ್ಲಿಯಾಗಿ ಬಿದ್ದಿದೆ. ಕಾಮಗಾರಿಯ ನಂತರ ಗುತ್ತಿಗೆದಾರರು ಇತ್ತ ಮುಖ ಹಾಕಿಲ್ಲ. ಆಡಳಿತವೂ ಮೌನ ವಹಿಸಿದೆ. ನಿರ್ವಹಣೆ ಇಲ್ಲದೇ ರಸ್ತೆಯ ಸ್ಥಿತಿ ಅಯೋಮಯವಾಗಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ.