Advertisement

ಕೈಗಾರಿಕೆಗೂ ಗ್ಯಾಸ್‌ ಪೂರೈಕೆ ಸ್ಥಗಿತ!

04:15 PM Sep 11, 2020 | Suhan S |

ಬಾಗಲಕೋಟೆ: ಕೋವಿಡ್ ಸಂಕಷ್ಟದ ಸಮಯದಲ್ಲಿ ಜಿಲ್ಲೆಯ ಆಸ್ಪತ್ರೆಗಳಿಗೆ ಆಕ್ಸಿಜನ್‌ ಪೂರೈಕೆಯ ಸಮಸ್ಯೆ ಒಂದೆಡೆಯಾದರೆ, ಇದೀಗ ಜಿಲ್ಲೆಯ ಕೈಗಾರಿಕೆಗಳಿಗೂ ಗ್ಯಾಸ್‌ ಪೂರೈಕೆ ನಿಂತು ಹೋಗಿದೆ. ಇದರಿಂದ ಜಿಲ್ಲೆಯ ಬಹುತೇಕ ಕೈಗಾರಿಕೆಗಳು, ಕಳೆದೆರಡು ದಿನಗಳಿಂದ ಸ್ಥಗಿತಗೊಂಡಿವೆ.

Advertisement

ಹೌದು, ಕೋವಿಡ್ ವೈರಸ್‌ನಿಂದ ಜಿಲ್ಲೆಯಲ್ಲಿ ಉಸಿರಾಟ ತೊಂದರೆ ಪ್ರಕರಣ ಹೆಚ್ಚಿವೆ. ಜಿಲ್ಲಾ ಕೋವಿಡ್‌ ಆಸ್ಪತ್ರೆ ಸಹಿತ ಜಿಲ್ಲೆಯಲ್ಲಿ 7 ಖಾಸಗಿ ಆಸ್ಪತ್ರೆಗಳು ಕೋವಿಡ್‌ ಚಿಕಿತ್ಸೆಗಾಗಿಯೇ ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಜತೆಗೆ ಕೋವಿಡ್‌ ಅಲ್ಲದ ಬಹುತೇಕರೂ ನ್ಯೂಮೋನಿಯಾ, ಉಸಿರಾಟ ತೊಂದರೆ, ಹೃದಯ ಸಂಬಂಧಿ ಕಾಯಿಲೆ ಹೀಗೆ ಹಲವು ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್‌, ವೆಂಟಿಲೇಟರ್‌ ಅತ್ಯಗತ್ಯ. ಹೀಗಾಗಿ ಜಿಲ್ಲೆಯಲ್ಲಿ ಆಕ್ಸಿಜನ್‌ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಗೆ ಪೂರೈಕೆಯಾಗುತ್ತಿದ್ದು, ಆಕ್ಸಿಜನ್‌ ಅನ್ನು, ಕೈಗಾರಿಕೆಗಳಿಗೆ ಪೂರೈಸದೇ, ಆಸ್ಪತ್ರೆಗಳಿಗೆ ನೀಡಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೀಗಾಗಿ ಸಧ್ಯ ಜಿಲ್ಲೆಯಲ್ಲಿ ಗ್ಯಾಸ್‌ ಸಮಸ್ಯೆ ಉಲ್ಬಣಗೊಂಡಿದೆ.

ಕೈಗಾರಿಕೆಗೆ ಗ್ಯಾಸ್‌ ಸ್ಥಗಿತ: ಜಿಲ್ಲೆಯ ಐಟಿಐ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು ಹಾಗೂ ಆಟೋಮೊಬೈಲ್‌, ಎಲೆಕ್ಟ್ರಿಕಲ್‌ ಮತ್ತು ಇಲೆಕ್ಟ್ರಾನಿಕ್‌, ಕೆಮಿಕಲ್ಸ, ಸಕ್ಕರೆ ಕಾರ್ಖಾನೆಗಳು ಸೇರಿ ವಿವಿಧ ರೀತಿಯ ಕೈಗಾರಿಕೆಗಳಿಗೆ ಗ್ಯಾಸ್‌ ಅಗತ್ಯವಾಗಿ ಬೇಕೇಬೇಕು. ಇಲ್ಲದಿದ್ದರೆ ಈಕಾರ್ಖಾನೆಗಳನ್ನು ಮುನ್ನಡೆಸುವುದು ಕಷ್ಟ. ಅದರಲ್ಲೂ ರೈತರ ಕೃಷಿ ಉಪಕರಣಗಳಾದ ಟ್ಯಾಕ್ಟರ್‌, ಟ್ರೇಲರ್‌, ಕಬ್ಬಿಣದ ಕುಂಟೆ, ನೇಗಲಿ ಮುಂತಾದ ಸಾಮಗ್ರಿ ದುರಸ್ಥಿಗೆ ವೆಲ್ಡಿಂಗ್‌ ಹೊಡೆಯಲೂ ಗ್ಯಾಸ್‌ ಬೇಕಾಗುತ್ತದೆ. ಈಚಿನ ದಿನಗಳಲ್ಲಿ ಗ್ಯಾಸ್‌ ವೆಲ್ಡಿಂಗ್‌ ಎಲ್ಲೆಡೆ ಕೈಗಾರಿಕೆಗಳಲ್ಲಿಹೇರಳವಾಗಿ ಬಳಸಲಾಗುತ್ತಿದೆ.

ಜಿಲ್ಲೆಯಲ್ಲಿ ಎಂಜಿನಿಯರಿಂಗ್‌ಗೆ ಸಂಬಂಧಿಸಿದ 1 ಕಾರ್ಖಾನೆ ಇದ್ದು, ಅದರಲ್ಲಿ 20 ಜನ ಕೆಲಸ ಮಾಡುತ್ತಿದ್ದಾರೆ. ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಇತರೆ 59 ಕಾರ್ಖಾನೆಗಳಿದ್ದು, 11,835 ಜನ ಪುರುಷರು, 221 ಜನ ಮಹಿಳೆಯರು ಈ ಕೆಲಸವನ್ನೇ ಅವಲಂಬಿಸಿದ್ದಾರೆ. ಅಲ್ಲದೇ ಬಾಗಲಕೋಟೆಯಲ್ಲಿ 2, ಹುನಗುಂದದಲ್ಲಿ 1, ಜಮಖಂಡಿ-2 ಹಾಗೂ ಮುಧೋಳ 1 ಕಡೆ ಕೈಗಾರಿಕೆ ಪ್ರದೇಶಗಳಿದ್ದು, ಇಲ್ಲಿ ಒಟ್ಟು 72 ವಿವಿಧ ಕೈಗಾರಿಕೆ ಶೆಡ್‌ಗಳಿವೆ.ಜಿಲ್ಲೆಯಾದ್ಯಂತ 8642 ವಿವಿಧ ತೆರನಾದ ಸಣ್ಣ ಕೈಗಾರಿಕೆಗಳಿದ್ದು, 43,412 ಜನ ಉದ್ಯೋಗ ಮಾಡುತ್ತಿದ್ದಾರೆ.

ಮುಖ್ಯವಾಗಿ ಗ್ಯಾಸ್‌ ಬಳಕೆ ಮಾಡುವ ಆಟೋಮೊಬೈಲ್‌ಗ‌ಳು ಜಿಲ್ಲೆಯಲ್ಲಿ 184 ಇದ್ದು, 1542 ಜನ ಕೆಲಸಗಾರರಿದ್ದಾರೆ. ಎಲೆಕ್ಟ್ರಿಕಲ್ಸ ಮತ್ತು ಇಲೆಕ್ಟ್ರಾನಿಕ್ಸಕೈಗಾರಿಕೆಗಳು 889 ಇದ್ದು, ಇಲ್ಲಿ 6258 ಜನ ಕೆಲಸದಲ್ಲಿದ್ದಾರೆ. ಇವುಗಳಲ್ಲಿ ಪ್ರತಿಯೊಂದೂ ಕಾರ್ಯಕ್ಕೂ ಗ್ಯಾಸ್‌ ಬಳಕೆ ಮಾಡಲಾಗುತ್ತದೆ.

Advertisement

ಸಕ್ಕರೆ ಕಾರ್ಖಾನೆಗೂ ಗ್ಯಾಸ್‌ ಅಗತ್ಯ: ಜಿಲ್ಲೆಯಲ್ಲಿ 14 ಸಕ್ಕರೆ ಕಾರ್ಖಾನೆಗಳಿದ್ದು, ಅದರಲ್ಲಿ ಮೂರು ಕಾರ್ಖಾನೆಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿವೆ. ಇನ್ನು ಕೆರಕಲಮಟ್ಟಿಯಲ್ಲಿ ಕಾರ್ತಿಕ್‌ ಅಗ್ರೋ ಕೆಮಿಕಲ್ಸ್‌ ಕಾರ್ಖಾನೆಯೂ ಇದೆ. ಇದೀಗ ಬಾದಾಮಿಯ ಬಾದಾಮಿ ಶುಗರ್ ಅನ್ನು ಮುರುಗೇಶ ನಿರಾಣಿಅವರ ಒಡೆತನಕ್ಕೆ ಬಂದಿದ್ದು, ಈ ವರ್ಷದಿಂದ ಕಾರ್ಖಾನೆ ಆರಂಭಿಸಲು ತಯಾರಿ ಮಾಡ ಲಾಗುತ್ತಿದೆ. ಯಂತ್ರಗಳ ರಿವೈಂಡಿಂಗ್‌, ವೆಲ್ಡಿಂಗ್‌ ಸಹಿತ ಹಲವು ದುರಸ್ಥಿ ಕಾರ್ಯವೂ ನಡೆಯುತ್ತಿದೆ. ಜತೆಗೆ ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮು ಆರಂಭಗೊಳ್ಳಲಿದ್ದು, ಕಬ್ಬು ಕಟಾವು, ಕಬ್ಬು ಪೂರೈಕೆ ಹೀಗೆ ವಿವಿಧ ಕಾರ್ಯಕ್ಕೆ ಬಳಸುವ ಟ್ಯಾಕ್ಟರ್‌ ಸಹಿತ ವಿವಿಧ ಯಂತ್ರಗಳನ್ನು ಈಗ ಅವುಗಳ ದುರಸ್ತಿಕಾರ್ಯ ಮಾಡಿಸಲೇಬೇಕಾಗುತ್ತದೆ. ಲಾಕ್‌ಡೌನ್‌ ವೇಳೆ ಸಣ್ಣ ಕೈಗಾರಿಕೆಗಳು ಬಂದ್‌ ಆಗಿದ್ದರಿಂದ ಈಗ ಏಕಕಾಲಕ್ಕೆ ಆರಂಭಗೊಂಡಿವೆ. ಹೀಗಾಗಿ ರೈತರು, ಟ್ಯಾಕ್ಟರ್‌ ಸಹಿತ ವಿವಿಧ ಉಪಕರಣಗಳ ದುರಸ್ತಿಗೆ ಇಲೆಕ್ಟ್ರಿಕಲ್‌ ಅಂಗಡಿಗೆ ಬರುತ್ತಿದ್ದಾರೆ. ಗ್ಯಾಸ್‌ ಕೊರತೆಯಿಂದ ಅಂಡಿಗಳು ಬಂದ್‌ ಆಗಿರುವುದರಿಂದ ರೈತರಿಗೂ ಸಮಸ್ಯೆ ಆಗಿದೆ. ಒಟ್ಟಾರೆ, ಗ್ಯಾಸ್‌ ಸಮಸ್ಯೆಯಿಂದಜಿಲ್ಲೆಯ ಸಣ್ಣ ಕೈಗಾರಿಕೋದ್ಯಮಕ್ಕೂ ಈಗಹೊಡೆತ ಬಿದ್ದಿದೆ. ಕೊರೊನಾ ವೇಳೆಯೇ ಸಾಕಷ್ಟು ಸಮಸ್ಯೆ ಅನುಭವಿಸಿದ್ದ ಈ ಕೈಗಾರಿಕೆಗಳು, ಇದೀಗ ಮತ್ತೂಂದು ಸಂಕಷ್ಟಕ್ಕೆ ಸಿಲುಕಿವೆ.

ಜಿಲ್ಲೆಯಲ್ಲಿ 14 ಸಕ್ಕರೆ ಕಾರ್ಖಾನೆಗಳಿದ್ದು, ಬಹುತೇಕ ಅಕ್ಟೋಬರ್‌ನಲ್ಲಿಆರಂಭವಾಗುತ್ತವೆ.ಹೀಗಾಗಿ ಸಾವಿರಾರು ರೈತರು ತಮ್ಮ ಟ್ರ್ಯಾಕ್ಟರ್‌, ಟ್ರೇಲರ್‌ದುರಸ್ತಿ ವಿವಿಧ ಕೃಷಿ ಉಪಕರಣ ದುರಸ್ತಿಗೆ ಸಣ್ಣ ಕೈಗಾರಿಕೆಗಳನ್ನೇ ಅವಲಂಬಿಸುತ್ತಾರೆ. ಜಿಲ್ಲೆಯ ಯಾವುದೇ ಕೈಗಾರಿಕೆಗಳಿಗೆ ಗ್ಯಾಸ್‌ ಪೂರೈಕೆ ಮಾಡುತ್ತಿಲ್ಲ. ಗ್ಯಾಸ್‌ ಪೂರೈಕೆದಾರರನ್ನು ಕೇಳಿದರೆ, ಡಿಸಿಯವರು ಕೊಡಬೇಡಿ ಎಂದು ಹೇಳಿದ್ದಾರೆ, ಅವರನ್ನೇ ಕೇಳಿ ಎನ್ನುತ್ತಿದ್ದಾರೆ. ಇದರಿಂದ ಸಣ್ಣ ಕೈಗಾರಿಕೆಗಳು ಹಾಗೂ ಅದನ್ನೇ ಅವಲಂಬಿಸಿದಕಾರ್ಮಿಕರು, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಗೆ ಅಗತ್ಯವಾದ ಗ್ಯಾಸ್‌ ಪೂರೈಕೆಗೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು.- ಪ್ರಕಾಶ ಅಂತರಗೊಂಡ, ಕೃಷಿ ಉಪಕರಣ ತಯಾರಿಕೆದಾರರು, ಬೀಳಗಿ ಕ್ರಾಸ್‌

ಜಿಲ್ಲೆಗೆ ನಿರೀಕ್ಷಿತ ಮಟ್ಟದಲ್ಲಿ ಆಕ್ಸಿಜನ್‌ ಪೂರೈಕೆ ಆಗಿಲ್ಲ. ಇದರಿಂದ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರು, ಇತರೇ ರೋಗಿಗಳಿಗೆ ಸಮಸ್ಯೆ ಉಂಟಾಗಿತ್ತು. ಜನರ ಜೀವ ಉಳಿಸುವುದು ಮುಖ್ಯ. ಹೀಗಾಗಿ ಕೆಲ ದಿನಗಳ ವರೆಗೆ ಕೈಗಾರಿಕೆಗಳಿಗೆ ಆಕ್ಸಿಜನ್‌ ಗ್ಯಾಸ್‌ ಪೂರೈಸದಂತೆ ಸೂಚನೆ ನೀಡಲಾಗಿದೆ. – ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ, ಜಿಲ್ಲಾಧಿಕಾರಿ

 

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next